ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಡಯಾಲಿಸಿಸ್‌ ಸೇವೆ ಸ್ಥಗಿತ ಭೀತಿ

ಸಲಕರಣೆ ನೀಡದ ಹೊರಗುತ್ತಿಗೆ ಪಡೆದ ಸಂಸ್ಥೆ
Last Updated 3 ನವೆಂಬರ್ 2020, 3:16 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಬಡ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ಒದಗಿಸಲು ಕೆಲ ವರ್ಷಗಳ ಹಿಂದೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಆರಂಭಿಸಿದ್ದ ಡಯಾಲಿಸಿಸ್ ಕೇಂದ್ರದ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಪಡೆ ಯಲು ದುಬಾರಿ ವೆಚ್ಚ ತಗಲುತ್ತಿ ದ್ದುದನ್ನು ಮನಗಂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲಾ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಿತ್ತು. ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲೂ ಡಯಾಲಿಸಿಸ್ ಕೇಂದ್ರವನ್ನು ಅಂದಿನ ಸಿಎಂ ಸಿದ್ಧರಾಮಯ್ಯ ಅವರು ಜೂನ್ 3, 2016ರಂದು ಉದ್ಘಾಟಿಸಿದ್ದರು. ಡಯಾಲಿಸಿಸ್ ಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಬಿ.ಆರ್.ಶೆಟ್ಟಿ ಹೆಲ್ತ್ ಅಂಡ್ ರಿಸರ್ಚ್ ಸಂಸ್ಥೆಗೆ ವಹಿಸಲಾಗಿತ್ತು. ಸಂಸ್ಥೆ ಕಳೆದ ಕೆಲವು ದಿನಗಳಿಂದ ಡಯಾಲಿಸಿಸ್‌ಗೆ ಬೇಕಾಗುವ ಪರಿಕರಗಳ ಪೂರೈಕೆಯನ್ನು ಸ್ಥಗಿತಗೊಳಿಸಿರುವುದರಿಂದ ಎರಡು ಮೂರು ದಿನಗಳಲ್ಲಿ ಈ ಸೇವೆಯಿಂದ ರೋಗಿಗಳು ವಂಚಿತರಾಗುವ ಸಾಧ್ಯತೆ ಯಿದೆ ಎಂಬ ದೂರು ಕೇಳಿಬಂದಿದೆ.

ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 16 ರೋಗಿಗಳು ಡಯಾಲಿಸಿಸ್‌ಗೆ ಒಳಾಗುತ್ತಿದ್ದಾರೆ. ಇಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿವೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ತಲಾ ಇಬ್ಬರಂತೆ ಎರಡು ಪಾಳಿಗಳಲ್ಲಿ ನಾಲ್ಕು ಜನರಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ವಾರಕ್ಕೆ 24 ಜನರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ಲಭ್ಯವಾಗುತ್ತಿದೆ. ಒಂದು ವೇಳೆ ಇಲ್ಲಿನ ಡಯಾಲಿಸಿಸ್ ಕೇಂದ್ರ ಸ್ಥಗಿತಗೊಂಡರೆ ಶಿವಮೊಗ್ಗ, ಮಣಿಪಾಲ್ ಮುಂತಾದ ಕಡೆಯಿರುವ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಪಾವತಿಸಿ ಸೇವೆ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣಗುತ್ತದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಡಯಾಲಿಸಿಸ್‌ಗೆ ಒಳಗಾಗುವ ಬಡ ರೋಗಿಗಳು ಖಾಸಗಿ ಆಸ್ಪತ್ರೆ ವೆಚ್ಚ, ವಾಹನ ವೆಚ್ಚವನ್ನು ಭರಿಸ ಬೇಕಾಗುತ್ತದೆ. ಅಲ್ಲದೆ ಹಣ ಪಾವತಿಸಿದರೂ ಖಾಸಗಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಈ ಸೌಲಭ್ಯ ದೊರಯದಿರುವ ಸಾಧ್ಯತೆಯಿದೆ ಎಂಬುದು ರೋಗಿಗಳ ಅಳಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೀರ ಪ್ರಸಾದ್ ಅವರನ್ನು ಸಂಪರ್ಕಿಸಿದಾಗ, ‘ಡಯಾಲಿಸಿಸ್ ಸೇವೆ ಒದಗಿಸಲು ಏಜೆನ್ಸಿ ಪಡೆದ ಕಂಪನಿ ಇದಕ್ಕೆ ಬೇಕಾಗಿರುವ ಸಲಕರಣೆಗಳು, ಔಷಧಿ ಇತ್ಯಾದಿಗಳ ಪೂರೈಕೆ ಸ್ಥಗಿತಗೊಳಿಸಿದೆ. ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಸಮಸ್ಯೆಯಾಗಬಾರದೆಂದು ಆಸ್ಪತ್ರೆಯ ಅನುದಾನದಲ್ಲಿ ₹ 80 ಸಾವಿರಕ್ಕೂ ಅಧಿಕ ವೆಚ್ಚ ಭರಿಸಲಾಗಿದೆ. ಏಜೆನ್ಸಿ ಸಲಕರಣೆ ಒದಗಿಸಿದಿದ್ದರೆ ಸೇವೆ ಸ್ಥಗಿಗೊಳ್ಳುವ ಸಾಧ್ಯತೆಯಿದೆ’ ಎಂದರು.

ಸೇವೆ ಸ್ಥಗಿತಗೊಳಿಸುವುದಿಲ್ಲ: ಈ ಹಿಂದೆ ಡಯಾಲಿಸಿಸ್ ಸೇವೆ ಒದಗಿಸುತ್ತಿದ್ದ ಸಂಸ್ಥೆಯನ್ನು ಬದಲಿಸಿ ಹೊಸ ಏಜೆನ್ಸಿಗೆ ವಹಿಸಲು ಸರ್ಕಾರ ರಾಜ್ಯಮಟ್ಟದಲ್ಲಿ ಟೆಂಡರ್ ಕರೆದಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಡಯಾಲಿಸಿಸ್ ಸೇವೆ ನಿಲ್ಲಿಸುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಉಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT