ಮೂಡಿಗೆರೆ: ತಾಲ್ಲೂಕಿನಾದ್ಯಂತ ಒಂದು ತಿಂಗಳಿನಿಂದ ಮಳೆ ಕಣ್ಮರೆಯಾಗಿದ್ದು ಬರದ ಛಾಯೆ ಮೂಡಿದೆ. ಜುಲೈನಲ್ಲಿ ಹದಿನೈದು ದಿನಗಳ ಕಾಲ ಸುರಿದ ಮಳೆಯಿಂದ ನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆಯಾಗಿತ್ತು. ಆದರೆ, ನಂತರ ಒಂದು ತಿಂಗಳಿನಿಂದ ಬೇಸಿಗೆಯಂಥ ಸುಡು ಬಿಸಿಲಿನ ವಾತಾರಣ ಇರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಹಳ್ಳ ತೊರೆಗಳುಬತ್ತಿ ಹೋಗಿವೆ. ಕೆರೆಗಳಲ್ಲೂ ನೀರು ಖಾಲಿಯಾಗುತ್ತಿದೆ. ಆಗಸ್ಟ್‌ನಲ್ಲೇ ಈ ಸ್ಥಿತಿಯಾದರೆ ಮುಂದೇನು ಎಂಬ ಚಿಂತೆ ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ.
ತಾಲ್ಲೂಕಿನಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನಿಂದ ಜಲ ಮೂಲಗಳು ಬತ್ತಿ ಹೋಗಿರುವುದರಿಂದ ಕುಡಿಯುವ ನೀರಿಗೂ ಸಂಚಾಕಾರ ಎದುರಾಗಿದೆ. ಮಳೆಯನ್ನೇ ನಂಬಿ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದು, ಸಬ್ಬೇನಹಳ್ಳಿ, ಹೊರಟ್ಟಿ, ಬಡವನದಿಣ್ಣೆ, ಭೈರಿಗದ್ದೆ ಸೇರಿದಂತೆ ಹಲವ ಪ್ರದೇಶಗಳಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗಳನ್ನು ಪಾಳು ಬಿಡಲಾಗಿದೆ. ಕೆಲವೆಡೆ ಅಗಡಿಗಳಲ್ಲಿಯೇ ಸಸಿಮಡಿಗಳು ಉಳಿದಿದ್ದು, ನಾಟಿ ಕಾರ್ಯವನ್ನೇ ಕೈ ಬಿಡಲಾಗಿದೆ.
ಕಾಳು ಮೆಣಸಿನಲ್ಲಿ ತೆನೆಗಳು ಕಾಣಿಸಿಕೊಳ್ಳುತ್ತಿದ್ದು, ತೆನೆ ಕಟ್ಟುವ ವೇಳೆ ಮಳೆಯಿಲ್ಲದೇ ತೆನೆಗಳು ಕಪ್ಪಾಗಿ ಉದುರತೊಡಗಿವೆ. ಕಾಫಿ ಬಲಿಯುವ ವೇಳೆ ಗೊಬ್ಬರದ ಅಗತ್ಯವಿದ್ದು, ಬಲಿಯುತ್ತಿರುವ ಕಾಫಿಗೆ ಗೊಬ್ಬರ ಹಾಕಲು ಮಳೆಯಿಲ್ಲದೇ ಪರದಾಡುವಂತಾಗಿದೆ.
‘ಈ ವರ್ಷ ವಾಡಿಕೆಗಿಂತ ಶೇ 60ರಷ್ಟು ಕಡಿಮೆ ಮಳೆಯಾಗಿದೆ. ಮಳೆಯಿಲ್ಲದೇ ಭತ್ತ, ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದ ನಿದರ್ಶನಗಳು ಕಡಿಮೆ. ಆದರೆ, ಈ ಬಾರಿ ಆಗಸ್ಟ್‌ನಲ್ಲಿ ಸರಾಸರಿ 10.16 ಸೆಂ.ಮೀಯಷ್ಟೂ ಮಳೆಯಾಗಿಲ್ಲ.
ಬಿಸಿಲಿನಿಂದ ದಿನದಿಂದ ದಿನಕ್ಕೆ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಜಲಚರಗಳ ಜೀವಕ್ಕೂ ಕುತ್ತುಂಟಾಗಿದೆ. ಸರ್ಕಾರ ರೈತರ ನೆರವಿಗೆ ಬರುವುದರೊಂದಿಗೆ, ಭವಿಷ್ಯದಲ್ಲಿ ಮಳೆಯ ಕೊರತೆಯಾಗದಂತೆ ದೀರ್ಘಕಾಲಿನ ಪರಿಸರ ಸಂಬಂಧಿತ ಯೋಜನೆಗಳನ್ನು ತುರ್ತಾಗಿ ಜಾರಿಗೊಳಿಸಬೇಕು’ ಎಂಬುದು ರೈತರ ಅಭಿಪ್ರಾಯವಾಗಿದೆ.
‘ಪಾಳು ಬಿಡದೆ ಬೇರೆ ದಾರಿಯಿಲ್ಲ’
‘ಪ್ರತಿ ವರ್ಷ ಎರಡು ಎಕರೆ ಭತ್ತ ಬೆಳೆಯುತ್ತಿದ್ದೆ. ಈ ಬಾರಿಯೂ ಸಾಲ ಮಾಡಿ ಬೀಜದ ಭತ್ತ ಖರೀದಿಸಿ ಅಗಡಿ ನಿರ್ಮಿಸಿ ಸಸಿಮಡಿಗಳನ್ನು ಮಾಡಿ ಎರಡು ಎಕರೆ ಭತ್ತದ ಗದ್ದೆಗಳನ್ನು ಉಳುಮೆ ಮಾಡಿ ನಾಟಿ ಮಾಡಿದ್ದೆ. ನೀರಿಲ್ಲದೇ ನಾಟಿ ಮಾಡಿದ್ದ ಪೈರು ಒಣಗಿದ್ದು ನಾಟಿ ಮಾಡಿರುವ ಗದ್ದೆಯನ್ನು ಪಾಳು ಬಿಡದೆ ದಾರಿಯಿಲ್ಲ’ ಎಂದು ಬಟವನದಿಣ್ಣೆ ರೈತ ಮಹೇಶ್ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.