ಚಿಕ್ಕಮಗಳೂರು: ಮೂಡಿಗೆರೆ, ಕಡೂರು ತಾಲ್ಲೂಕುಗಳಲ್ಲಿ 10 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬುದನ್ನು ತನಿಖಾ ತಂಡ ಪತ್ತೆ ಮಾಡಿದೆ. ಅಕ್ರಮ ಮಂಜೂರಾತಿಗೆ ಭೂಸಕ್ರಮೀಕರಣ ಸಮಿತಿಯ ಅಧ್ಯಕ್ಷರು (ಶಾಸಕರು), ಸದಸ್ಯರು, ಅಧಿಕಾರಿಗಳು ಹೊಣೆಗಾರರು ಎಂಬುದನ್ನು ತನಿಖಾ ವರದಿ ಪಟ್ಟಿ ಮಾಡಿದೆ.
ಎರಡೂ ತಾಲ್ಲೂಕುಗಳಲ್ಲಿ ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಲು 2023ರ ಆಗಸ್ಟ್‌ನಲ್ಲಿ 13 ತಹಶೀಲ್ದಾರ್‌ಗಳ ತಂಡವನ್ನು ಸರ್ಕಾರ ರಚನೆ ಮಾಡಿತ್ತು. ತನಿಖೆ ನಡೆಸಿರುವ ತಂಡ ವರದಿ ಸಲ್ಲಿಸಿದ್ದು, 10,598 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಒಟ್ಟು 4,204 ಆಸ್ತಿಗಳಿಗೆ ಸಂಬಂಧಿಸಿದ ಪಹಣಿಗಳಲ್ಲಿ ‘ಪರಭಾರೆ ನಿಷೇಧ’ ಎಂದು ನಮೂದಿಸುವ ಕೆಲಸ ಆರಂಭವಾಗಿದೆ. ‘ಅಕ್ರಮ ಭೂಮಂಜೂರಾತಿ ಕುರಿತು ತನಿಖಾ ಹಂತದಲ್ಲಿ ಇರುವುದರಿಂದ ಪರಭಾರೆ ನಿಷೇಧ’ ಎಂದು ಎರಡೂ ತಾಲ್ಲೂಕಿನ ಒಟ್ಟು 2,800 ಪಹಣಿಗಳಲ್ಲಿ ಈಗಾಗಲೇ ಕಂದಾಯ ಇಲಾಖೆ ನಮೂದಿಸಿದೆ.
ಕಂದಾಯ ಕಾಯ್ದೆ ಪ್ರಕಾರ, ನಮೂನೆ 50, 53 ಮತ್ತು 57ರಲ್ಲಿ ಭೂಮಂಜೂರಾತಿ ಕೋರಿರುವವರು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರಬೇಕು. ಅಷ್ಟರಲ್ಲಿ ಅರ್ಜಿದಾರನಿಗೆ 18 ವರ್ಷ ಪೂರ್ಣಗೊಂಡಿರಬೇಕು, ಅರ್ಜಿದಾರನೇ ಸಾಗುವಳಿ ಮಾಡುತ್ತಿರಬೇಕು. ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆಗೂ ಹೆಚ್ಚು ಆಸ್ತಿ ಮಂಜೂರು ಮಾಡುವಂತಿಲ್ಲ. ಸಾಗುವಳಿ ಮಾಡುತ್ತಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಯ ವರದಿ ಪಡೆಯಬೇಕು, ಭೂಮಾಪಕರು ನಕ್ಷೆ ಸಿದ್ಧಪಡಿಸಬೇಕು, ಶಾಸಕರ ಅಧ್ಯಕ್ಷತೆಯ ಸಮಿತಿ ಮುಂದೆ ದಾಖಲೆ ಮಂಡಿಸಬೇಕು.
ಸಮಿತಿ ಸಭೆಯ ಬಯೋಮೆಟ್ರಿಕ್ ಹಾಜರಾತಿ, ಸಭೆಯ ಫೋಟೊ, ಸಾಗುವಳಿ ಜಾಗದ ಚಿತ್ರಗಳನ್ನು ಆ್ಯಪ್‍ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ ಜಾಗ ಮಂಜೂರಾತಿ ಮಾಡಬೇಕು. ಕಂದಾಯ ಜಾಗವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು, ಅರಣ್ಯ ಜಾಗವಾಗಿದ್ದರೆ ಯಾವುದೇ ಕಾರಣಕ್ಕೂ ಮಂಜೂರು ಮಾಡುವಂತಿಲ್ಲ ಎಂಬ ನಿಯಮ ಇವೆ. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಸೋಇಚ್ಛೆ ಭೂ ಮಂಜೂರು ಮಾಡಿರುವುದು ಈಗ ತನಿಖೆಯಿಂದ ಬಹಿರಂಗವಾಗಿದೆ.
ಅರ್ಜಿಯನ್ನೇ ಸಲ್ಲಿಸದವರಿಗೆ, ಒಂದೇ ಕುಟುಂಬದ ಹಲವರಿಗೆ, ವಿದೇಶದಲ್ಲಿ ಇದ್ದವರಿಗೂ ಭೂಮಂಜೂರಾತಿ ಮಾಡಲಾಗಿದೆ. ನೂರಾರು ಎಕರೆ ಅರಣ್ಯ ಭೂಮಿ, ಪರಿಭಾವಿತ ಅರಣ್ಯ, ಅರಣ್ಯ ಇಲಾಖೆ ಸೆಕ್ಷನ್ –4 ಜಾರಿಗೊಳಿಸಿರುವ ಭೂಮಿಯನ್ನೂ ಮಂಜೂರು ಮಾಡಲಾಗಿದೆ. ಕೆಲವು ಕಡತಗಳು ಸಮಿತಿಯ ಮುಂದೆ ಮಂಡನೆಯಾಗಿದ್ದರೆ, ಹಲವು ಮಂಡನೆಯೇ ಆಗಿಲ್ಲ ಎಂಬುದನ್ನು ತನಿಖಾ ತಂಡ ಪತ್ತೆ ಮಾಡಿದೆ.
ಅಕ್ರಮ ಭೂಮಂಜೂರಾತಿ ಬಗ್ಗೆ ‘ಪ್ರಜಾವಾಣಿ’ 2023ರಲ್ಲಿ ಸರಣಿ ವರದಿ ಪ್ರಕಟಿಸಿತ್ತು.
ಅಕ್ರಮಕ್ಕೆ ಯಾರೆಲ್ಲಾ ಹೊಣೆಗಾರರು?
ಭೂ ಸಕ್ರಮೀಕರಣ ಸಮಿತಿಯ ಅಧ್ಯಕ್ಷರು (ಶಾಸಕರು), ಸದಸ್ಯರು, ತಹಶೀಲ್ದಾರ್‌ಗಳು, ಕಂದಾಯ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಶಿರಸ್ತೆದಾರರು, ಕಚೇರಿಯ ವಿಷಯ ನಿರ್ವಾಹಕರು, ಭೂಮಿ ಆಪರೇಟರ್‌ಗಳು, ಭೂಮಾಪಕರು ಈ ಅಕ್ರಮ ಮಂಜೂರಾತಿಗೆ ಹೊಣೆಗಾರರು ಎಂಬುದನ್ನು ವರದಿಯಲ್ಲಿ ತನಿಖಾ ತಂಡ ಉಲ್ಲೇಖಿಸಿದೆ.
ಅವರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸರ್ಕಾರ
ತೀರ್ಮಾನಿಸಬೇಕಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.