ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರೂರು | ಮರೆಯಾದ ಮಳೆ: ಈರುಳ್ಳಿ ಬೆಳೆಗಾರರಲ್ಲಿ ಆತಂಕ

ಮೊಳಕೆಯೊಡೆಯುತ್ತಿರುವ ಸೂರ್ಯಕಾಂತಿ, ಎಳ್ಳು; ಬೆಳೆ ರಕ್ಷಣೆಗಾಗಿ ಬಾಡಿಗೆ ತೆತ್ತು ನೀರು ಪೂರೈಕೆ
Published 30 ಜೂನ್ 2024, 13:48 IST
Last Updated 30 ಜೂನ್ 2024, 13:48 IST
ಅಕ್ಷರ ಗಾತ್ರ

ಬೀರೂರು: ಮುಂಗಾರು ಪೂರ್ವದಲ್ಲಿ ಲಭಿಸಿದ ಉತ್ತಮ ಮಳೆಯಿಂದ ಉತ್ಸಾಹಗೊಂಡು ರೈತರು ಬಿತ್ತನೆ ಮಾಡಿರುವ ಈರುಳ್ಳಿ, ಸೂರ್ಯಕಾಂತಿ, ಎಳ್ಳು ಮೊದಲಾದ ಬೆಳೆಗಳು  ಸದ್ಯ ಮೊಳಕೆ ಒಡೆಯುತ್ತಿದ್ದು, ಕಳೆದೆರಡು ವಾರದಿಂದ ನಿರೀಕ್ಷಿಸಿದಷ್ಟು ಮಳೆ ಲಭಿಸದೆ ರೈತರು ಆತಂಕಗೊಂಡಿದ್ದಾರೆ. ಮೊಳೆಯೊಡೆಯುತ್ತಿರುವ ಸಮಯದಲ್ಲಿ ಬೆಳೆಗೆ ನೀರು ಬೇಕಾಗಿದ್ದು, ಕೆಲವು ರೈತರು ಬೆಳೆ ಒಣಗುವ ಭಯದಿಂದ ಹಣ ತೆತ್ತು ಕೊಳವೆಬಾವಿ ನೀರು ಪೂರೈಸಲು ಮುಂದಾಗಿದ್ದಾರೆ.

ಬೀರೂರು ಹೋಬಳಿಯಾದ್ಯಂತ ಕೆಲವು ದಿನಗಳಿಂದ  ಮೋಡ ಕವಿದ ವಾತಾವರಣ ಮುಂದುವರಿದಿದೆಯಾದರೂ ಮಳೆಯಾಗುತ್ತಿಲ್ಲ. ಮೇ ತಿಂಗಳಲ್ಲೇ ಸಾಕಷ್ಟು ರೈತರು ಈರುಳ್ಳಿ ಬಿತ್ತನೆ ಮಾಡಿದ್ದು, ಈಗ  ಈರುಳ್ಳಿ ಪೈರು ಮೊಳಕೆಯೊಡೆದು ಒಂದು ತಿಂಗಳ ಬೆಳೆಯಾಗಿದೆ. ಹಲವು ರೈತರು ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಕೆಲವರು ಟೊಮೆಟೊ ಬೆಳೆದಿದ್ದಾರೆ. ಈ ಬೆಳೆಗಳಿಗೆ ನೀರು ಈ ಅತ್ಯವಶ್ಯವಾಗಿ ಬೇಕಾಗಿದೆ. ಮಳೆ ಬಾರದಿರುವುದರಿಂದ ರೈತರು ಏನು ಮಾಡಬೇಕು ಎಂಬುದು ತೋಚದೆ ಚಿಂತೆಗೀಡಾಗಿದ್ದಾರೆ. ಕೊಳವೆ ಬಾವಿ ಸೌಲಭ್ಯ ಇಲ್ಲದ ರೈತರು ಅಕ್ಕಪಕ್ಕದ ಜಮೀನಿನ ಮಾಲೀಕರ ಬಳಿಯಲ್ಲಿ ತಮ್ಮ ಜಮೀನಿಗೆ ನೀರುಣಿಸಲು ಎಕರೆ ಒಂದಕ್ಕೆ ₹4 ಸಾವಿರದವರೆಗೆ ಹಣ ತೆತ್ತು, ತುಂತುರು( ಸ್ಪ್ರಿಂಕ್ಲರ್) ನೀರಾವರಿ ಪದ್ಧತಿ ಮೂಲಕ ಪೈರು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಬೀರೂರು ಹೊರವಲಯದ ಹಿರಿಯಂಗಳ ರಸ್ತೆಯ ಮುದ್ದಾಪುರ ಎರೆ ಬಯಲು ಈರುಳ್ಳಿ, ಕಡಲೆ, ಜೋಳ ಬೆಳೆಗೆ ಮೀಸಲಾಗಿದ್ದು ಮಳೆ ಆಧಾರಿತವಾಗಿರುವ ಇಲ್ಲಿ 330 ಹೆಕ್ಟೇರ್‌ ಪ್ರದೇಶದಲ್ಲಿ  ಈರುಳ್ಳಿ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಈ  ಭಾಗದಲ್ಲಿ ನೀರಿನ ಸೌಲಭ್ಯ ಇಲ್ಲದವರೂ ಅಡಿಕೆ ಕೃಷಿ ಮಾಡಲು ಮುಂದಾಗಿದ್ದಾರೆ. ಈರುಳ್ಳಿ, ಹೆಸರು, ಶೇಂಗಾ, ಉದ್ದು ಸೂರ್ಯಕಾಂತಿ ಬಿತ್ತನೆಯಾಗಿದ್ದು, ಇನ್ನೂ ಕೆಲವು ಕಡೆಗಳಲ್ಲಿ ರಾಗಿ, ಮೆಕ್ಕೆಜೋಳ ಇನ್ನಿತರೆ ಬೆಳೆಗಳನ್ನು ಬಿತ್ತನೆ ಮಾಡಲು ಜಮೀನು ಹಸನು ಮಾಡಿಕೊಂಡು ಕಾದು ಕುಳಿತಿದ್ದಾರೆ. ಅದರೆ ಮಳೆಯ ಸುಳಿವು ಇಲ್ಲದಿರುವುದು ರೈತರನ್ನುನಿರಾಸೆಗೆ ಈಡು ಮಾಡಿದೆ.

ತೋಟಗಾರಿಕೆ ಬೆಳೆಗಳಿಗೆ ಜುಲೈ 15ರವರೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ಅವಕಾಶವಿದೆ. ಬೆಳೆ ಹಾನಿಯಾದರೆ ವಿಮಾ ರಕ್ಷೆ ಪಡೆಯಲು ಸಹಕಾರಿಯಾಗುತ್ತದೆ. ರೈತರು ಇಂತಹ ಯೋಜನೆಗಳ ಸದುಪಯೋಗಪಡಿಸಿಕೊಂಡು ತಮ್ಮ ಬೆಳೆಗೆ ಹಾನಿಯಾದ ಸಂದರ್ಭದಲ್ಲಿ ಪರಿಹಾರ ಪಡೆಯಲು ಅನುಕೂಲವಾಗುತ್ತದೆ ಎನ್ನುತ್ತವೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

‘4 ಎಕರೆ ಜಮೀನಿನನ್ನು ಗುತ್ತಿಗೆಗೆ ಬೇಸಾಯ ಮಾಡುತ್ತಿದ್ದೇನೆ ಎಕರೆಗೆ ₹10 ಸಾವಿರ ವಾರ್ಷಿಕ ಹುಟ್ಟುವಳಿ ನೀಡುತ್ತಿದ್ದೇನೆ. ಸದ್ಯ 4 ಎಕರೆಗೂ ಈರುಳ್ಳಿ ಬಿತ್ತನೆ ಮಾಡಿದ್ದು ಮಳೆಗಾಗಿ ಆಕಾಶ ನೋಡುವಂತಾಗಿದೆ ಬಿತ್ತನೆ ಸಂದರ್ಭದಲ್ಲಿ ಉತ್ತಮವಾಗಿ ಸುರಿದ ಮಳೆ ನಂತರ ನಾಪತ್ತೆಯಾಗಿದೆ. ಒಂದು ಎಕರೆ ಭೂಮಿಯಲ್ಲಿ ಬಿತ್ತನೆಗೆ ಬೇಸಾಯ  ಬಿತ್ತನೆ ಬೀಜ ಗೊಬ್ಬರ ಕೂಲಿ ಕಾರ್ಮಿಕರುಎಲ್ಲ ಸೇರಿ ₹20 ಸಾವಿರಕ್ಕೂ ಹೆಚ್ಚು ಖರ್ಚಾಗಿದೆ. ಈಗಾಗಲೇ ಸಾಕಷ್ಟು ಖರ್ಚು ಮಾಡಿದ್ದು ಬೆಳೆಯನ್ನು ಉಳಿಸಿಕೊಳ್ಳಲು ಬಾಡಿಗೆ ಮೂಲಕ ನೀರು ಪೂರೈಸುತ್ತಿದ್ದೇನೆ’ ಎಂದು ಮುದ್ದಾಪುರ ಎರೆ ಬಯಲಿನ ರೈತ ಹನುಮಂತಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT