ಚಿಕ್ಕಮಗಳೂರು: ‘ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸಭೆ ನಡೆಸುವರು. ಆ ಕ್ಷೇತ್ರದ ಟಿಕೆಟ್ ವಿಚಾರ ಕುರಿತು ಅವರೊಂದಿಗೆ ಚರ್ಚಿಸಿಲ್ಲ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಕೊಪ್ಪದ ಹರಂದೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಎಚ್.ಡಿ.ದೇವೇಗೌಡ ಅವರ ಆರೋಗ್ಯ ನನಗೆ ಮುಖ್ಯ. ಅವರ ಜತೆ ಹಾಸನದ ಟಿಕೆಟ್ ವಿಚಾರ ಚರ್ಚಿಸಿ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರಬಾರದು ಎಂಬುದು ನನ್ನ ಅಭಿಪ್ರಾಯ. ಬೇರೆಯವರಿಗೆ ದೇವೇಗೌಡ ಅವರ ಆರೋಗ್ಯಕ್ಕಿಂತ ತಮ್ಮ ಭಾವನೆಗಳೇ ಮುಖ್ಯವಾದರೆ ಅದಕ್ಕೆ ನಾನೇನು ಮಾಡಲಾಗದು’ ಎಂದು ಉತ್ತರಿಸಿದರು
‘ಹಾಸನದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಗಳನ್ನು ಸರಿಪಡಿಸಲು 26ರಂದು ಸಭೆ ನಡೆಸಲು ನಿರ್ಧರಿಸಿದ್ದೆ. ಕೊನೆ ಹಂತದಲ್ಲಿ ಸಭೆ ರದ್ದಾಗಿದೆ. ಜೆಡಿಎಸ್‌ಗೆ ಆಘಾತ ಉಂಟುಮಾಡುವ ನಿಟ್ಟಿನಲ್ಲಿ ಇಂಥ ಪ್ರಕರಣಗಳನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಯೋಚನೆ ಮಾಡಬೇಕು. ಗೊಂದಲಗಳನ್ನು ನಿವಾರಣೆ ಮಾಡುವ ಶಕ್ತಿ ನಮಗೆ ಇದೆ’ ಎಂದು ಹೇಳಿದರು.
‘ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಎಂಬುದು ಜನರಿಗೆ ಗೊತ್ತು. ವೈದ್ಯಕೀಯವಿಜ್ಞಾನ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹಣ ಕೊಡಬೇಕಾದ ಸ್ಥಿತಿ ಇದೆ. ವಿಧಾನ ಪರಿಷತ್ತಿನಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವರೊಬ್ಬರ ಪುತ್ರಿಗೆ ₹ 50 ಲಕ್ಷ ಹಣ ಕೇಳಲಾಗಿದೆ’ ಎಂದು ಅವರು ಆರೋಪಿಸಿದರು.
***
‘ಪ್ರಲ್ಹಾದ ಜೋಶಿ ಮೊದಲು ಹಿಂದೂ ಸಂಸ್ಕೃತಿ ತಿಳಿದುಕೊಳ್ಳಲಿ’
‘ಸಚಿವ ಪ್ರಲ್ಹಾದ ಜೋಶಿ ಅವರು ಮೊದಲು ಹಿಂದೂ ಸಂಸ್ಕೃತಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಎಚ್.ಡಿ.ಕುಮಾರಸ್ವಾಮಿ ಛೇಡಿಸಿದರು.
ಎನ್.ಆರ್.ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮಾಯಾಣ’, ‘ಮಹಾಭಾರತ’ದಲ್ಲಿ ಕುಟುಂಬಗಳಲ್ಲಿ ಕಲಹ ನಡೆದಿದ್ದು ಏಕೆ? ದಶರಥನಿಂದ ಕೈಕೇಯಿ ವಚನ ಪಡೆದು ರಾಮನನ್ನು ಕಾಡಿಗೆ ಅಟ್ಟಲ್ಲಿಲ್ಲವೇ? ಅದು ನಡೆದಿದ್ದು ಅಧಿಕಾರಕ್ಕಾಗಿ ಅಲ್ಲವೇ? ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿರುವುದನ್ನು ಯಾರೂ ಸರಿಪಡಿಸಲಾಗದು’ ಎಂದರು.
‘ಅತಂತ್ರ ಪರಿಸ್ಥಿತಿ ತಂದುಕೊಂಡಿರುವುದು ರಾಷ್ಟ್ರೀಯ ಪಕ್ಷಗಳು ನಾವಲ್ಲ. ಯಡಿಯೂರಪ್ಪ ಅವರನ್ನು ಬಿಜೆಪಿಯವರು ಅತಂತ್ರ ಪರಿಸ್ಥಿತಿಗೆ ತಂದಿದ್ದಾರೆ. ನಮ್ಮ ಪಕ್ಷ ಈ ಬಾರಿ 120ಸ್ಥಾನ ಗೆಲ್ಲುವ ಇಟ್ಟುಕೊಂಡಿದ್ದೇವೆ’ ಎಂದು ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.