ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯಕೀಯ ಕಾಲೇಜು ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣ: ಶಾಸಕ ಎಚ್‌.ಡಿ.ತಮ್ಮಯ್ಯ

ರಾಜ್ಯ ಸರ್ಕಾರದಿಂದ ₹455 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ
Published 6 ಫೆಬ್ರುವರಿ 2024, 15:30 IST
Last Updated 6 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೂಲಸೌಕರ್ಯ ಒಳಗೊಂಡಂತೆ ಜಿಲ್ಲೆಯ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಮುಂದಿನ ಎರಡು ತಿಂಗಳೊಳಗೆ ‍ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಭರವಸೆ ನೀಡಿದರು.

ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ವೇಳೆ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಬಿಜೆಪಿ ಸರ್ಕಾರದಲ್ಲಿ ನಿಗದಿಯಾಗಿದ್ದ ₹339 ಕೋಟಿ ಬದಲಾಗಿ ರಾಜ್ಯ ಸಚಿವ ಸಂಪುಟ ₹455 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ವೈದ್ಯಕೀಯ ಕಾಲೇಜು ಹಾಗೂ ಒಂದೂವರೆ ವರ್ಷದೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿರುವುದರ ಹಿಂದೆ ಹಲವು ವಿಷಯಗಳಿವೆ. ಕಾಂಗ್ರೆಸ್ ಸರ್ಕಾರ ಮೂಲಸೌಕರ್ಯ ಒಳಗೊಂಡಂತೆ ಸಂಪೂರ್ಣ ಕಾಮಗಾರಿಗೆ ₹455 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ಇದು ತಮ್ಮ ಕೊಡುಗೆ ಎಂದು ಬಿಂಬಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಅವರು ಏಕಾಏಕಿ ಭೇಟಿ ನೀಡಿರಬಹುದು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಗೆ ಒತ್ತು ನೀಡಿ ಅನುದಾನ ಮಂಜೂರು ಮಾಡಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಿಧಿಯಿಂದ ₹15 ಕೋಟಿ, ತಾಲ್ಲೂಕು ಪಂಚಾಯಿತಿಗೆ ರಸ್ತೆ ಕಾಮಗಾರಿಗೆ ₹1.23 ಕೋಟಿ, ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ₹75 ಲಕ್ಷ, ಲೋಕೋಪಯೋಗಿ ಇಲಾಖೆಯ ₹40 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ₹59 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಬೇಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಬಿಡುಗಡೆಗೊಳಿಸಿಲ್ಲ ಎಂಬ ಟೀಕೆ ಸರಿಯಲ್ಲ ಎಂದರು.

ಅರಣ್ಯಭವನ ಕಾಮಗಾರಿಗೆ ₹9 ಕೋಟಿ, ಜಿಲ್ಲಾ ಸಂಕೀರ್ಣ ಕಾಮಗಾರಿಗೆ ₹30 ಕೋಟಿ, ನ್ಯಾಯಾಧೀಶರ ವಸತಿ ಗೃಹ ನಿರ್ಮಾಣಕ್ಕೆ ₹3.95 ಕೋಟಿ ಅನುದಾನಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ. ಉಳಿದ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವುದಾಗಿ ಸಂಬಂಧಪಟ್ಟ ಸಚಿವರಿಂದಲೂ ಒಪ್ಪಿಗೆ ದೊರೆತಿದೆ ಎಂದರು.

‘ರಾಜಕಾರಣದಲ್ಲಿ ಹಲವು ಜವಾಬ್ದಾರಿ ನಿಭಾಯಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರೋಪ ಮಾಡುವವರು  2000ನೇ ಇಸವಿಯಲ್ಲಿ ಹೇಗಿದ್ದರೂ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸುವುದು, ಬಾಕಿ ಕಾಮಗಾರಿ ಪೂರ್ಣಗೊಳಿಸುವುದು ಶಾಸಕರ ಜವಾಬ್ದಾರಿ. ಅನುದಾನ ನಮ್ಮದು, ನಿಮ್ಮದು ಎನ್ನುವುದಕ್ಕೆ ಯಾರೊಬ್ಬರೂ ತಮ್ಮ ಜೇಬಿಬಿಂದ ಕೊಟ್ಟಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT