ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ರಜೆಯಲ್ಲೂ ಬಿಸಿಯೂಟಕ್ಕೆ ಬೇಡಿಕೆ

19,556 ಮಕ್ಕಳಿಗೆ ಮಧ್ಯಾಹ್ನದ ಊಟ ವಿತರಣೆ
Published 14 ಮೇ 2024, 5:48 IST
Last Updated 14 ಮೇ 2024, 5:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶಾಲೆಗಳಲ್ಲಿ ರಜೆ ಇದ್ದರೂ ಬರಪೀಡಿತ ತಾಲ್ಲೂಕುಗಳಲ್ಲಿ ಬಿಸಿಯೂಟಕ್ಕೆ ಬೇಡಿಕೆ ಹೆಚ್ಚಿದ್ದು, 19,556 ವಿದ್ಯಾರ್ಥಿಗಳು ನಿತ್ಯ ಮಧ್ಯಾಹ್ನದ ಊಟ ಮಾಡುತ್ತಿದ್ದಾರೆ.

ಬೇಸಿಗೆ ರಜೆ ಇದ್ದರೂ ಬರಪೀಡಿತ ತಾಲ್ಲೂಕುಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲು ಸರ್ಕಾರ ಆದೇಶಿಸಿದೆ. ಚಿಕ್ಕಮಗಳೂರು ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿವೆ. ಎಲ್ಲಾ ಬರ ತಾಲ್ಲೂಕುಗಳಲ್ಲೂ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 1,523 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿದ್ದು, ಒಟ್ಟು 78,201 ವಿದ್ಯಾರ್ಥಿಗಳಿದ್ದಾರೆ. ಬರಪೀಡಿತ ತಾಲ್ಲೂಕುಗಳಾದ ಕಡೂರು, ಅಜ್ಜಂಪುರ, ತರೀಕೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲ್ಲೂಕಿನಲ್ಲಿ 1,159 ಶಾಲೆಗಳಿದ್ದು, ಒಟ್ಟು 59,452 ವಿದ್ಯಾರ್ಥಿಗಳಿದ್ದಾರೆ.

536 ಶಾಲೆಗಳಲ್ಲಿ ಬಿಸಿಯೂಟ ನೀಡಲು ಗುರುತಿಸಲಾಗಿದ್ದು, 19,556 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ನಿರ್ದಿಷ್ಟ ಶಾಲೆಯಲ್ಲಿ ಕಡಿಮೆ ಮಕ್ಕಳು ನೊಂದಾಯಿಸಿಕೊಂಡಿದ್ದರೆ ಸಮೀಪದ ಶಾಲೆಗಳಲ್ಲಿ ಆ ಮಕ್ಕಳಿಗೆ ಬಿಸಿಯೂಟ ಒದಗಿಸಲಾಗುತ್ತಿದೆ. 15,625 ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲೇ ಬಿಸಿಯೂಟ ಪಡೆಯುತ್ತಿದ್ದಾರೆ. 3,931 ವಿದ್ಯಾರ್ಥಿಗಳು ತಮ್ಮ ಸಮೀಪದ ಶಾಲೆಗಳಿಗೆ ಹೋಗಿ ಮಧ್ಯಾಹ್ನ ಊಟ ಮಾಡುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಬಿಸಿಯೂಟ ತಯಾರಿಸುವ ಸಿಬ್ಬಂದಿ ಜತೆಗೆ ಒಬ್ಬ ಶಿಕ್ಷಕರನ್ನು ನೋಡಲ್ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ಆ ಶಿಕ್ಷಕರಿಗೆ ಗಳಿಕೆ ರಜೆ ಒದಗಿಸುವ ಸೌಲಭ್ಯವನ್ನೂ ಶಿಕ್ಷಣ ಇಲಾಖೆ ಕಲ್ಪಿಸಿದೆ. 511 ಶಿಕ್ಷಕರು, 686 ಅಡುಗೆ ಸಿಬ್ಬಂದಿ ಈ ಕಾರ್ಯದಲ್ಲಿ ನಿರತವಾಗಿದ್ದಾರೆ.

‘ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಊಟಕ್ಕೆ ಮಕ್ಕಳು ಬರುತ್ತಿದ್ದಾರೆ ಎಂದರೆ ಇಲ್ಲಿರುವ ಜನರ ತೊಂದರೆಯನ್ನು ಬಿಂಬಿಸುತ್ತದೆ. ಮಧ್ಯಾಹ್ನದ ಬಿಸಿಯೂಟ ಬಡ ಮಕ್ಕಳಿಗೆ ಎಷ್ಟು ಮುಖ್ಯ ಎಂಬುದಕ್ಕೆ ಇದು ಸಾಕ್ಷಿ’ ಎಂದು ಸ್ಥಳೀಯರು ಹೇಳುತ್ತಾರೆ.

‘ನೆರೆಯ ಬರ ಪೀಡಿತ ತಾಲ್ಲೂಕು ಮತ್ತು ಜಿಲ್ಲೆಗಳಿಂದ ಬೇಸಿಗೆ ರಜೆಗೆ ಸಂಬಂಧಿಕರ ಮನೆಗೆ ಬಂದಿರುವ ಮಕ್ಕಳು ಮಧ್ಯಾಹ್ನದ ಊಟ ಬಯಸಿದರೆ ಒದಗಿಸಲಾಗುತ್ತಿದೆ. ಅವರು ಓದುತ್ತಿರುವ ಶಾಲೆಯಿಂದ ಪತ್ರ ತಂದರೆ ಸಾಕು, ಊಟ ನೀಡಲಾಗುತ್ತಿದೆ’ ಎಂದು ಶಿಕ್ಷಣ ಇಲಾಖೆಯ ಬಿಸಿಯೂಟ ಅಧಿಕಾರಿ ಹೇಳುತ್ತಾರೆ.

ಬಯಲು ಸೀಮೆಯಲ್ಲೇ ಹೆಚ್ಚು

ಮಧ್ಯಾಹ್ನದ ಬಿಸಿಯೂಟಕ್ಕೆ ನೊಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಬರಪೀಡಿತ ಬಯಲು ಸೀಮೆ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಬರದ ಪರಿಣಾಮ ಈ ತಾಲ್ಲೂಕುಗಳಲ್ಲೇ ಹೆಚ್ಚು ಬೀರಿದಂತಿದೆ. ಬೀರೂರು ವಲಯವನ್ನೂ ಒಳಗೊಂಡಂತೆ ಕಡೂರು ತಾಲ್ಲೂರು ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ಒಟ್ಟು 11674 ವಿದ್ಯಾರ್ಥಿಗಳು ನೊಂದಾಯಿಸಿಕೊಂಡು ಮಧ್ಯಾಹ್ನದ ಊಟ ಪಡೆಯುತ್ತಿದ್ದಾರೆ. ತರೀಕೆರೆ ವಲಯದಲ್ಲೂ 7180 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಬರ ಪಟ್ಟಿಯಲ್ಲಿ ಇಲ್ಲದಿರುವುದರಿಂದ ಇಲ್ಲಿನ ಬಡ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT