ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಭೂ ಅಕ್ರಮ | ತಪ್ಪಿತಸ್ಥರ ವಿರುದ್ಧ ಕ್ರಮ: ಪ್ರಜಾವಾಣಿ ವರದಿಗೆ ಜನರ ಪ್ರತಿಕ್ರಿಯೆ

Published : 30 ಸೆಪ್ಟೆಂಬರ್ 2024, 7:23 IST
Last Updated : 30 ಸೆಪ್ಟೆಂಬರ್ 2024, 7:23 IST
ಫಾಲೋ ಮಾಡಿ
Comments
ಸಮಿತಿ ಅಧ್ಯಕ್ಷರು–ಸದಸ್ಯರು ಕಾನೂನು ತಜ್ಞರಲ್ಲ. ಶಾಸಕ ಸ್ಥಾನ ಸರ್ಕಾರಿ ಉದ್ಯೋಗವಲ್ಲ ನಾವು ಜನರ ಪ್ರತಿನಿಧಿಗಳು. ತಹಶೀಲ್ದಾರ್‌ಗೆ ಕಂದಾಯ ಕಾಯ್ದೆ ಬಗ್ಗೆ ಸಂಪೂರ್ಣ ಅರಿವಿರುತ್ತದೆ. ಕಡತ ತಯಾರು ಮಾಡುವುದು ಭೂಮಾಪಕರು ಗ್ರಾಮ ಆಡಳಿತಾಧಿಕಾರಿ ಕಂದಾಯ ನಿರೀಕ್ಷಕರು ಮತ್ತು  ಶೀರಸ್ತೇದಾರರು. ಲೋಪಗಳಿವೆಯೇ ಎಂಬುದನ್ನು ನೋಡಿ ಸಭೆಗೆ ಮಂಡಿಸುವುದು ತಹಶೀಲ್ದಾರ್ ಕೆಲಸ. ಲೋಪ ಆಗದಂತೆ ನಾವೂ ಕುಡ ಆದಷ್ಟು ಎಚ್ಚರ ವಹಿಸಿದ್ದೇವೆ. ಆದರೂ ಭೂಗಳ್ಳರು ನೀಡುವ ಹಣದ ಆಸೆಗೆ ಅನರ್ಹರ ಕಡತಗಳನ್ನೂ ನಮ್ಮ ಕಣ್ತಪ್ಪಿಸಿ ಅಧಿಕಾರಿಗಳು ಮಂಡಿಸಿರುವ ಸಾಧ್ಯತೆಗಳಿರುತ್ತವೆ. ಸತ್ಯ ಮರೆಮಾಚಿ ಸಮಿತಿಯಲ್ಲಿ ಅನುಮೋದನೆ ಪಡೆದಿರಬಹುದು. ಆದ್ದರಿಂದ ಅಷ್ಟೂ ಅಕ್ರಮಕ್ಕೆ ಅಧಿಕಾರಿಗಳೇ ನೇರ ಹೊಣೆ. ಅವರಿಗೆ ಶಿಕ್ಷೆಯಾಗಬೇಕೆ ಹೊರತು ನಿರಪರಾಧಿಗಳಿಗೆ ಅಲ್ಲ.
–ಬಿ.ಬಿ.ನಿಂಗಯ್ಯ ಮಾಜಿ ಶಾಸಕ
326 ಸಿಬ್ಬಂದಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅಕ್ರಮಕ್ಕೆ ಹೊಣೆಗಾರರು ಎಂಬುದನ್ನು ತನಿಖಾ ವರದಿ ಹೇಳುತ್ತಿದೆ. ಆದರೆ ಇಬ್ಬರು ತಹಶೀಲ್ದಾರ್‌ಗಳನ್ನು ಅಮಾನತು ಮಾಡಿದ್ದನ್ನು ಬಿಟ್ಟರೆ ಬೇರೆ ಯಾರ ವಿರುದ್ಧವೂ ಕ್ರಮ ಆಗಿಲ್ಲ. ಎಲ್ಲರ ವಿರುದ್ಧ ಮೊದಲು ಎಫ್‌ಐಆರ್ ದಾಖಲಾಗಬೇಕು. ಅಲ್ಲದೇ ಭ್ರಷ್ಟಾಚಾರದ ಬಗ್ಗೆಯೂ ತನಿಖೆಯಾಗಬೇಕು. ಎಕರೆಗೆ ₹1 ಲಕ್ಷ ಕೊಟ್ಟು ಹಣವು ಇಲ್ಲ ಜಮೀನೂ ಇಲ್ಲ ಎಂಬ ಸ್ಥಿತಿಗೆ ರೈತರು ಬಂದಿದ್ದಾರೆ. ಈ ನಡುವೆ ಸರ್ಕಾರ ಅಧಿಕಾರಿ ಮತ್ತು ಸಿಬ್ಬಂದಿಯನ್ನು ರಕ್ಷಿಸುತ್ತಿದೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಅವರು ಪ್ರಾಮಾಣಿಕರು ಎಂದು ನಂಬಿದ್ದೆವೆ. ಆದರೆ ಈಗ ಅಧಿಕಾರಿಗಳಿಗೆ ರಕ್ಷಣೆ ದೊರೆಯುತ್ತಿರುವುದನ್ನು ಗಮನಿಸಿದರೆ ಅನುಮಾನ ಕಾಡುತ್ತಿದೆ. ಅಕ್ರಮ ಬಯಲಿಗೆ ಎಳೆಯುವಲ್ಲಿ ರೈತ ಸಂಘ ಪ್ರಮುಖ ಪಾತ್ರ ವಹಿಸಿದೆ. ಅಕ್ರಮ ಮಾಡಿದವರ ವಿರುದ್ಧ ಕ್ರಮ ಆಗಲೇಬೇಕು. ಕಡೂರು ಮೂಡಿಗೆರೆ ಮಾತ್ರವಲ್ಲ ಇಡೀ ಜಿಲ್ಲೆಯ್ಲಿ ಕಳೆದ 10 ವರ್ಷಗಳ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಬೇಕು. ಇನ್ನಷ್ಟು ಅಕ್ರಮ ಹೊರಗೆ ಬರಲಿದೆ. ಆದರೆ ಬದುಕಿಗಾಗಿ ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ಬಡವರಿಗೆ ತೊಂದರೆ ಕೊಡಬಾರದು. 
–ಕೆ.ಗುರುಶಾಂತಪ್ಪ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಮೂಡಿಗೆರೆ ಕ್ಷೇತ್ರದ ಭೂಸಕ್ರಮೀಕರಣ ಸಮಿತಿಗೆ ನಾನು ಅಧ್ಯಕ್ಷೆಯಾಗಿರಲಿಲ್ಲ. ವಿಧಾನ ಪರಿಷತ್ತಿನ ಸದಸ್ಯೆಯಾಗಿದ್ದಾಗ ಚಿಕ್ಕಮಗಳೂರು ಕ್ಷೇತ್ರದ ಸಮಿತಿಗೆ ನೇಮಕವಾಗಿದ್ದೆ. ಆ ಸಂದರ್ಭದಲ್ಲಿ 450 ಪ್ರಕರಣ ಮಂಜೂರು ಮಾಡಿರಬಹುದು. ಅದರಲ್ಲಿ ಏನು ತಪ್ಪಾಗಿದೆ ಎಂಬುದು ಗೊತ್ತಿಲ್ಲ. ಸಮಿತಿಯವರು ಕಡತ ತಯಾರಿಸುವುದಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಎಲ್ಲವೂ ಸರಿಯಾಗಿದೆ ಎಂಬುದನ್ನು ತಿಳಿಸಿ ಸಭೆಗೆ ಮಂಡಿಸುತ್ತಾರೆ. ಅಂತಹ ಕಡತಗಳಿಗೆ ಮಾತ್ರ ಒಪ್ಪಿಗೆ ನೀಡಿದ್ದೇವೆ. ಆದ್ದರಿಂದ ಸಮಿತಿಯಿಂದ ತಪ್ಪಾಗಿದೆ ಎನ್ನಲು ಆಗುವುದಿಲ್ಲ. ನಾವು ಎಲ್ಲವನ್ನೂ ನ್ಯಾಯಯುತವಾಗಿಯೇ ಮಾಡಿದ್ದೇವೆ. ಮೂಡಿಗೆರೆ ತಾಲ್ಲೂಕಿನಲ್ಲಿ ಸಮಿತಿಯ ಮುಂದೆ ಮಂಡನೆ ಮಾಡದೆ ಅರ್ಜಿಯನ್ನೂ ಪಡೆಯದೆ ನೇರವಾಗಿ ಪಹಣಿ ಬರೆಸಿದ್ದಾರೆ. ಇವುಗಳನ್ನು ಮಾಡಿದವರ ವಿರುದ್ಧ ಕ್ರಮ ಆಗಬೇಕು.
–ಮೋಟಮ್ಮ ಮಾಜಿ ಶಾಸಕಿ
ಅಧಿಕಾರಿಗಳು ಮಂಡಿಸಿರುವ ಕಡತಗಳನ್ನು ಮಂಜೂರು ಮಾಡಿದ್ದೇವೆ ಎಂದು ಮಾಜಿ ಶಾಸಕರುಗಳು ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಿಗಳು ಮಂಡಿಸುವ ಕಡತಗಳಿಗೆ ಕಣ್ಮುಚ್ಚಿ ಸಹಿ ಹಾಕುವುದಾದರೆ ಇವರು ಶಾಸಕರಾಗಲು ಯೋಗ್ಯರೇ? ಈ ರೀತಿಯ ಹೇಳಿಕೆ ಅಪಾಹಾಸ್ಯ. ಕೆಲವು ಕಡತಗಳನ್ನು ತಿರಸ್ಕರಿಸಲಾಗಿದೆ ಇನ್ನೂ ಹಲವು ಕಡತಗಳನ್ನು ಮೂರು–ನಾಲ್ಕು ಬಾರಿ ಮುಂದೂಡಿ ನಂತರ ಮಂಜೂರಾತಿ ನೀಡಲಾಗಿದೆ. ಪೇಮೆಂಟ್ ಆದ ಬಳಿಕ ಮಂಜೂರಾತಿ ನೀಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಕರ್ನಾಟಕದ ಅತೀ ದೊಡ್ಡ ಹಗರಣ ಇದಾಗಿದ್ದು ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿದೆ. ನಮಗಿರುವ ಮಾಹಿತಿ ಪ್ರಕಾರ ಸಖರಾಯಪಟ್ಟಣ ಭಾಗದಲ್ಲಿ ಎಕರೆಗೆ ₹1 ಲಕ್ಷ ಮೂಡಿಗೆರೆ ಭಾಗದಲ್ಲಿ ಎಕರೆಎಗ ₹2 ಲಕ್ಷದಿಂದ ₹3 ಲಕ್ಷದ ತನಕ ವ್ಯವಹಾರ ನಡೆದಿದೆ. ಅಧಿಕಾರಿಗಳಷ್ಟೇ ಅಲ್ಲ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ನೇರ ಹೊಣೆಗಾರರು. ಈ ವರದಿ ಆಧರಿಸಿ ಲೋಕಾಯುಕ್ತ ತನಿಖೆ ನಡೆಯಬೇಕು. ಎಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು. 
–ರೇಣುಕಾರಾಧ್ಯ ಭಾರತ ಕಮ್ಯೂನಿಸ್ಟ್ ಪಕ್ಷದ ಮುಖಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT