ಬುಧವಾರ, ಆಗಸ್ಟ್ 4, 2021
20 °C
ಲಾಕ್‌ಡೌನ್ ಪರಿಣಾಮ: ಕೃಷಿಕ ಸಹೋದರರಿಗೆ ಲಕ್ಷಾಂತರ ರೂಪಾಯಿ ನಷ್ಟ

ಕಳಸ | ಗದ್ದೆಯಲ್ಲಿ ಉಳಿದ ಟನ್‍ಗಟ್ಟಲೆ ಶುಂಠಿ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ಎರಡು ತಿಂಗಳು ಲಾಕ್‍ಡೌನ್‌ನಿಂದಾಗಿ ಕಳಸ ತಾಲ್ಲೂಕಿನ ಮರಸಣಿಗೆ ಗ್ರಾಮದಲ್ಲಿ ಶುಂಠಿ ಕೃಷಿ ಮಾಡಿದ ಸಹೋದರರಿಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮರಸಣಿಗೆಯ ಹಿಲಾರಿ ರಾಡ್ರಿಗಸ್ ಮತ್ತು ಫೆಲಿಕ್ಸ್ ರಾಡ್ರಿಗಸ್ ಎಂಬ ಸಹೋದರರು 15 ವರ್ಷಗಳಿಂದಲೂ ಶುಂಠಿ ಕೃಷಿಯಲ್ಲಿ ಎತ್ತಿದ ಕೈ. ಅತಿಯಾದ ಮಳೆಯ ನಡುವೆಯೂ ಹರಸಾಹಸ ಮಾಡಿ ಗುಣಮಟ್ಟದ ಶುಂಠಿ ಬೆಳೆಯುವ ಕಲೆ ಅವರಿಗೆ ಕರಗತ. ಬೆಲೆ ಏನೇ ಇರಲಿ ಪ್ರತಿ ವರ್ಷವೂ ಛಲ ಬಿಡದೆ ಶುಂಠಿ ಕೃಷಿ ಮಾಡುತ್ತಾ, ಲಾಭ ನಷ್ಟ ಎರಡನ್ನೂ ಕಂಡವರು.

ಈ ಬಾರಿಯೂ ತಮ್ಮ ಸ್ವಂತದ ಗದ್ದೆ ಮತ್ತು ಗುತ್ತಿಗೆ ಗದ್ದೆಯಲ್ಲಿ 5 ಎಕರೆಯಲ್ಲಿ ಶುಂಠಿ ಕೃಷಿ ಮಾಡಿದ್ದರು. ಉತ್ತಮ ಫಸಲೂ ಬಂದಿದ್ದು, ಸುಮಾರು 1,200 ಮೂಟೆ ಶುಂಠಿ ಬೆಳೆ ಕಟಾವು ಮಾಡುವ ಭರವಸೆ ಹೊಂದಿದ್ದರು. ಆದರೆ, ಮಾರ್ಚ್, ಏಪ್ರಿಲ್ ತಿಂಗಳ ಲಾಕ್‍ಡೌನ್ ಕಾರಣಕ್ಕೆ ಅವರ ಶುಂಠಿಗೆ ಬೇಡಿಕೆಯೇ ಬರದೆ ಮಾರಾಟ ಸಾಧ್ಯವಾಗಲೇ ಇಲ್ಲ.

‘ನಾವು ಸಾವಯವ ಗೊಬ್ಬರ ಬಳಸಿ ಗುಣಮಟ್ಟದ ಶುಂಠಿ ಬೆಳೆಯುತ್ತಿದ್ದೇವೆ. ಒಂದೊಂದು ಬುಡದಲ್ಲಿ ಒಂದೂವರೆಯಿಂದ ಎರಡು ಕೆ.ಜಿ. ಬೆಳೆ ಬಂದಿದೆ. ಆದರೆ ಈ ವರ್ಷ ಯಾರೂ ಶುಂಠಿ ಕೊಳ್ಳುವವರೇ ಇಲ್ಲದೆ ಕಂಗಾಲಾಗಿದ್ದೇವೆ. ಗದ್ದೆಯಲ್ಲಿ ಬಿಟ್ಟರೆ ಕೊಳೆತು ಹಾಳಾಗುವ ಅಪಾಯ ಇದೆ. ಜೊತೆಗೆ ಗುತ್ತಿಗೆ ಗದ್ದೆಯನ್ನು ಮಾಲೀಕರಿಗೆ ಬಿಟ್ಟುಕೊಡಬೇಕಾಗಿದೆ’ ಎಂದು ಹಿಲಾರಿ ರಾಡ್ರಿಗಸ್ ಬೇಸರದಿಂದ ಹೇಳುತ್ತಾರೆ.

ಈ ಸಹೋದರರ ಶುಂಠಿ ಕೃಷಿಯ ಬಗ್ಗೆ ತಿಳಿದಿರುವ ಗ್ರಾಮಸ್ಥರೆಲ್ಲರೂ ಇವರ ಪರಿಶ್ರಮಕ್ಕೆ ಪ್ರತಿಫಲ ಸಿಗದ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಾರೆ. ‘ಪ್ರತಿವರ್ಷವೂ ಕೇರಳದ ವ್ಯಾಪಾರಿಗಳು ಬಂದು ನಮ್ಮ ಶುಂಠಿಯನ್ನೆಲ್ಲ ಕೊಂಡೊಯ್ಯುತ್ತಿದ್ದರು. ಆದರೆ, ಈ ವರ್ಷ ಅವರು ಬಾರದೆ, ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಇಲ್ಲದೆ ಗದ್ದೆಯಲ್ಲೇ ಉಳಿದಿದೆ. ಈಗ ಮಳೆ ಸುರಿಯುತ್ತಿರುವುದರಿಂದ ಶುಂಠಿ ಮೊಳಕೆ ಬರುತ್ತಿದೆ. ನಾವು ಖರ್ಚು ಮಾಡಿರುವ ಸುಮಾರು ₹ 15 ಲಕ್ಷ ವಾಪಸ್ ಬರುವುದು ಅನುಮಾನ’ ಎಂದು ಫೆಲಿಕ್ಸ್ ರಾಡ್ರಿಗಸ್ ಹತಾಶೆಯಿಂದ ಹೇಳುತ್ತಾರೆ.

ಮಲೆನಾಡಿನಲ್ಲಿ ಸಾಂಪ್ರದಾಯಿಕ ಕೃಷಿಯ ಜೊತೆಗೆ ಸಾಹಸದಿಂದ ಶುಂಠಿ ಬೆಳೆಯುವ ಈ ಸಹೋದರರಿಗೆ ಕೃಷಿ ಅಥವಾ ತೋಟಗಾರಿಕೆ ಇಲಾಖೆಯು ನೆರವು ನೀಡಿ ಅವರು ಬೆಳೆದಿರುವ ಶುಂಠಿಗೆ ಮಾರುಕಟ್ಟೆ ಒದಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಅವರ ಸಂಪರ್ಕಕ್ಕೆ ಮೊ: 9880246067, 9880476964.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು