ನರಸಿಂಹರಾಜಪುರದ ಮಿನಿವಿಧಾನಸೌಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿ ಕಚೇರಿ
ತರೀಕೆರೆ ಉಪನೋಂದಣಾಧಿಕಾರಿ ಕಚೇರಿ
ಮೆಟ್ಟಿಲು ಹತ್ತುವುದೇ ಸಮಸ್ಯೆ
ಕೊಪ್ಪ: ತಾಲ್ಲೂಕು ಕಚೇರಿಯಲ್ಲಿನ ಮಹಡಿಯ ಮೇಲೆ ಉಪ ನೋಂದಣಾಧಿಕಾರಿ ಕಚೇರಿ ಇದ್ದು ಮೆಟ್ಟಿಲು ಹತ್ತಿಕೊಂಡು ಹೋಗುವುದು ವೃದ್ಧರಿಗೆ ಅಂಗವಿಕಲರಿಗೆ ತೀವ್ರ ಸಮಸ್ಯೆಯಾಗಿದೆ. ಕಚೇರಿಯ ಕೆಳಭಾಗದ ಕೊಠಡಿಯಲ್ಲಿ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಐದಾರು ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿದೆ. ಆದರೂ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿದೆ. ಆದರೆ ಅನುಷ್ಠಾನಗೊಂಡಿಲ್ಲ. ಉಪನೋಂದಣಿ ಕಚೇರಿ ಕೊಠಡಿಯ ಹೊರ ಭಾಗದಲ್ಲಿ ಸಾಕಷ್ಟು ಆಸನಗಳ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ವೃದ್ಧರೂ ಒಳಗೊಂಡಂತೆ ಹಲವರು ನಿಂತುಕೊಂಡೇ ಕಾಯಬೇಕಾದ ಸ್ಥಿತಿ ಇದೆ. ಇಲ್ಲಿ ಯಾವಾಗಲೂ ಕಂಪ್ಯೂಟರ್ ದುರಸ್ತಿ ಸರ್ವರ್ ಸಮಸ್ಯೆಯ ದೂರುಗಳು ಸಾಮಾನ್ಯವಾಗಿವೆ.
ಬರಗಾಲ: ನೋಂದಣಿ ಕಡಿಮೆ
ನರಸಿಂಹರಾಜಪುರ: ತಾಲ್ಲೂಕಿನಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಮಿನಿವಿಧಾನಸೌಧದ ಕಟ್ಟಡದ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿದೆ. ಉಪನೋಂದಣಾಧಿಕಾರಿ ಕಚೇರಿಯಲ್ಲಿರುವ ಪೀಠೋಪಕರಣ ಸಿಬ್ಬಂದಿ ದಾಖಲೆ ಸಂರಕ್ಷಣೆಗೆ ಸಾಕಾಗುವಷ್ಟು ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಿನಿವಿಧಾನ ಸೌಧದಲ್ಲಿರುವುದರಿಂದ ಶೌಚಾಲಯ ವ್ಯವಸ್ಥೆ ಕುಡಿಯುವ ನೀರಿನ ಸೌಲಭ್ಯವು ಇದೆ. ಆಸ್ತಿ ವಿವಾಹ ನೋಂದಣಿಗೆ ಬರುವವರು ಕುಳಿತುಕೊಳ್ಳಲು ಕಚೇರಿಯ ಹೊರಭಾಗದಲ್ಲಿ ಕುರ್ಚಿಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಆನ್‌ಲೈನ್ ಮೂಲಕ ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸುವುದರಿಂದ ಯಾವ ದಿನ ನೋಂದಣಿಗೆ ಹೋಗಬೇಕೆಂಬುದನ್ನು ನೋಂದಣಿ ಮಾಡಿಕೊಳ್ಳುವವರಿಗೆ ಆನ್‌ಲೈನ್‌ನಲ್ಲಿ ಅವಕಾಶ ಇರುವುದರಿಂದ ಕಚೇರಿಗೆ ಬಂದು ಕಾಯುವ ಸ್ಥಿತಿ ಈ ಹಿಂದಿನಂತಿಲ್ಲ. ಅವರೇ ಆಯ್ಕೆ ಮಾಡಿಕೊಂಡ ದಿನದಂದು ಬಂದು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಈ ವರ್ಷ ಬರಗಾಲದ ಸನ್ನಿವೇಶ ಇರುವುದರಿಂದ ಆಸ್ತಿ ಮಾರಾಟ ಮತ್ತು ಖರೀದಿ ಕಡಿಮೆ ಇರುವುದರಿಂದ ನೋಂದಣಿ ಪ್ರಮಾಣವು ಕಡಿಮೆಯಿದೆ ಎಂದು ಉಪನೋಂದಣಾಧಿಕಾರಿ ಹೇಮೇಶ್ ತಿಳಿಸಿದರು.
ಶೌಚಾಲಯ ಕೊರತೆ
ಶೃಂಗೇರಿ: ತಾಲ್ಲೂಕಿನ ಉಪನೋಂದಣಾಧಿಕಾರಿ ಕಚೇರಿ ತಾಲ್ಲೂಕು ಕಚೇರಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ತಾಲ್ಲೂಕಿನಲ್ಲಿ ಉದ್ಯೋಗದ ಕೊರತೆ ಮತ್ತು ಜನಸಂಖ್ಯೆ ಕಡಿಮೆ ಇರುವುದರಿಂದ ಆಸ್ತಿ ನೋಂದಣಿ ಕಡಿಮೆಯಾಗುತ್ತಿದೆ. ಮಲೆನಾಡಿನಲ್ಲಿ ಅಡಿಕೆಗೆ ಹಳದಿ ಎಲೆರೋಗ ಮತ್ತು ಎಲೆಚುಕ್ಕಿ ರೋಗದ ಹೆಚ್ಚಾಗಿರುವುದರಿಂದ ಜಮೀನು ಮತ್ತು ಮನೆಗಳ ಕೊಂಡು ಮತ್ತು ಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದೆ. ತಾಲ್ಲೂಕು ಕಚೇರಿ ಕಟ್ಟಡದಲ್ಲಿ ಒಂದೇ ಶೌಚಾಲಯ ಇರುವುದರಿಂದ ಉಪನೋಂದಣಾಧಿಕಾರಿ ಕಚೇರಿ ಮತ್ತು ತಾಲ್ಲೂಕು ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಯೋಗಿಸುವ ಪರಿಸ್ಥಿತಿ ಇದೆ.
ಶೌಚಾಲಯ ಇಲ್ಲದೆ ಪರದಾಟ
ತರೀಕೆರೆ: ಉಪನೋಂದಣಾಧಿಕಾರಿ ಕಚೇರಿಗೆ ಪ್ರತಿದಿನ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯ ಇಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಉಪನೋಂದಾಣಾಧಿಕಾರಿ ಕಚೇರಿಯಲ್ಲಿ ಪತ್ರಾಂಕಿತ ವ್ಯವಹಾರ ನಡೆಸುವ ಸಂದರ್ಭದಲ್ಲಿ ಸಾಕಷ್ಟು ಸಮಯ ಕಾಯಬೇಕಿದೆ. ಕುಳಿತುಕೊಳ್ಳಲು ಆಸನಗಳ ಅವಶ್ಯಕತೆ ಇರುತ್ತದೆ. ಆದರೆ ಈಗ ಸದ್ಯ ಕೆಲವೇ ಆಸನಗಳು ಇರುವುದರಿಂದ ಇನ್ನು ಹೆಚ್ಚಿನ ಆಸನಗಳ ಅವಶ್ಯಕತೆ ಇದೆ. ಇದರ ಜೊತೆಗೆ ಕಚೇರಿಯ ಹೊರಭಾಗದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.