ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಮದ್ಯ ಮಾರಾಟ: ಹೋಮ್‌ಸ್ಟೇ ಮೊರೆ

ಪ್ರವಾಸಿಗರ ಸಂಖ್ಯೆ ಏರಿಕೆಯಾದರೂ ಹೆಚ್ಚಾಗದ ಮದ್ಯ ಮಾರಾಟ
Published 26 ಜನವರಿ 2024, 7:20 IST
Last Updated 26 ಜನವರಿ 2024, 7:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಲೆನಾಡಿನ ಮಡಿಲಿನಲ್ಲಿ ಕಾಲಕಳೆಯಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಮದ್ಯ ಮಾರಾಟ ಹೆಚ್ಚಳ ಆಗದಿರುವುದು ಅಬಕಾರಿ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ನಿಗದಿತ ಗುರಿ ಸಾಧಿಸಲು ತಿಣುಕಾಡುತ್ತಿರುವ ಅಧಿಕಾರಿಗಳು, ಈಗ ಹೋಮ್‌ಸ್ಟೇ ಮಾಲೀಕರ ಮೊರೆ ಹೋಗಿದ್ದಾರೆ. 

ಅಲ್ಲಲ್ಲಿ ಹೋಮ್‌ಸ್ಟೇ ಮಾಲೀಕರ ಸಭೆ ನಡೆಸಿ ನಕಲಿ ಮದ್ಯ, ತೆರಿಗೆ ರಹಿತ ಹೊರ ರಾಜ್ಯದ ಮದ್ಯ, ಸೇನೆಯ ಕ್ಯಾಂಟೀನ್‌ಗಳಲ್ಲಿ ಸೈನಿಕರಿಗೆ ನೀಡುವ ಮದ್ಯ ತಂದು ಸೇವನೆ ಮಾಡಲು ಅವಕಾಶ ನೀಡಬಾರದು. ಅಲ್ಲದೇ, ಆದಷ್ಟು ಚಿಕ್ಕಮಗಳೂರು ಜಿಲ್ಲೆಯ ಮದ್ಯದ ಅಂಗಡಿಗಳಿಂದಲೇ ಮದ್ಯ ಖರೀದಿ ಮಾಡಲು ಅತಿಥಿಗಳಿಗೆ ಸಲಹೆ ನೀಡುವಂತೆ ಕೋರುತ್ತಿದ್ದಾರೆ.

ವಾರಾಂತ್ಯ ಕಳೆಯಬೇಕೆಂದರೆ ಪ್ರವಾಸಿಗರಿಗೆ ಮೊದಲು ನೆನಪಿಗೆ ಬರುವುದು ಚಿಕ್ಕಮಗಳೂರು. 2022ನೇ ಸಾಲಿಗೆ ಹೋಲಿಸಿದರೆ 2023ರಲ್ಲಿ 18 ಲಕ್ಷ ಹೆಚ್ಚುವರಿ ಪ್ರವಾಸಿಗರು ಜಿಲ್ಲೆಗೆ ಬಂದು ಹೋಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮದ್ಯ ಮಾರಾಟ ಕೊಂಚ ಹೆಚ್ಚಳವಾಗಿದೆ. ಆದರೆ, ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ.

ಪ್ರವಾಸಿಗರು ಹೆಚ್ಚುತ್ತಿರುವಂತೆ ಅವರಿಗೆ ಆತಿಥ್ಯ ನೀಡಲು ಹೋಮ್‌ಸ್ಟೇ, ರೆಸಾರ್ಟ್‌, ಹೋಟೆಲ್‌ಗಳು ಕೂಡ ಹೆಚ್ಚುತ್ತಲೇ ಇವೆ. ರಜೆ ದಿನಗಳಲ್ಲಿ ಕಾಲ ಕಳೆಯಬೇಕೆಂದರೆ ಜನ ಚಿಕ್ಕಮಗಳೂರು ಜಿಲ್ಲೆಯ ಪರಿಸರದ ಮಡಿಲಿಗೆ ಬರುವುದೇ ಹೆಚ್ಚು. ಇನ್ನು ವರ್ಷಾಂತ್ಯದಲ್ಲಿ ಎಲ್ಲಾ ಹೋಮ್‌ಸ್ಟೇ ಮತ್ತು ರೆಸಾರ್ಟ್‌ಗಳು ಭರ್ತಿಯಾಗಿದ್ದವು. ಚಿಕ್ಕಮಗಳೂರು ಜಿಲ್ಲೆಯಲ್ಲಿ 252 ಮದ್ಯದ ಅಂಗಡಿಗಳಿವೆ. ಆದರೂ, ಡಿಸೆಂಬರ್‌ನಲ್ಲಿ ಮದ್ಯ ಮಾರಾಟ ಕಳೆದ ವರ್ಷಕ್ಕಿಂತ 63 ಬಾಕ್ಸ್‌ ಕಡಿಮೆಯೇ ಮಾರಾಟವಾಗಿದೆ.

ಚಳಿಯ ವಾತಾವರಣಕ್ಕೆ ಹೆಚ್ಚು ಮದ್ಯ ಮಾರಾಟವಾಗುತ್ತದೆ. ಕಾಫಿ ಹಣ್ಣು ಕೊಯ್ಲಿನ ಸಂದರ್ಭ ಆಗಿರುವುದರಿಂದ ವಲಸೆ ಕಾರ್ಮಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬಂದಿದ್ದಾರೆ. ಆದರೂ, ಮದ್ಯದ ಮಾರಾಟ ಜಾಸ್ತಿಯಾಗಿಲ್ಲ. ಬೆಂಗಳೂರು ಕಡೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರು, ಹೋಮ್‌ಸ್ಟೇಗಳಲ್ಲಿ ತಂಗುತ್ತಾರೆ. ಬರುವ ದಾರಿಯಲ್ಲೇ ಹಾಸನ, ಬೇಲೂರಿನ ಮದ್ಯದ ಅಂಗಡಿಗಳಲ್ಲಿ ಮದ್ಯ ಖರೀದಿ ಮಾಡಿ ಹೋಮ್‌ಸ್ಟೇಗಳಿಗೆ ಬಂದು ಉಳಿಯುತ್ತಾರೆ. ಇದರಿಂದ ಮದ್ಯದ ಮಾರಾಟ ಜಿಲ್ಲೆಯಲ್ಲಿ ಹೆಚ್ಚಾಗುತ್ತಿಲ್ಲ. ನಿಗದಿತ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ ಎಂಬುದು ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳ ಚಿಂತೆ.

ಇದರಿಂದ ಎಲ್ಲೆಡೆ ಹೋಮ್‌ಸ್ಟೇ ಮಾಲೀಕರ ಸಭೆ ನಡೆಸುತ್ತಿದ್ದಾರೆ. ಬರುವ ಅತಿಥಿಗಳು ಚಿಕ್ಕಮಗಳೂರು ಜಿಲ್ಲೆಯ ಮದ್ಯದ ಅಂಗಡಿಗಳಿಂದಲೇ ಖರೀದಿಸಲು ತಿಳಿಸುವಂತೆ ಮನವಿ ಮಾಡುತ್ತಿದ್ದಾರೆ. ‘ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳವಾದರೆ ಅದನ್ನು ಆಧರಿಸಿ ಉದ್ಯೋಗ ಮತ್ತು ಇನ್ನಿತರ ವಹಿವಾಟು ಜಾಸ್ತಿಯಾಗಲಿದೆ. ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು ಸಿಗಲಿದೆ’ ಎಂದು ಮನವರಿಕೆ ಮಾಡಿಸುತ್ತಿದ್ದಾರೆ.

‘ಅಬಕಾರಿ ಇಲಾಖೆ ನಿಯಮಗಳ ಪ್ರಕಾರವೇ ಒಬ್ಬ ವ್ಯಕ್ತಿ 2.3 ಲೀಟರ್ ಮದ್ಯ ಸಾಗಣೆಗೆ ಅವಕಾಶ ಇದೆ. ನಮ್ಮ ಜಿಲ್ಲೆಯ ಮದ್ಯವನ್ನೇ ಖರೀದಿ ಮಾಡಬೇಕು ಎಂಬ ಒತ್ತಡವನ್ನು ಅತಿಥಿಗಳಿಗೆ ಹೇರಲು ಆಗುವುದಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳು ಕೂಡ ಒತ್ತಡ ಹೇರುತ್ತಿಲ್ಲ, ಸಹಕಾರ ನೀಡಲು ಮನವಿ ಮಾಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲೇ ಸಾಕಷ್ಟು ಎಂಆರ್‌ಪಿ ಶಾಪ್‌ಗಳಿಗೆ ಎಂಬುದನ್ನಷ್ಟೇ ಅತಿಥಿಗಳಿಗೆ ಹೇಳಬಹುದು’ ಎಂದು ಹೋಮ್‌‌ಸ್ಟೇ ಮಾಲೀಕರು ಹೇಳುತ್ತಾರೆ.

ಬಿಯರ್ ಸೇವನೆಗೆ ಒಲವು

ಅಬಕಾರಿ ಇಲಾಖೆ ಅಂಕಿ–ಅಂಶಗಳ ಪ್ರಕಾರ ಮದ್ಯಕ್ಕಿಂತ ಬಿಯರ್ ಮಾರಾಟವೇ ಹೆಚ್ಚಾಗಿದೆ. ಕಳೆದ ವ‌ರ್ಷ ಡಿಸೆಂಬರ್ ಅಂತ್ಯಕ್ಕೆ 5ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 5.92ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.

ಬ್ರಾಂಡಿ, ವಿಸ್ಕಿ, ರಮ್ ಸೇರಿ ಮದ್ಯದ ಮೇಲಿನ ಸುಂಕ ಕಳೆದ ಸಾಲಿನಲ್ಲಿ ಹೆಚ್ಚಾಗಿದೆ. ಮದ್ಯಕ್ಕೆ ಹೋಲಿಸಿದರೆ ಬಿಯರ್ ದರ ಕಡಿಮೆ ಇದೆ. ಆದ್ದರಿಂದ ಬಿಯರ್ ಸೇವನೆಗೆ ಜನ ಆಸಕ್ತಿ ವಹಿಸಿದ್ದಾರೆ ಎಂಬುದು ಅಬಕಾರಿ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ.

ಮುಂದಿನ ಬಜೆಟ್‌ನಲ್ಲಿ ಬಿಯರ್ ಮೇಲಿನ ಸುಂಕದ ದರಗಳನ್ನೂ ಶೇ 10ರಷ್ಟು ಹೆಚ್ಚಿಸಲು ಅಬಕಾರಿ ಇಲಾಖೆ ಆಲೋಚನೆ ನಡೆಸಿದ್ದು, ಬಿಯರ್ ಕೂಡ ದುಬಾರಿಯಾಗುವ ಸಾಧ್ಯತೆ ಇದೆ.

ಅಂಕಿ–ಅಂಶ(ಏಪ್ರಿಲ್‌–ಡಿಸೆಂಬರ್)

13.13 ಲಕ್ಷ ಬಾಕ್ಸ್ 2022ರಲ್ಲಿ ಮಾರಾಟವಾಗಿರುವ ಮದ್ಯ

13.29 ಲಕ್ಷ ಬಾಕ್ಸ್‌ 2023ರಲ್ಲಿ ಮಾರಾಟವಾಗಿರುವ ಮದ್ಯ

5.03 ಲಕ್ಷ ಬಾಕ್ಸ್‌ 2022ರಲ್ಲಿ ಮಾರಾಟವಾಗಿರುವ ಬಿಯರ್

5.92 ಲಕ್ಷ ಬಾಕ್ಸ್‌ 2023ರಲ್ಲಿ ಮಾರಾಟವಾಗಿರುವ ಬಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT