ಮಂಗಳವಾರ, ಡಿಸೆಂಬರ್ 1, 2020
22 °C

‘ಎಚ್‌ಐವಿ ಸೋಂಕಿತರಿಗೆ ಸೌಲಭ್ಯ ಕಲ್ಪಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದು ಸಂಕಷ್ಟಕ್ಕೆ ಒಳಗಾಗಿರುವ ಎಚ್‍ಐವಿ ಸೋಂಕಿತ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಫಲಾನುಭವಿಗಳು ಈ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್. ಲತಾ ಸಲಹೆ ನೀಡಿದರು.

ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಚ್‍ಐವಿ ಸೋಂಕಿತ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆ ಒದಗಿಸುವ ಸಭೆ ಹಾಗೂ ಜಿಲ್ಲಾ ಕ್ಷಯರೋಗ ವೇದಿಕೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮಾನವಾಗಿ ಬದುಕುವ ಅವಕಾಶ ಪ್ರತಿಯೊಬ್ಬ ನಾಗರಿಕರಿಗೂ ಇದೆ. ಅದೇ ರೀತಿ ಎಚ್‍ಐವಿ ಸೋಂಕಿತರು ಮುಖ್ಯವಾಹಿನಿಗೆ ಬಂದು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಧನಶ್ರೀ, ಮೈತ್ರಿ ಯೋಜನೆ, ಚೇತನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಜಿಲ್ಲೆಯಲ್ಲಿರುವ ವಸತಿ ಮತ್ತು ನಿವೇಶನರಹಿತ ಸೋಂಕಿತರನ್ನು ಗುರುತಿಸಿ ನಿವೇಶನ ಮತ್ತು ವಸತಿ ಹಂಚಿಕೆ ಮಾಡಬೇಕು ಎಂದು ತಾಲ್ಲೂಕು ವಸತಿ ನೋಡೆಲ್ ಅಧಿಕಾರಿಗಳಿಗೆ ಸೂಚಿಸಿದರು.

ಕ್ಷಯರೋಗಿಗಳಿಗೆ ಸೂಕ್ತ ಉಚಿತ ಚಿಕಿತ್ಸೆ ಜತೆಗೆ ಆಪ್ತ ಸಮಾಲೋಚನೆ ಮೂಲಕ ರೋಗ ನಿವಾರಣೆಗೆ ಒತ್ತು ನೀಡಬೇಕು. ಜಿಲ್ಲೆಯ ವಿವಿಧ ಇಲಾಖೆಯ ಸಹಯೋಗದೊಂದಿಗೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಸೌಲಭ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕ್ಷಯರೋಗ ಬಾರದಂತೆ ತಡೆಯಲು ಜನರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಫಲಾನುಭವಿಗಳಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು