ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ದುರಸ್ತಿಗೆ ಕಾದಿರುವ ಸರ್ಕಾರಿ ಶಾಲೆಗಳು

187 ಶಾಲೆ ಕಾಯಕಲ್ಪ ಬಾಕಿ: ಮಳೆಗಾಲ ಎದುರಿಸುವುದೇ ಸವಾಲು
Published 3 ಜೂನ್ 2024, 7:27 IST
Last Updated 3 ಜೂನ್ 2024, 7:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಒಂದೆಡೆಯಾದರೆ, ಇತ್ತ ಶಾಲೆಗಳಲ್ಲಿ ಕಟ್ಟಡ ಕೂಡ ಹಾಳಾಗುತ್ತಿವೆ.  ದುಸ್ಥಿತಿಯಲ್ಲಿರುವ 187 ಶಾಲೆಗಳು ಕಾಯಕಲ್ಪಕ್ಕೆ ಕಾಯುತ್ತಿವೆ.

ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಅಲ್ಲಲ್ಲಿ ಶಿಥಿಲಾವಸ್ತೆಯಲ್ಲಿದ್ದು, ಭಯದ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಚಿಕ್ಕಮಗಳೂರು ನಗರದ ಮಧ್ಯದಲ್ಲಿರುವ ಪೋರ್ಟರ್ ಪೇಟೆ ಸರ್ಕಾರಿ ಶಾಲೆ ಮೇಲ್ಛಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಳಚಿ ಬೀಳುವ ಹಂತದಲ್ಲಿದೆ. ಮೇಲ್ಚಾವಣಿ ಮತ್ತು ಗೋಡೆ ಮುಟ್ಟಿದರೆ ಸಿಮೆಂಟ್ ಉದುರಿ ಬೀಳುತ್ತಿದ್ದು, ಮಳೆ ಬಂದರೆ ಇನ್ನಷ್ಟು ಹಾಳಾಗುವ ಆತಂಕ ಇದೆ. 2003ರಲ್ಲಿ ನಿರ್ಮಾಣವಾಗಿರುವ ಕಟ್ಟಡ ದುರಸ್ತಿ ಕಂಡಿಲ್ಲ. ಇದರ ನಡುವೆಯೇ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಇದು ಸರ್ಕಾರಿ ಶಾಲೆಯ ದುಸ್ತಿಗೆ ಉದಾಹರಣೆ. ಈ ರೀತಿಯ ಅನೇಕ ಶಾಲೆಗಲಿದ್ದು, ದುರಸ್ತಿ ಆಗಬೇಕಿದೆ.

ಐ.ಜಿ. ರಸ್ತೆಯಲ್ಲಿರುವ ಉರ್ದು ಶಾಲೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿಯಾಗದಿದ್ದರೆ ಮಳೆಗಾಲದಲ್ಲಿ ನೀರು ಕೊಠಡಿ ಸೇರಲಿದೆ. ಈ ರೀತಿಯ ಒಂದಿಲ್ಲೊಂದು ಸಮಸ್ಯೆ ಹೊತ್ತಿರುವ 187 ಶಾಲೆಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ.

ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 1,924 ಶಾಲೆಗಳಿವೆ. ಶಿಕ್ಷಣ ಇಲಾಖೆ ವ್ಯಾಪ್ತಿಗೆ 1,402 ಶಾಲೆಗಳು ಒಳಪಡಲಿದ್ದು, ಉಳಿದಂತೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 95, ಅನುದಾನಿತ 122, ಖಾಸಗಿ 30, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ 4 ಶಾಲೆಗಳಿವೆ. ಕಳೆದ ಬಾರಿಯ ಮಳೆ ಸೇರಿದಂತೆ ಹಲವು ಕಾರಣಗಳಿಂದ 187 ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ.

ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ದಶಕಗಳೇ ಕಳೆದರೂ ಬಣ್ಣ ಕಂಡಿಲ್ಲ. ಬಿರುಕು ಬಿಟ್ಟಿರುವ ಗೋಡೆಗಳಿಗೆ ತೇಪೆ ಬಿದ್ದಿಲ್ಲ. ಕಿತ್ತು ಹೋಗಿರುವ ನೆಲಹಾಸು ಮುಚ್ಚಿಲ್ಲ. ಹಲವೆಡೆ ಶೌಚಾಲಯಗಳ ಸ್ಥಿತಿಯೂ ದುಸ್ತರ ಎಂದು ಪೋಷಕರು ದೂರುತ್ತಾರೆ. 

ಚಿಕ್ಕಮಗಳೂರಿನ ಐ.ಜಿ.ರಸ್ತೆಯ ಸರ್ಕಾರಿ ಉರ್ದು ಶಾಲೆ ಮೇಲ್ಛಾವಣಿ ಹಾಳಾಗಿರುವುದು
ಚಿಕ್ಕಮಗಳೂರಿನ ಐ.ಜಿ.ರಸ್ತೆಯ ಸರ್ಕಾರಿ ಉರ್ದು ಶಾಲೆ ಮೇಲ್ಛಾವಣಿ ಹಾಳಾಗಿರುವುದು
ಚಿಕ್ಕಮಗಳೂರು ನಗರದ ಪೋರ್ಟರ್ ಪೇಟೆ ಶಾಲೆ ಮೇಲ್ಛಾವಣಿ ಹಾಳಾಗಿರುವುದು
ಚಿಕ್ಕಮಗಳೂರು ನಗರದ ಪೋರ್ಟರ್ ಪೇಟೆ ಶಾಲೆ ಮೇಲ್ಛಾವಣಿ ಹಾಳಾಗಿರುವುದು

ವರ್ಷದಿಂದ ಕಾದಿರುವ ಶಾಲೆಗಳು ಕಳೆದ ವರ್ಷ ದುಸ್ಥಿತಿಯಲ್ಲಿರುವ 151 ಶಾಲೆಗಳನ್ನು ಶಿಕ್ಷಣ ಇಲಾಖೆ ಗುರುತಿಸಿತ್ತು. ಕ್ರೀಯಾಯೋಜನೆ ಸಿದ್ಧಪಡಿಸಿ ಜಿಲ್ಲಾಡಳಿತಕೆ ಸಲ್ಲಿಕೆ ಮಾಡಿತ್ತು. ಆದರೆ ಮತ್ತೊಂದು ಮಳೆಗಾಲ ಆರಂಭವಾಗುವ ಸಂದರ್ಭ ಬಂದರೂ ಕಾಮಗಾರಿ ಆರಂಭವಾಗಿಲ್ಲ. ಅಗತ್ಯ ಅನುದಾನ ಕೂಡ ದೊರೆತಿಲ್ಲ. ಚಿಕ್ಕಮಗಳೂರು ತಾಲೂಕಿನಲ್ಲಿ 9 ಮೂಡಿಗೆರೆ 42 ಶೃಂಗೇರಿ 7 ಕೊಪ್ಪ 31 ನರಸಿಂಹರಾಜಪುರ 10 ಕಡೂರು 28 ತರೀಕೆರೆ 8 ಅಜ್ಜಂಪುರ 16 ಶಾಲೆಗಳಿಗೆ ಹಾನಿಯಾಗಿದೆ. ದುರಸ್ತಿ ಆಗದಿರುವುದರಿಂದ ಈ ವರ್ಷದ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಸೋರುವ ಸೂರು ಮತ್ತು ಬಿರುಕು ಬಿಟ್ಟಿರುವ ಗೋಡೆಗಳ ನಡುವೆ ಪಾಠ ಕಲಿಯುವುದು ಅನಿವಾರ್ಯವಾಗಿದೆ.

ಶಿಥಿಲ ಕಟ್ಟಡದಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚನೆ ದುಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ ಮಳೆಗಾಲದಲ್ಲಿ ಮಕ್ಕಳನ್ನು ಕೂರಿಸದಂತೆ ಎಲ್ಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಎಸ್.ಆರ್. ತಿಳಿಸಿದರು. ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಲುಸಂಕ ದಾಟಿ ಮನೆಗೆ ಹೋಗಬೇಕಾದ ಮಕ್ಕಳಿದ್ದರೆ ಅವರ ಪೋಷಕರನ್ನು ಕರೆಸಿಯೇ ಕಳುಹಿಸಬೇಕೆಂದು ಸೂಚಿಸಲಾಗಿದೆ. ಶಾಲೆಗಳ ದುರಸ್ತಿಗೆ ರಾಜ್ಯ ಸರ್ಕಾರದಿಂದ ಪ್ರತಿ ತಾಲ್ಲೂಕಿಗೆ ₹57 ಲಕ್ಷ ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಿಂದ ₹79 ಲಕ್ಷ ನಿಗದಿಯಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ದುರಸ್ತಿ ಕಾಮಗಾರಿ ಆರಂಭಿಸಲು ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. 

ಮಲೆನಾಡಿನಲ್ಲಿ ಶಿಕ್ಷಕರ ಕೊರತೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೂ ಕಾಡುತ್ತಿದೆ. ಅದರಲ್ಲೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಮಸ್ಯೆ ಹೆಚ್ಚಾಗಿದೆ. 200ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಮೂಡಿಗೆರೆ ಕಳಸ ಎನ್.ಆರ್‌.ಪುರ ಶೃಂಗೇರಿ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಬಯಲು ಸೀಮೆಯ ಕಡೂರು ಚಿಕ್ಕಮಗಳೂರು ಅಜ್ಜಂಪುರ ತರೀಕೆರೆ ತಾಲ್ಲೂಕಿನ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರು ಮಲೆನಾಡಿನಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಸಮಸ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅತಿಥಿ ಶಿಕ್ಷಕರನ್ನು ನೇಮಕ ಮತ್ತು ವರ್ಗಾವಣೆ ಮೂಲಕ ಕೊರತೆ ಸರಿದೂಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅಂಕಿ –ಅಂಶ: 1402ಸರ್ಕಾರಿ ಶಾಲೆಗಳು 122ಅನುದಾನಿತ ಶಾಲೆಗಳು 50ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಶಾಲೆಗಳು 30ಖಾಸಗಿ ಶಾಲೆಗಳು 4ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಶಾಲೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT