ನರಸಿಂಹರಾಜಪುರ: ಹಿಂದೂ ಮಹಾಗಣಪತಿ ಸಮಿತಿಯಿಂದ ಎರಡನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮಹೋತ್ಸವವು ಗುರುವಾರ ನಡೆಯಿತು.
ಸಮಿತಿ ಸದಸ್ಯರು ಕೇಸರಿ ಶಾಲು, ಪೇಟ ಧರಿಸಿ ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಭಗವಾಧ್ವಜಗಳು ರಾರಾಜಿಸಿದವು. ಆಂಜನೇಯ ಸ್ವಾಮಿ ಹಾಗೂ ಶ್ರೀರಾಮಚಂದ್ರನ ಸ್ತಬ್ಧಚಿತ್ರ, ನಾಸಿಕ್ ಡೋಲ್, ಚಂಡೆ, ಮದ್ದಳೆ ಆಕರ್ಷಣೆಯಾಗಿತ್ತು. ಡಿಜೆ ಹಾಡಿಗೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು.
ಪೇಟೆ ಆಂಜನೇಯ ದೇವಸ್ಥಾನದಿಂದ ಭವ್ಯ ಮಂಟಪದಲ್ಲಿ ಗಣಪತಿಯ ವಿಗ್ರಹವನ್ನು ಕುಳ್ಳಿರಿಸಿ ಬಸ್ತಿಮಠದವರೆಗೆ, ನಂತರ ಪ್ರವಾಸಿ ಮಂದಿರವರೆಗೆ ಮೆರವಣಿಗೆ ನಡೆಸಿ ಭದ್ರಾ ಹಿನ್ನೀರಿನಲ್ಲಿ ಜಲಸ್ತಂಭನಗೊಳಿಸಲಾಯಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿಯ ಮುಖಂಡರು ಭಾಗವಹಿಸಿದ್ದರು.