ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯಕ್ಕೆ ಇಡಕಿಣಿ ಗ್ರಾಮಸ್ಥರ ಆಗ್ರಹ

ಜಿ.ಪ‍ಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ
Last Updated 7 ಜನವರಿ 2023, 5:45 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನ ಇಡಕಿಣಿ ಗ್ರಾಮದ ಹೆಮ್ಮಕ್ಕಿ ಆಸುಪಾಸಿನ ಗ್ರಾಮಸ್ಥರು ರಸ್ತೆ, ನೀರು, ವಸತಿ, ಆರೋಗ್ಯ ಸೇವೆ, ಶಿಕ್ಷಣ ಮುಂತಾದ ಮೂಲ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಬರ್ಗಲ್ ಕಾಲೊನಿ, ಸಿಡ್ಲಾರ್ ಮಕ್ಕಿ, ಹಡ್ಲುಮನೆ, ಸುಕನ ಕೊಳಲು, ಮಾಟ್ರಳ್ಳಿ, ಭದ್ರಕಾಳಿ, ಮಳಲಿಕೆರೆ, ನರ್ಗಲ್, ನಾಗಸಂಪಿಗೆಮಕ್ಕಿ, ರಾಮನಕುಡಿಗೆ, ಕಟ್ಟಿನಗುಂಡಿ, ಕೋಟೆಮಕ್ಕಿ ಗ್ರಾಮಸ್ಥರು ಮೂಲ ಸೌಲಭ್ಯಗಳು ಇಲ್ಲದೆ ಪರದಾಡುತ್ತಿದ್ದಾರೆ. ಈ ಗ್ರಾಮಗಳ ನಿವಾಸಿಗಳು ನ್ಯಾಯಬೆಲೆ ಅಂಗಡಿಗಾಗಿ ದೂರದ ಹಿರೇಬೈಲಿಗೆ ಹೋಗಬೇಕಿದೆ. ಹೆಮ್ಮಕ್ಕಿಯಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಬೇಕು. ಅನಾರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ದೂರದ ಹಿರೇಬೈಲ್ ಅಥವಾ ಕಳಸಕ್ಕೆ ಹೋಗಬೇಕಿದೆ. ಇದನ್ನು ತಪ್ಪಿಸಲು ಹೆಮ್ಮಕ್ಕಿಯಲ್ಲಿ ಆರೋಗ್ಯ ಉಪಕೇಂದ್ರ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹೆಮ್ಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ 42 ಮಕ್ಕಳು ಇದ್ದು ಮಂದಿನ ವಿದ್ಯಾಭ್ಯಾಸಕ್ಕಾಗಿ ಹಿರೇಬೈಲು ಅಥವಾ ದೂರದ ಕಳಸಕ್ಕೆ ಹೋಗುವುದು ಅನಿವಾರ್ಯ ಆಗಿದೆ. ಹೆಮ್ಮಕ್ಕಿಗೆ ಶಿಕ್ಷಕರನ್ನು ನೇಮಿಸಿ ಹಿರಿಯ ಪ್ರಾಥಮಿಕ ಶಾಲೆ ಪುನರಾರಂಭಿಸಬೇಕು. ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಡಕಿಣಿ, ಹೆಮ್ಮಕ್ಕಿ ಗ್ರಾಮಗಳ ರಸ್ತೆ ದುರಸ್ತಿ ಆರಂಭಿಸಿ ಮೂರು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಹೆಮ್ಮಕ್ಕಿ-ಬಾಳೆಹೊಳೆ ರಸ್ತೆ ಹದಗೆಟ್ಟಿದೆ. ಹೆಮ್ಮಕ್ಕಿ ಪ್ರದೇಶದ ಎಲ್ಲ ಗ್ರಾಮಾಂತರ ರಸ್ತೆಗಳ ದುರಸ್ತಿ ಮಾಡಬೇಕು ಎಂಜಿ.ದು ಆಗ್ರಹಿಸಲಾಗಿದೆ.

ಹೆಮ್ಮಕ್ಕಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು, ಭಾಗದ ವಸತಿರಹಿತರಿಗೆ ನಿವೇಶನ ಹಂಚಬೇಕು. ಕೆರೆಕುಡಿಗೆ, ಹೆಮ್ಮಕ್ಕಿ, ಭದ್ರಕಾಳಿ, ನಾಗಸಂಪಿಗೆಮಕ್ಕಿ, ಸಿಡ್ಲರ್‍ಮಕ್ಕಿ ಪ್ರದೇಶದಲ್ಲಿ ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಬೇಕು ಎಂಬುದು ಇತರ ಬೇಡಿಕೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT