ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೆಕೊಳಲೆ ಕೆರೆ:ತಳ ಸೇರಿದ ನೀರು- ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರಿನ ತೊಂದರೆ

Published 5 ಏಪ್ರಿಲ್ 2024, 6:51 IST
Last Updated 5 ಏಪ್ರಿಲ್ 2024, 6:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಜಲಮೂಲಗಳಲ್ಲಿ ಹಿರೆಕೊಳಲೆ ಕೆರೆ ಸಂಪೂರ್ಣ ಖಾಲಿಯತ್ತ ಸಾಗಿದ್ದು, ಜಲಕಾಯದಲ್ಲಿ ನೀರು ತಳ ಸೇರಿದೆ.

ಮುಳ್ಳಯ್ಯನಗಿರಿ ತಟದಲ್ಲಿರುವ ಹಿರೆಕೊಳಲೆ ಕೆರೆ ಜುಲೈ ಕೊನೆಯ ವಾರದಲ್ಲಿ ಭರ್ತಿಯಾಗಿತ್ತು. ಜುಲೈ 26ರಂದು ನಗರಸಭೆಯಿಂದ ಬಾಗೀನ ಅರ್ಪಿಸುವ ಕಾರ್ಯಕ್ರಮ ಕೂಡ ನಡೆದಿತ್ತು. 18.56 ಮಿಲಿಯನ್‌ ಕ್ಯೂಬಿಕ್‌ ಮೀಟರ್‌(ಎಂಸಿಎಫ್‌ಟಿ) ನೀರು ಸಂಗ್ರಹ ಸಾಮರ್ಥ್ಯ ಇರುವ ಈ ಕೆರೆ ಭರ್ತಿಯಾಗಿದ್ದರಿಂದ ನಗರಕ್ಕೆ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ ಎಂದು ನಗರಸಭೆ ಆಡಳಿತ ನಂಬಿತ್ತು.

ಜುಲೈ ಬಳಿಕ ಮಳೆ ಬರಲೇ ಇಲ್ಲ. ಕೆರೆ ನೀರಿ ಖಾಲಿಯಾದಂತೆ ಮತ್ತೆ ಮಳೆ ಬಂದಿದ್ದರೆ ನೀರು ಇರುತ್ತಿತ್ತು. ಮಳೆ ಬಾರದಿರುವುದರಿಂದ ಕೆರೆಗೆ ನೀರು ಬರಲಿಲ್ಲ. ಬಿಸಿಲಿನ ತಾಪ ಕೂಡ ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ಸುತ್ತಮುತ್ತ ಹೆಚ್ಚಾಗಿದೆ. ಪರಿಣಾಮವಾಗಿ ಹಿರೆಕೊಳಲೆ ಕೆರೆ ಬರಿದಾಗುವತ್ತ ಸಾಗಿದೆ. ಕೆರೆಯಿಂದ ನಗರಕ್ಕೆ ನೀರು ಪೂರೈಸಲು ಮಧ್ಯಭಾಗದಲ್ಲಿ ತೂಬು ಅಳವಡಿಕೆಯಾಗಿದೆ. ತೂಬಿನಿಂದ ಕೆಳಭಾಗಕ್ಕೆ ನೀರು ಸಾಗುತ್ತಿದೆ. ಒಂದೆರಡು ದಿನಗಳಲ್ಲೇ ನಗರಕ್ಕೆ ಈ ಕೆರೆಯಿಂದ ನೀರು ಪೂರೈಕೆ ಸ್ಥಗಿತವಾಗಲಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಶೇ 30ಕ್ಕಿಂತ ಕಡಿಮೆ ನೀರಿದ್ದರೆ ಅದನ್ನು ಬಳಕೆಗೆ ಸಾಧ್ಯವಾಗದ ನೀರು(ಡೆಡ್ ಸ್ಟೋರೆಜ್) ಎಂದು ಕರೆಯಲಾಗುತ್ತದೆ. ಕೆರೆಯಲ್ಲಿ ನೀರಿದ್ದರೂ ತೂಬಿಗೆ ನಿಲುಕುವುದಿಲ್ಲ. ಆದ್ದರಿಂದ ನಗರಕ್ಕೆ ನೀರು ಪೂರೈಕೆ ಕಷ್ಟವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ನಗರಕ್ಕೆ ನೀರು ಪೂರೈಸುವ ಮತ್ತೊಂದು ಪ್ರಮುಖ ಮೂಲ ಎಂದರೆ ಹಾಸನ ಜಿಲ್ಲೆಯ ಬೇಲೂರಿನ ಯಗಚಿ ಜಲಾಶಯ. ಈ ಜಲಾಶಯ 3.06 ಟಿಎಂಟಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಶೇ 40ರಷ್ಟು ನೀರಿದ್ದು, ನೀರಿನ ಸಮಸ್ಯೆಯಾಗಲಾರದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಯಗಚಿ ಜಲಾಶಯದಲ್ಲಿ ಎರಡು ಜಾಕ್‌ವೆಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿ ಜಾಕ್‌ವೆಲ್ 600 ಎಚ್‌ಪಿ ಸಾಮರ್ಥ್ಯವನ್ನು ಹೊಂದಿವೆ. ನಗರಕ್ಕೆ ಪ್ರತಿನಿತ್ಯ 24 ಎಂಎಲ್‌ಡಿ ನೀರು ಪೂರೈಸುವಷ್ಟು ಸಾಮರ್ಥ್ಯವನ್ನು ಜಾಕ್‌ವೆಲ್‌ ಹೊಂದಿದೆ. ಹಿರೆಕೊಳಲೆ ಜಲಾಶಯದಿಂದ 4 ಎಂಎಲ್‌ಡಿ ನೀರು ಪಡೆಯಲಾಗುತ್ತಿದೆ. ರಾಮನಹಳ್ಳಿ, ಕೆಂಪನಹಳ್ಳಿ, ಗೌರಿ ಕಾಲುವೆ ಸೇರಿ ಹಲವು ಬಡಾವಣೆಗಳಿಗೆ ಹಿರೆಕೊಳಲೆ ಕೆರೆ ನೀರು ಪೂರೈಕೆಯಾಗುತ್ತಿದೆ.

ಮಳೆಗಾಲ ಇನ್ನೂ ದೂರ ಇರುವಾಗಲೇ ಹಿರೆಕೊಳಲೆ ನೀರು ಖಾಲಿಯಾಗಿರುವುದು ಮುಂದೆ ಸಮಸ್ಯೆಯಾಗಬಹುದು ಎಂಬ ಆತಂಕ ಶುರವಾಗಿದೆ. ಕೊಳವೆ ಬಾವಿಗಳ ನೀರು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

‘ಹಿರೆಕೊಳಲೆ ಕೆರೆಯಿಂದ ನೀರು ಸ್ಥಗಿತವಾದರೆ ಯಗಚಿ ಜಲಾಶಯದಿಂದಲೇ ಎಲ್ಲಾ ಬಡಾವಣೆಗೆ ಪೂರೈಕೆ ಮಾಡಲಾಗುವುದು. ಅಲ್ಲಿನ ನೀರಿನ ಸಮಸ್ಯೆ ಇಲ್ಲ’ ಎಂದು ನಗರಸಭೆ ಅಧಿಕಾರಿಗಳು ‘‍ಪ್ರಜಾವಾಣಿ’ಗೆ ತಿಳಿಸಿದರು.

ಹಿರೆಕೊಳಲೆ ಕೆರೆಯ ತೂಬಿನ ಸಮೀಪ ನೀರು ತಳ ಸೇರಿರುವುದು
ಹಿರೆಕೊಳಲೆ ಕೆರೆಯ ತೂಬಿನ ಸಮೀಪ ನೀರು ತಳ ಸೇರಿರುವುದು
ಕೆಂಪನಹಳ್ಳಿ ಬಡಾವಣೆಯಲ್ಲಿ ನಗರಸಭೆಯಿಂದ ಪೂರೈಕೆಯಾಗಿರುವ ನೀರು
ಕೆಂಪನಹಳ್ಳಿ ಬಡಾವಣೆಯಲ್ಲಿ ನಗರಸಭೆಯಿಂದ ಪೂರೈಕೆಯಾಗಿರುವ ನೀರು

ಕೆಂಪನಹಳ್ಳಿಗೆ ಕೆಂಪು ನೀರು

ನಗರದ ಕೆಂಪನಹಳ್ಳಿ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ನಗರಸಭೆ ಪೂರೈಸುತ್ತಿರುವ ನೀರಿನಲ್ಲಿ ಮಣ್ಣು ಮಿಶ್ರಣಗೊಂಡು ಕೆಂಪು ಬಣ್ಣದಲ್ಲಿ ನೀರು ಮನೆ ಸೇರುತ್ತಿದೆ. ಹಿರೆಕೊಳಲೆ ಕೆರೆಯಿಂದ ಬರುವ ನೀರನ್ನು ರಾಮನಹಳ್ಳಿ ನೀರು ಸರಬರಾಜು ಕೇಂದ್ರದಲ್ಲಿ ಶುದ್ಧೀಕರಿಸಿ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಕೆಂಪನಹಳ್ಳಿ ಬಡಾವಣೆಗೆ ಬರುತ್ತಿರುವ ನೀರು ಕುಡಿಯಲು ಮಾತ್ರವಲ್ಲದೇ ಇತರ ಬಳಕೆಗೂ ಕಷ್ಟವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ‘ಹಿರೆಕೊಳಲೆ ಕೆರೆಯಲ್ಲಿ ನೀರು ಖಾಲಿಯಾಗಿದೆ. ಕೊನೆಯಲ್ಲಿ ಮಣ್ಣು ಸಹಿತ ನೀರು ಬರುತ್ತಿರುವುದರಿಂದ ಈ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವರ್ಷವಿಡಿ ಕೆಂಪನಹಳ್ಳಿಗೆ ನಗರಸಭೆ ಕೆಂಪು ನೀರನ್ನೇ ಪೂರೈಸುತ್ತಿದೆ’ ಎಂದು ಕೆಂಪನಹಳ್ಳಿ ರಮೇಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT