ಸೋಮವಾರ, ಜುಲೈ 26, 2021
25 °C
ಕೋವಿಡ್‌: ಮಾದರಿ ಪರೀಕ್ಷೆಗೆ ಹಾಸನ, ಶಿವಮೊಗ್ಗ, ಬೆಂಗಳೂರೇ ಗತಿ

ಚಿಕ್ಕಮಗಳೂರಿನ ಪ್ರಯೋಗಾಲಯ ಸ್ಥಾಪನೆ ಪ್ರಕ್ರಿಯೆ ಆಮೆಗತಿ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕೊರೊನಾ ವೈರಾಣು ಪತ್ತೆಗೆ ಮಾದರಿ (ಗಂಟಲು, ಮೂಗಿನ ದ್ರವ) ಪರೀಕ್ಷಿಸುವ ಪ್ರಯೋಗಾಲಯ ಸ್ಥಾಪನೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಹಾಸನ, ಶಿವಮೊಗ್ಗ, ಬೆಂಗಳೂರಿಗೆ ಕಳಿಸಲಾಗುತ್ತಿದ್ದು, ಮಾದರಿ ಪರೀಕ್ಷೆ ಬಾಕಿ ಪಟ್ಟಿ ‘ಹನುಮಂತನ ಬಾಲ’ದಂತೆ ಬೆಳೆಯುತ್ತಿದೆ.

ನಗರದ ಕೋವಿಡ್‌ ಆಸ್ಪತ್ರೆಯಲ್ಲಿ (ಹೆರಿಗೆ ಆಸ್ಪತ್ರೆ) ಪ್ರಯೋಗಾಲಯ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ದಿನಕ್ಕೆ 540 ಮಾದರಿ ಪರೀಕ್ಷೆ ಸಾಮರ್ಥ್ಯದ ಪ್ರಯೋಗಾಲಯ ನಿರ್ಮಾಣ ಮಾಡಲಾಗುತ್ತಿದೆ. ಸಿವಿಲ್‌ ಕಾಮಗಾರಿ ಚಾಲ್ತಿಯಲ್ಲಿದೆ. ಯಂತ್ರೋಪಕರಣ ಅಳವಡಿಸಬೇಕಿದೆ.

ಜುಲೈ ಮೊದಲ ವಾರದ ಹೊತ್ತಿಗೆ ಪ್ರಯೋಗಾಲಯ ಕಾರ್ಯಾರಂಭಿಸಲಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಪ್ರಯೋಗಾಲಯದ ಕಾಮಗಾರಿ ಇನ್ನೂ ಮುಗಿದಿಲ್ಲ.

ಪ್ರಯೋಗಾಲಯ ಸ್ಥಾಪನೆಗೆ ₹1.48 ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ ಸಿವಿಲ್‌ ಕಾಮಗಾರಿ ₹ 25 ಲಕ್ಷ, ಯಂತ್ರೋಪಕರಣಕ್ಕೆ ₹1 ಕೋಟಿ, ಪರಿಕರಗಳಿಗೆ (ಕಿಟ್‌, ರಿಯಾಜೆಂಟ್‌...) ₹ 23 ಲಕ್ಷ ನಿಗದಿಪಡಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಈಗ ‘ಟ್ರೂ–ನಾಟ್‌’ (ಟ್ರೂ–ನ್ಯೂಕ್ಲಿಕ್‌ ಆ್ಯಸಿಡ್‌ ಆ್ಯಂಪ್ಲಿಕೇಷನ್‌ ಟೆಸ್ಟ್‌) ಯಂತ್ರ ಇದೆ. ಅದರಲ್ಲಿ ನಿತ್ಯ 45 ಮಾದರಿಗಳನ್ನು ಮಾತ್ರ ಪರೀಕ್ಷಿಸಬಹುದಾಗಿದೆ.

‘ಆದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸಿ, ಪ್ರಯೋಗಾಲಯ ಸಜ್ಜುಗೊಳಿಸಬೇಕು. ಜಿಲ್ಲೆಯಲ್ಲೇ ಮಾದರಿ ಪರೀಕ್ಷೆಗೆ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಐಎಂಎ ಚಿಕ್ಕಮಗಳೂರು ಘಟಕದ ಮಾಜಿ ಪದಾಧಿಕಾರಿಯೊಬ್ಬರು ಹೇಳುತ್ತಾರೆ.

ಕೋವಿಡ್‌ ಹಾವಳಿ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಈವರೆಗೆ (ಜುಲೈ 7) ಒಟ್ಟು ಪ್ರಕರಣಗಳ ಸಂಖ್ಯೆ 100ಕ್ಕೆ ಏರಿದೆ. 1,724 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. ಮಾದರಿಗಳ ಸಂಗ್ರಹ ಪ್ರಮಾಣವೂ ಜಾಸ್ತಿಯಾಗಿದೆ. ಕೆಲ ದಿನ 500ಕ್ಕೂ ಹೆಚ್ಚು ಮಂದಿಯದ್ದು ಸಂಗ್ರಹಿಸಲಾಗಿದೆ.

ಪ್ರತಿ ದಿನ ಈ ಮಾದರಿಗಳನ್ನು ಹಾಸನ, ಶಿವಮೊಗ್ಗಕ್ಕೆ ಆಂಬುಲೆನ್ಸ್‌ನಲ್ಲಿ ರವಾನಿಸಬೇಕು. ಈ ಎರಡೂ ಕಡೆ ಮಾದರಿಗಳು ಜಾಸ್ತಿ ಇದ್ದರೆ, ಬೆಂಗಳೂರಿಗೆ ಒಯ್ಯಲು ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇದೆ.

‘ತಮ್ಮ ಜಿಲ್ಲೆಯ ಮಾದರಿಗಳ ಪರೀಕ್ಷೆ ಜೊತೆಗೆ ಬೇರೆ ಜಿಲ್ಲೆಗಳದ್ದನ್ನು ಮಾಡುತ್ತಾರೆ. ಅವರ ಜಿಲ್ಲೆ ಮಾದರಿಗಳಿಗೆ ಪ್ರಾಶಸ್ತ್ಯ ನೀಡಿ, ನಮ್ಮವನ್ನು ಕೊನೆಗೆ ಮಾಡುತ್ತಾರೆ. ಹೀಗಾಗಿ, ಮಾದರಿ ಪರೀಕ್ಷಾ ವರದಿಗಳು ಬಾಕಿ ಪಟ್ಟಿ ಉದ್ದ ಇದೆ’ ಎಂದು ಹೆಸರು ಹೇಳಲಿಚ್ಛಿಸದ ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು