ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕಾಗಿ ಒಗ್ಗಟ್ಟಿನ ಹೋರಾಟ ಅಗತ್ಯ: ಬಿ.ಪಿ.ದಯಾನಂದ

‘ಕೊರೊನಾ ಕಾಂಡ’ ಪುಸ್ತಕ ಬಿಡುಗಡೆ, ದತ್ತಿ ಉಪನ್ಯಾಸ
Last Updated 26 ಜೂನ್ 2022, 14:30 IST
ಅಕ್ಷರ ಗಾತ್ರ

ಕೊನೋಡಿ (ಎನ್.ಆರ್.ಪುರ): ‘ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಗೆ ಧಕ್ಕೆ ಬಂದಾಗ ಕನ್ನಡಿಗರು ಆತ್ಮಗೌರವ ಉಳಿಸಿ ಕೊಂಡು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ’ ಎಂದು ನಿವೃತ್ತ ಪ್ರಾಂಶುಪಾಲ ಬಿ.ಪಿ.ದಯಾನಂದ ತಿಳಿಸಿದರು.

ಇಲ್ಲಿನ ರಾಮಚಂದ್ರಯ್ಯ ಅವರ ಮನೆಯಂಗಳದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ನಡೆದ ಲೇಖಕ ಕೆ.ಆರ್.ಗಣೇಶ್ ಅವರು ಬರೆದ ‘ಕೊರೊನಾ ಕಾಂಡ’ ಪುಸ್ತಕ ಬಿಡುಗಡೆ ಹಾಗೂ ದಿ.ರಂಗಪ್ಪಯ್ಯ ಪಾರ್ವತಮ್ಮ ಇವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಗ್ರಾಮೀಣ ಭಾಗದ ಕೆ.ಆರ್.ಗಣೇಶ್ ಸಾವಯವ ಕೃಷಿಯ ಜತೆಗೆ ಪುಸ್ತಕ ಪ್ರೀತಿ ಬೆಳೆಸಿಕೊಂಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಬರೆದ ‘ಕೊರೊನಾ ಕಾಂಡ’ ಪುಸ್ತಕದಲ್ಲಿ ಸಹಜತೆ ಇದೆ’ ಎಂದರು.

ತೀರ್ಥಹಳ್ಳಿಯ ಲೇಖಕ ಕಿರಣಕೆರೆ ಮುರುಳಿಧರ್ ಅವರು ‘ಸಾಹಿತಿ ಎಸ್.ವಿ.ಪರಮೇಶ್ವರಭಟ್ಟರ ಬದುಕು ಮತ್ತು ಬರಹ’ದ ಬಗ್ಗೆ ಉಪನ್ಯಾಸ ನೀಡಿ, ‘ರಾಗಿಣಿ ಎಂಬ ಕವನಸಂಕಲನ ಪರಮೇಶ್ವರ ಭಟ್ಟರ ಪ್ರಥಮ ಕೃತಿಯಾಗಿತ್ತು. ಅವರು 50ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಕನ್ನಡ ಭಾಷೆಯ ಜತೆಗೆ ಇಂಗ್ಲಿಷ್, ಸಂಸ್ಕೃತ ಭಾಷೆಯಲ್ಲೂ ಲೇಖನಗಳನ್ನು ಬರೆದು ಹೆಸರು ಮಾಡಿದ್ದರು’ ಎಂದರು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಯಜ್ಞ ಪುರುಷ್ ಭಟ್ ಮಾತನಾಡಿ, ‘ಚುಟುಕು ಸಾಹಿತ್ಯವನ್ನು ವಾಚನ ಮಾಡುವ ರೀತಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಾಂದರ್ಭಿಕ ಚುಟುಕುಗಳಿಂದ ಜನಜಾಗೃತಿಯಾಗಲಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ನಡೆಸಲಾಗುವುದು’ ಎಂದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪೂರ್ಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಾಹಿತ್ಯಾಸಕ್ತರು ನೀಡಿದ ದತ್ತಿದಾನದ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ ಆದರಲ್ಲಿ ಬರುವ ಬಡ್ಡಿ ಹಣದಿಂದ ದಾನಿಗಳ ಆಶಯದಂತೆ ದತ್ತಿ ಉಪನ್ಯಾಸ ನಡೆಸಲಾಗುತ್ತದೆ’ ಎಂದರು.

ಕಾರ್ಯಕ್ರಮಕ್ಕೆ ದತ್ತಿ ದಾನಿಗಳಾದ ಕೊನೋಡಿ ರಾಮಚಂದ್ರಯ್ಯ ಲಕ್ಷ್ಮೀದೇವಿ ದಂಪತಿ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಅಧ್ಯಕ್ಷತೆ ವಹಿಸಿದ್ದರು.

ಅಮೃತ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಕೆ.ಡಿ.ಕೃಷ್ಣಪ್ಪಗೌಡ, ವೈ.ಎಸ್.ಸುಬ್ರಹ್ಮಣ್ಯ, ಹಿರಿಯ ಪತ್ರಕರ್ತ ವೈ.ಎಸ್.ಮಂಜುನಾಥ್, ಉಷಾ,ಎ.ಎಸ್.ವೆಂಕಟರಣ, ಕೊನೋಡಿ ಗಣೇಶ್, ಅಶ್ವನ್, ಸುಭಾಷ್, ಶಿಲ್ಪಕುಮಾರಿಮ ಮಧುರ ಮಂಜುನಾಥ್ ಇದ್ದರು.

ಲೇಖನ ಕೊನೋಡಿ ಕೆ.ಆರ್.ಗಣೇಶ್ ದಂಪತಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT