ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ‘ಬಿಸಿಎ’ ಆರಂಭಿಸಲು ಕೊಠಡಿ ಕೊರತೆ

Published 9 ಮೇ 2024, 8:08 IST
Last Updated 9 ಮೇ 2024, 8:08 IST
ಅಕ್ಷರ ಗಾತ್ರ

ಕಳಸ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಪದವಿ ಆರಂಭಿಸಬೇಕು ಎಂದು ವಿದ್ಯಾರ್ಥಿಗಳು, ಪೋಷಕರಿಂದ ಒತ್ತಡ ಇದೆ. ಆದರೆ, ‘ಬಿಸಿಎ’ ಪದವಿ ಆರಂಭಿಸಲು ಕೊಠಡಿ ಕೊರತೆ ಉಂಟಾಗಿದೆ.

ಕಾಲೇಜಿನಲ್ಲಿ ಬಿಸಿಎ ಆರಂಭಿಸಲು ಕಂಪ್ಯೂಟರ್ ಲ್ಯಾಬ್, ಹೊರನಾಡು ದೇವಸ್ಥಾನವು ಶಿಕ್ಷಕರೊಬ್ಬರನ್ನು ನೇಮಿಸಿದೆ. ಆದರೆ, ತರಗತಿ ನಡೆಸಲು ಕೊಠಡಿಗಳ ಕೊರತೆ ಇರುವುದರಿಂದ ಈ ವರ್ಷವೂ ಬಿಸಿಎ ತರಗತಿ ಆರಂಭವಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಬಿಸಿಎ ಪದವಿ ಪಡೆಯಲು ದೂರದ ಊರುಗಳಿಗೆ, ದುಬಾರಿ ಹಣ ವೆಚ್ಚ ಮಾಡಿ ತೆರಳುವುದು ಅನಿವಾರ್ಯವಾಗಿದೆ.

ಸದ್ಯ ಬಿ.ಎ., ಬಿ.ಕಾಂ. ಪದವಿ ತರಗತಿ ನಡೆಯುತ್ತಿದ್ದು ಒಟ್ಟು 227 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ ಬಿ.ಕಾಂ. ಪದವಿಗೆ 70, ಬಿ.ಎ ಪದವಿಗೆ 130  ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶ ಇದೆ. ಆದರೆ, ನಿರೀಕ್ಷಿಸಿದಷ್ಟು ಪ್ರವೇಶ ಆಗುತ್ತಿಲ್ಲ.

2022–23ನೇ ಸಾಲಿನಲ್ಲಿ ನಾಕ್‌ನಿಂದ ಕಾಲೇಜಿಗೆ ‘ಎ’ ಗ್ರೇಡ್ ಮಾನ್ಯತೆ ಸಿಕ್ಕಿತ್ತು. ಅದರನ್ವಯ ಜಿಲ್ಲೆಯಲ್ಲೇ ಅಗ್ರ ಶ್ರೇಣಿಯ ಅಂಕ ಗಳಿಸಿದ್ದ ಕಾಲೇಜಿಗೆ ಗರಿಷ್ಠ ಅನುದಾನ ಸಿಗುವ ನಿರೀಕ್ಷೆಯೂ ಇತ್ತು. ಆದರೆ, ಈವರೆಗೂ ಯಾವುದೇ ಅನುದಾನ ಸಿಗದ ಹಿನ್ನೆಲೆ ಕಾಲೇಜಿನ ಅಭಿವೃದ್ಧಿ ಕಾರ್ಯ ಕುಂಠಿತ ಆಗಿದೆ. ಹೆಚ್ಚುವರಿ ಕೊಠಡಿಗಳು, ಕ್ರೀಡಾಂಗಣ, ಕ್ಯಾಂಪಸ್ ಬೇಲಿ, ಉದ್ಯಾನ ಹಾಗೂ ಸೌಂದರ್ಯವರ್ಧನೆಯ ಯೋಜನೆಗಳು ನೆನಗುದಿಗೆ ಬಿದ್ದಿವೆ.

ಕಾಲೇಜಿನಲ್ಲಿ ಬೋಧಕೇತರ ಸಿಬ್ಬಂದಿ ಕೊರತೆ ಇದೆ. ಸದ್ಯ 9 ಖಾಯಂ ಬೋಧಕರು, 10 ಅತಿಥಿ ಬೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಗುಮಾಸ್ತ, ಟೈಪಿಸ್ಟ್, ಗ್ರಂಥಾಲಯ ಸಹಾಯಕ, ಮೂವರು ಸಹಾಯಕರು ಮತ್ತು 3 ‘ಡಿ’ಗ್ರೂಪ್ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಇದರಿಂದ ಕಾಲೇಜಿನ ದಿನನಿತ್ಯದ ಚಟುವಟಿಕೆ ನಿರ್ವಹಿಸಲು ತೊಂದರೆ ಆಗುತ್ತಿದೆ ಎನ್ನುತ್ತಾರೆ ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ‘ಎ’ ಗ್ರೇಡ್ ಪಡೆದ 20 ಸರ್ಕಾರಿ ಕಾಲೇಜುಗಳಲ್ಲಿ ಕಳಸ ಕಾಲೇಜು ಕೂಡ ಒಂದು ಎಂಬ ಹೆಗ್ಗಳಿಕೆ ಸಾಧಿಸಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲವು ಪ್ರತಿದಿನವೂ ಮಧ್ಯಾಹ್ನ ವಿದ್ಯಾರ್ಥಿಗಳಿಗೆ  ಭೋಜನದ ವ್ಯವಸ್ಥೆ ಮಾಡುತ್ತಿದೆ. ಆದರೂ, ನಿರೀಕ್ಷಿಸಿದಷ್ಟು ವಿದ್ಯಾರ್ಥಿಗಳ ದಾಖಲಾತಿ ಆಗುತ್ತಿಲ್ಲ.

ಈ ಕುರಿತು ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹಿತ್ತಲಮಕ್ಕಿ, ‍‘ಸರ್ಕಾರಿ ಕಾಲೇಜುಗಳಲ್ಲಿ ಹೊಸ ಹೊಸ ಕೋರ್ಸ್‍ಗಳು ಇಲ್ಲ. ಸರ್ಕಾರ ಕೂಡ ವಿದ್ಯಾರ್ಥಿಗಳ ಮನದ ಇಂಗಿತ ಅರಿತು ಹೊಸ ಕೋರ್ಸ್ ಆರಂಭಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ದೂರದ ಊರುಗಳ ಖಾಸಗಿ ಕಾಲೇಜು ಸೇರುತ್ತಾರೆ’ ಎಂದರು.

ಅತಿಥಿ ಉಪನ್ಯಾಸಕರು ಸೇವಾಭದ್ರತೆಯ ಚಿಂತೆ ಕಾರಣಕ್ಕೆ ಗುಣಮಟ್ಟದ ಬೋಧನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಬೋಧಕೇತರ ಸಿಬ್ಬಂದಿ ನೇಮಕ ಮಾಡದಿದ್ದರೆ ನ್ಯಾಕ್ ಮಾನ್ಯತೆ ಸಿಕ್ಕಿದ್ದೂ ಕೂಡ ಉಪಯೋಗ ಇಲ್ಲ ಎಂದು ಅವರು ಹೇಳುತ್ತಾರೆ.

ಶಾಸಕರ ಅನುದಾನದಲ್ಲಿ ಇಷ್ಟು ದೊಡ್ಡ ಸಂಸ್ಥೆಗೆ ಹೆಚ್ಚಿನ ಅನುಕೂಲ ಆಗದು. ಸರ್ಕಾರವೇ ಹೆಚ್ಚಿನ ಅನುದಾನ ಕೊಟ್ಟು ಕಾಲೇಜಿಗೆ ಕ್ರೀಡಾಂಗಣ, ಉದ್ಯಾನ, ಕೊಠಡಿಗಳ ನಿರ್ಮಾಣ ಮಾಡಬೇಕು. ತುರ್ತಾಗಿ ಬಿ.ಎಸ್ಸಿ, ಬಿಸಿಎ ಕೋರ್ಸ್‍ಗಳನ್ನು ಆರಂಭಿಸಬೇಕು ಎಂದೂ ಆಗ್ರಹಿಸುತ್ತಾರೆ.

ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ಲ್ಯಾಬ್ .
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ಲ್ಯಾಬ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT