ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆ ಒತ್ತುವರಿ ಅವ್ಯಾಹತವಾಗಿ ನಡೆದಿದೆ. 761 ಕೆರೆಗಳಲ್ಲಿ 1,243 ಎಕರೆಯಷ್ಟು ಒತ್ತುವರಿ ಗುರುತಿಸಿದ್ದು, ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿಲ್ಲ.
ಜಿಲ್ಲೆಯಲ್ಲಿ 1,729 ಕೆರೆಗಳಿದ್ದು, ಈ ಪೈಕಿ 761 ಕೆರೆಗಳು ಒತ್ತುವರಿಯಾಗಿವೆ. ಸರ್ವೆ ಮಾಡಿದ್ದರೂ ತೆರವು ಕಾರ್ಯಾಚರಣೆಗೆ ಹಲವು ತೊಡಕುಗಳು ಕಾಡುತ್ತಿವೆ. 166 ಕೆರೆಗಳ ಒತ್ತುವರಿ ತೆರವಾಗಿದೆ. ಆದರೆ, ಇನ್ನೂ 595 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ.
ಕಡೂರು ತಾಲ್ಲೂಕಿನಲ್ಲೇ ಕೆರೆ ಒತ್ತುವರಿ ಹೆಚ್ಚಿನ ಪ್ರಮಾಣದಲ್ಲಿದೆ. 290 ಕೆರೆಗಳ ಪೈಕಿ 120 ಕೆರೆಗಳಲ್ಲಿ 527 ಎಕರೆಯಷ್ಟು ಒತ್ತುವರಿಯಾಗಿದೆ. ಇನ್ನೂ 81 ಕೆರೆಗಳ 355 ಎಕರೆಯಷ್ಟು ತೆರವು ಬಾಕಿ ಇದೆ.
ಕಂದಾಯ ಇಲಾಖೆ, ಭೂಮಾಪನ ಇಲಾಖೆ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚನೆಯಾಗಿದೆ. ಪ್ರತಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದರೆ, ಒಂದಿಲ್ಲೊಂದು ಕಾರಣ ನೀಡಿ ವಿಳಂಬ ಮಾಡಲಾಗುತ್ತಿದೆ.
ಒತ್ತುವರಿದಾರರು ಬಹುತೇಕ ಬಲಾಡ್ಯರೇ ಇದ್ದಾರೆ. ರಾಜಕೀಯ ಒತ್ತಡಗಳೂ ತೆರವಿಗೆ ವಿಳಂಬವಾಗುತ್ತಿದೆ ಎಂಬ ಆರೋಪಗಳಿವೆ. ‘ಯಾವುದೇ ಒತ್ತಡಕ್ಕೂ ಮಣಿಯಬಾರದು. ಕೆರೆ ಒತ್ತುವರಿ ತೆರವುಗೊಳಿಸಿ ಪ್ರತಿ ಶುಕ್ರವಾರ ವರದಿ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೆರೆಯಲ್ಲಿ ನೀರಿದ್ದು, ಅಲ್ಲಿಗೆ ಜೆಸಿಬಿಯೊಂದಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಕಾರಣಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಬೇಸಿಗೆಯಲ್ಲಿ ಎಲ್ಲಾ ಕೆರೆಗಳು ಖಾಲಿಯಾಗಿದ್ದವು. ಆಗ ಸಮರೋಪಾದಿಯಲ್ಲಿ ತೆರವು ಕಾರ್ಯಾಚರಣೆ ನಡೆಸಬಹುದಿತ್ತು ಎಂಬುದು ಜನರ ಪ್ರಶ್ನೆ.
ಶೃಂಗೇರಿ, ಕೊಪ್ಪ ಒತ್ತುವರಿ ಮುಕ್ತ
ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕಿನ ಕೆರೆಗಳ ಒತ್ತುವರಿ ತೆರವು ಸಂಪೂರ್ಣಗೊಂಡಿದ್ದು, ಅಲ್ಲಿನ ಕೆರೆಗಳು ಒತ್ತುವರಿಯಿಂದ ಮುಕ್ತವಾಗಿವೆ. ಶೃಂಗೇರಿಯಲ್ಲಿ 16 ಕೆರೆಗಳಿದ್ದು, 8 ಕೆರೆಗಳಲ್ಲಿ 1 ಎಕರೆ 6 ಗುಂಟಿಯಷ್ಟು ಒತ್ತುವರಿಯನ್ನು ಅಧಿಕಾರಿಗಳು ಗುರುತಿಸಿದ್ದರು. ಅಷ್ಟನ್ನೂ ತೆರವುಗೊಳಿಸಲಾಗಿದೆ. ಕೊಪ್ಪ ತಾಲ್ಲೂಕಿನಲ್ಲಿ 73 ಕೆರೆಗಳಿದ್ದು, ಅವುಗಳ ಪೈಕಿ 14 ಕೆರೆಗಳಲ್ಲಿ 6 ಎಕರೆ 19 ಗುಂಟೆಯಷ್ಟು ಒತ್ತುವರಿಯನ್ನು ಅಧಿಕಾರಿಗಳು ಗುರುತಿಸಿದ್ದರು. ಅಷ್ಟನ್ನೂ ತೆರವುಗಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
81 ಕೆರೆಯಲ್ಲಿ ತೆರವು ಬಾಕಿ
ಕಡೂರು: ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಗೆ ಸೇರಿರುವ 290 ಕೆರೆಗಳಿವೆ. ಈ ಎಲ್ಲಾ ಕೆರೆಗಳ ಸರ್ವೆ ಕಾರ್ಯ ಮುಗಿದಿದೆ. ಒಟ್ಟು 527.16 ಎಕರೆ ಕೆರೆ ಭೂಮಿ ಒತ್ತುವರಿಯಾಗಿದೆ. ಈ ಪೈಕಿ 39 ಕೆರೆಗಳಲ್ಲಿ ಒತ್ತುವರಿಯಾದ 171 ಎಕರೆ ಭೂಮಿಯನ್ನು ತೆರವುಗೊಳಿಸಲಾಗಿದೆ.
ಬಾಕಿ ತೆರವಿಗೆ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೆ ಉಳಿದ ಒತ್ತುವರಿ ಖುಲ್ಲಾಗೊಳಿಸಲಾಗುತ್ತದೆ ಎಂದು ತಹಶೀಲ್ದಾರ್ ಪೂರ್ಣಿಮಾ ತಿಳಿಸಿದರು.
81 ಕೆರೆಗಳಲ್ಲಿ ಒತ್ತುವರಿಯಾಗಿರುವ 355 ಎಕರೆ ತೆರವು ಇನ್ನೂ ಬಾಕಿ ಇದೆ. ಎಮ್ಮೆದೊಡ್ಡಿ ವ್ಯಾಪ್ತಿಯ ಕೆರೆಗಳು, ಚೌಳಹಿರಿಯೂರು, ಎಂ.ಕೋಡಿಹಳ್ಳಿ ಕೆರೆಗಳು ಸಾಕಷ್ಟು ಒತ್ತುವರಿಯಾಗಿದೆ ಎಂಬ ಆರೋಪಗಳಿವೆ.
ಪಟ್ಟಣದ ವ್ಯಾಪ್ತಿಯಲ್ಲೇ ಹೆಚ್ಚು ಒತ್ತುವರಿ
ನರಸಿಂಹರಾಜಪುರ: ಪಟ್ಟಣ ವ್ಯಾಪ್ತಿಯಲ್ಲೇ ಹೆಚ್ಚು ಕೆರೆಗಳ ಒತ್ತುವರಿಯಾಗಿದ್ದು, ಕೆರೆಯಂಗಳದಲ್ಲೇ ಮನೆಗಳು, ಮಾರುಕಟ್ಟೆಗಳು ನಿರ್ಮಾಣವಾಗಿದೆ. ಒತ್ತುವರಿ ತೆರವುಗೊಳಿಸಿದರೆ ಬಹುತೇಕ ಪಟ್ಟಣವೇ ಖಾಲಿಯಾಗಲಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಪ್ರಮುಖ ನಾಲ್ಕು ಕೆರೆಗಳಿದ್ದು ಕೆರೆ ವ್ಯಾಪ್ತಿ ಮತ್ತು ಬಫರ್ ಪ್ರದೇಶದಲ್ಲಿ ಸುಮಾರು 40–50 ಐವತ್ತು ವರ್ಷಗಳ ಹಿಂದೆಯೇ ಸ್ಥಳೀಯ ಸಂಸ್ಥೆಗಳು ಹರಾಜಿನ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಿ ಹಕ್ಕು ಪತ್ರಗಳನ್ನು ನೀಡಿದೆ. ಮನೆಗಳನ್ನೂ ನಿರ್ಮಾಣ ಮಾಡಿಕೊಳ್ಳಲಾಗಿದೆ. ಮೂಲ ಸೌಕರ್ಯ ಸಹ ಒದಗಿಸಲಾಗಿದ್ದು, ಇವುಗಳು ಬಹುತೇಕ ಮುಖ್ಯರಸ್ತೆಗೆ ಹೊಂದಿಕೊಂಡಿವೆ. ಈ ಮನೆಗಳಿಗೆ ಆಗಾಗ ನೋಟಿಸ್ ನೀಡುವ ಕಂದಾಯ ಇಲಾಖೆ ಸುಮ್ಮನಾಗುತ್ತಿದೆ.
ತಾಲ್ಲೂಕಿನಲ್ಲಿ ಸದ್ಯ 179 ಕೆರೆಗಳಿದ್ದು, ಈ ಪೈಕಿ 68 ಕೆರೆಗಳಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಗುರುತಿಸಲಾಗಿದೆ. 55 ಕೆರೆಗಳಲ್ಲಿ ಒತ್ತುವರಿ ತೆರವಾಗಿದ್ದರೆ, ಇನ್ನೂ 13 ಕೆರೆಗಳಲ್ಲಿ 20 ಎಕರೆಯಷ್ಟು ಒತ್ತುವರಿ ತೆರವಾಗಬೇಕಿದೆ ಎಂಬುದು ಅಧಿಕಾರಿಗಳು ನೀಡುವ ಅಂಕಿ–ಅಂಶ.
ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಿಸಿದ್ದರೂ ಕೆರೆಗಳ ಬಫರ್ ವಲಯದಲ್ಲಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ರಸ್ತೆ ನಿರ್ಮಿಸಿರುವ ಉದಾಹರಣೆಗಳೂ ಇವೆ ಎಂದು ಸ್ಥಳೀಯರು ಹೇಳುತ್ತಾರೆ.
ಬುಕ್ಕಾಂಬುಧಿ ಕೆರೆ ಮತ್ತಷ್ಟು ಒತ್ತುವರಿ ಅಜ್ಜಂಪುರ: ತಾಲ್ಲೂಕಿನ 86 ಕೆರೆಗಳಲ್ಲಿ 35 ಒತ್ತುವರಿಯಾಗಿದ್ದು ಇದರಿಂದ ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ನಿಧಾನವಾಗಿ ಅವು ನೆಲೆ ಕಳೆದುಕೊಳ್ಳುತ್ತಿವೆ. ಕೆರೆಯಂಚಿನಲ್ಲಿ ಅತಿಕ್ರಮಣಕಾರರು ತೆಂಗು ಅಡಿಕೆ ಬಾಳೆ ಬೆಳೆದಿದ್ದಾರೆ. ಕೆಲವರಂತೂ ತಂತಿ-ಕಂಬ ಅಳವಡಿಸಿ ಸ್ವಂತ ಜಾಗವೆಂದು ಬಿಂಬಿಸಲು ಹೊರಟಿದ್ದಾರೆ. ಜಿಲ್ಲೆ ಮತ್ತು ನೆರೆಯ ದಾವಣಗೆರೆ ಜಿಲ್ಲಾ ಗಡಿಯಂಚಿಗೂ ಚಾಚಿರುವ ತಾಲ್ಲೂಕಿನ ಬುಕ್ಕಾಂಬುಧಿಯ ಐತಿಹಾಸಿಕ ಬುಕ್ಕರಾಯ ಕೆರೆ(ದೊಡ್ಡಕೆರೆ) ಒತ್ತುವರಿಯಿಂದ ಹೊರತಾಗಿಲ್ಲ. 50ರಿಂದ 100 ಎಕರೆಯಷ್ಟು ಒತ್ತುವರಿದಾರರ ಪಾಲಾಗಿದೆ. ಒತ್ತುವರಿ ತೆರವಿಗೊಳಿಸುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಅಗಿಲ್ಲ ಎನ್ನುತ್ತಾರೆ ವಕೀಲ ಕೊಟ್ರೋಶ್. ‘ಕೆರೆ ಒತ್ತುವರಿದಾರರು ಪ್ರಭಾವಿಗಳೇ ಆಗಿದ್ದಾರೆ. ರಾಜಕೀಯ ಒತ್ತಡ ಹಾಕಿ ಕೆರೆ ಸರ್ವೆ ಕಾರ್ಯ ಮುಂದೂಡಿಸುತ್ತಾರೆ. ಆದ್ದರಿಂದಲೇ ತೆರವು ಸಾಧ್ಯವಾಗುತ್ತಿಲ್ಲ’ ಎಂಬುದು ಸ್ಥಳೀಯರ ಆರೋಪ. ಬೇಸಿಗೆಯಲ್ಲಿ ಅಜ್ಜಂಪುರ ತಾಲ್ಲೂಕು ನೀರಿನ ಸಮಸ್ಯೆ ಎದುರಿಸಿತ್ತು. ಜನ-ಜಾನುವಾರು ನೀರಿನ ಭವಣೆ ಅನುಭವಿಸಿದ್ದರು. ಇಂತಹ ತಾಲ್ಲೂಕಿನ ನೀರಿನ ಮೂಲವಾದ ಕೆರೆಗಳು ಅಸ್ಥಿತ್ವ ಕಳೆದುಕೊಳ್ಳುತ್ತಿದ್ದರೂ ಸಂಭಂಧ ಇಲ್ಲವೆಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಬೇಸಿಗೆಯಲ್ಲಿ ಬುಕ್ಕಾಂಬುಧಿ ಕೆರೆ ಖಾಲಿಯಾಗಿತ್ತು. ಅದೇ ಕೆರೆಯ ಮಣ್ಣು ತೆಗೆದು ಸುತ್ತಮುತ್ತ ಜಮೀನಿನವರು ಕೆರೆ ಒತ್ತುವರಿ ಮಾಡಿದ್ದಾರೆ. ಇದು ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆ. ‘ಈವರೆಗೆ 6 ಕೆರೆಗಳ ಒತ್ತುವರಿ ಖುಲ್ಲಾಗೊಳಿಸಲಾಗಿದೆ. ಉಳಿದ 29 ಕೆರೆಯಲ್ಲಿನ ಅತಿಕ್ರಮಣ ತೆರವಿಗೆ ಕ್ರಮ ವಹಿಸಿದ್ದೇವೆ’ ಎಂದು ತಹಶೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಹೇಳಿದರು.
106 ಕೆರೆಯಲ್ಲಿ ಒತ್ತುವರಿ: 2 ಕೆರೆಯಷ್ಟೇ ತೆರವು ತರೀಕೆರೆ: ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಸೇರಿ ತಾಲ್ಲೂಕಿನಲ್ಲಿ 224 ಕೆರೆಗಳಿದ್ದು 106 ಕೆರೆಗಳಲ್ಲಿ 191 ಎಕರೆಯಷ್ಟು ಒತ್ತುವರಿಯಾಗಿದೆ. ಈ ಪೈಕಿ ಎರಡು ಕೆರೆಗಳಲ್ಲಿನ ಒತ್ತುವರಿಯನ್ನಷ್ಟೇ ತೆರವುಗೊಳಿಸಲಾಗಿದ್ದು ಇನ್ನೂ 104 ಕೆರೆಗಳ ಒತ್ತುವರಿ ತೆರವಾಗಬೇಕಿದೆ ಎಂಬ ಪಟ್ಟಿ ಜಿಲ್ಲಾಡಳಿತದ ಮುಂದಿದೆ. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 23 ದೊಡ್ಡ ಕೆರೆಗಳಿದ್ದು ಅವುಗಳ ಒತ್ತುವರಿ ಸರ್ವೆ ಮಾಡಲಾಗಿದೆ. ಅವುಗಳಲ್ಲಿ ಸುಮಾರು 10 ಕೆರೆಗಳಲ್ಲಿ ಒತ್ತುವರಿಯಾಗಿದೆ. ಹಿರೆಕಾತೂರು ಚಿಕ್ಕಾತೂರು ಅಮೃತಾಪುರದ ಚಿಕ್ಕಕೆರೆ ಮತ್ತು ದೊಡ್ಡಕೆರೆ ಬೇಲಿಬಸವನಹಳ್ಳಿ ಎಚ್.ಮಲ್ಲೇನಹಳ್ಳಿ ಗ್ರಾಮದ 7 ಕೆರೆಗಳ ಸುಮಾರು 13 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನುಳಿದ ಇಟ್ಟಿಗೆ ರಾಮನಹಳ್ಳಿ ತರೀಕೆರೆಯ ದೊಡ್ಡಕೆರೆ ಹೊಸಹಳ್ಳಿ ಸುಣ್ಣದಹಳ್ಳಿ ಕೆರೆಗಳ ಒಟ್ಟು 10 ಎಕರೆ ಪ್ರದೇಶವನ್ನು ತೆರವುಗೊಳಿಸಬೇಕಾಗಿದೆ. ‘ಮಳೆಗಾಲದಲ್ಲಿ ಎಲ್ಲಾ ಕೆರೆಗಳು ತುಂಬಿದ್ದು ತೆರವಿಗೆ ಅಡಚರಣೆಯಾಗಿದೆ. ನೀರಿನ ಪ್ರಮಾಣ ಕಡಿಮೆಯಾದ ನಂತರ ತೆರವುಗೊಳಿಸಲಾಗುವುದು ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರತ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ದಾಖಲೆಗಷ್ಟೇ ಸೀಮಿತವಾದ ಕೆರೆ ಒತ್ತುವರಿ ತೆರವು ಮೂಡಿಗೆರೆ: ತಾಲ್ಲೂಕಿನಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಚರಣೆಯು ದಾಖಲೆಗಷ್ಟೇ ಸೀಮಿತವಾಗಿದ್ದು ಭೌತಿಕವಾಗಿ ಒತ್ತುವರಿ ತೆರವು ಸಾಧನೆಯು ಶೂನ್ಯವಾಗಿದೆ. ತಾಲ್ಲೂಕಿನಲ್ಲಿರುವ 191 ಕೆರೆಗಳ ಪೈಕಿ 64 ಕೆರೆಗಳು ಒತ್ತುವರಿ ಪಟ್ಟಿಯಲ್ಲಿದ್ದು ಒತ್ತುವರಿ ಗುರುತು ಮಾಡಲು ಕಂದಾಯ ಇಲಾಖೆ ಸರ್ವೆ ಇಲಾಖೆಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿದ್ದರೂ ಅವುಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯಸಾಧಿಸದೇ ಇರುವುದರಿಂದ ಒತ್ತುವರಿ ತೆರವು ಮರೀಚಿಕೆಯಾಗಿದೆ. ಪ್ರತಿ ವರ್ಷ ತುಂಬುವ ಹೂಳಿನಿಂದ ಕೆರೆಯ ದಂಡೆಗಳು ಮುಚ್ಚುತ್ತಿದ್ದು ಕೆರೆಯ ಅಕ್ಕ–ಪಕ್ಕದಲ್ಲಿರುವ ಜಮೀನುದಾರರು ಕೆರೆಯ ದಂಡೆಗಳನ್ನು ಒತ್ತುವರಿ ಮಾಡುವುದು ಒಂದೆಡೆಯಾದರೆ ಇಡೀ ಕೆರೆಯನ್ನೇ ಒತ್ತುವರಿ ಮಾಡಿಕೊಂಡು ಕಾಫಿ ತೋಟದೊಳಗೆ ಸೇರ್ಪಡೆ ಮಾಡಿಕೊಂಡಿರುವ ಪ್ರಕರಣಗಳು ಒತ್ತುವರಿಯಲ್ಲಿ ಸೇರ್ಪಡೆಗೊಂಡಿವೆ. ಇಡೀ ಕೆರೆ ಒತ್ತುವರಿ ಪ್ರಕರಣದಲ್ಲಿ ಜಮೀನಿನೊಳಗಿರುವ ಕೆರೆಯನ್ನೇ ವಶಕ್ಕೆ ಪಡೆಯಬೇಕಿದೆ. ಈ ಎರಡು ಪ್ರಕರಣಗಳ ಹಿನ್ನೆಡೆಗೆ ರಾಜಕೀಯ ಪ್ರವೇಶ ಮೂಲ ಕಾರಣವಾಗಿದ್ದು ಗ್ರಾಮ ಮಟ್ಟದಲ್ಲಿ ಒತ್ತುವರಿ ತೆರವಿಗೆ ಸ್ಥಳೀಯ ಮಟ್ಟದಿಂದಲೂ ಚುನಾಯಿತ ಪ್ರತಿನಿಧಿಗಳೇ ಅಡ್ಡಗಾಲಾಗುತ್ತಿದ್ದಾರೆ ಎಂಬ ಆರೋಪವಿದೆ. ಒತ್ತುವರಿ ಸರ್ವೆ ನಡೆಸಲು ಸರ್ವೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಕಾರಣವಾಗಿದ್ದು ಒತ್ತುವರಿಗಾಗಿ ಸಮಿತಿ ರಚಿಸಿ ದಿನಾಂಕ ನಿಗದಿ ಪಡಿಸಿದರೂ ನಿಗದಿತ ದಿನದಂದು ಕಾರ್ಯಚರಣೆ ನಡೆದ ಉದಾಹರಣೆಗಳೇ ಇಲ್ಲ. ಇದಕ್ಕೆ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಕೂಡ ಒತ್ತುವರಿ ತೆರವಿಗೆ ತೊಡಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.