ಚಿಕ್ಕಮಗಳೂರು: ಜಿಲ್ಲೆಯ ಎಲ್ಲ ಭೂ ದಾಖಲೆಗಳನ್ನು ಗಣಕೀಕರಣ(ಡಿಜಿಟಲ್) ಮಾಡುವುದರಿಂದ ರೈತರಿಗೆ ನಿಗದಿತ ಸಮಯದಲ್ಲಿ ಬೇಕಾದ ಅಗತ್ಯ ದಾಖಲೆ ನೀಡಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಭೂಸುರಕ್ಷಾ ಯೋಜನೆಯಡಿ ತಾಲ್ಲೂಕು ಕಚೇರಿ, ಸರ್ವೆ, ನೋಂದಣಿ ಇಲಾಖೆಗಳ ಭೂ ದಾಖಲೆಗಳ ಗಣಕೀಕರಣ(ಡಿಜಿಟಲ್) ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಸಂಬಂಧಿತ ಹಳೆಯ ಭೂ ದಾಖಲೆಗಳನ್ನು ಗಣಕೀಕರಣ ಮಾಡಿರುವುದರಿಂದ ಆಡಳಿತದಲ್ಲಿ ಸುಧಾರಣೆ ತರುವುದರ ಜತೆಗೆ ನಕಲಿ ದಾಖಲೆಗಳ ತಡೆಗಟ್ಟಬಹುದು. ಇದರಿಂದ ರೈತರ ದಾಖಲೆಗಳು ಕಳೆದು ಹೋಗದಂತೆ ಶಾಶ್ವತವಾಗಿ ಉಳಿಯಲಿದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ, ತಮ್ಮ ಅಗತ್ಯ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸುವ ರೈತರಿಗೆ ಭೂ ದಾಖಲೆಗಳನ್ನು ಒದಗಿಸಲು ಇದು ಪೂರಕವಾಗಿದೆ. ಸಂಬಂಧಪಟ್ಟ ಅರ್ಜಿದಾರರಿಗೆ ದಾಖಲೆ ಒದಗಿಸಿದ ಸಂಪೂರ್ಣ ಮಾಹಿತಿ ರವಾನೆಯಾಗಲಿದೆ ಎಂದರು.
ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಮೂಲಕ ಭೂ ದಾಖಲೆಗಳ ಡಿಜಿಟಲ್ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು
ಜಿಲ್ಲಾಧಿಕಾರಿ ಮೀನಾ ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ದಲ್ಜಿತ್‍ಕುಮಾರ್, ತಹಶೀಲ್ದಾರ್ ಸುಮಂತ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಭಾಗವಹಿಸಿದ್ದರು.