ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಲೋಕಸಭೆ: ಎರಡು ಬಾರಿ ಗೆದ್ದು ಸಚಿವರಾದ ಡಿ.ಕೆ.ತಾರಾದೇವಿ

Published 19 ಏಪ್ರಿಲ್ 2024, 4:50 IST
Last Updated 19 ಏಪ್ರಿಲ್ 2024, 4:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಡಿ.ಕೆ.ತಾರಾದೇವಿ ಅವರ ಹೆಸರು ಕೂಡ ಅಚ್ಚಳಿಯದೆ ಉಳಿದುಕೊಂಡಿದೆ. ಎರಡು ಬಾರಿ ಗೆದ್ದು ಕೇಂದ್ರದ ಸಚಿವರಾಗಿದ್ದ ಡಿ.ಕೆ.ತಾರಾದೇವಿ, ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಇಂದಿರಾ ಗಾಂಧಿ ಸ್ಪರ್ಧೆ ಮಾಡಿದ್ದ 1978ರ ಚುನಾವಣೆ ವೇಳೆ ಮೂಡಿಗೆರೆ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಡಿ.ಕೆ.ತಾರಾದೇವಿ ಅವರಿಗೆ 1984ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರಕುತ್ತದೆ. ಆಗ ಹಾಲಿ ಸಂಸದರಾಗಿದ್ದ ಡಿ.ಎಂ.ಪುಟ್ಟೇಗೌಡ ಅವರ ಬದಲಿಗೆ ಡಿ.ಕೆ.ತಾರಾದೇವಿ ಅವರಿಗೆ ಟಿಕೆಟ್ ದೊರಕುತ್ತದೆ. ಅಷ್ಟರಲ್ಲಾಗಲೇ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ತಾರಾದೇವಿ ಅವರು ನಾಲ್ಕು ವರ್ಷ ಅವಧಿ ಇದ್ದರೂ ಲೋಕಸಭೆ ಕಣಕ್ಕೆ ಇಳಿಯುತ್ತಾರೆ.

ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜನತಾ ಪಕ್ಷದ ಶಾಸಕರಿದ್ದರು. ಗೋವಿಂದೇಗೌಡ ಸಚಿವರಾಗಿದ್ದರು. ಎಚ್.ಡಿ.ದೇವೇಗೌಡ ಅವರು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಜನತಾ ಪಕ್ಷ ಮತ್ತು ಕಮ್ಯುನಿಸ್ಟ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿದ್ದ ಕಾರ್ಮಿಕ ಹೋರಾಟಗಾರ ಬಿ.ಕೆ.ಸುಂದರೇಶ್ ಎದುರಾಳಿಯಾಗುತ್ತಾರೆ. 

ಇಂದಿರಾ ಗಾಂಧಿ ಹತ್ಯೆಯಾಗಿ ಕೆಲವೇ ದಿನಗಳಾಗಿದ್ದರಿಂದ ದೇಶದಾದ್ಯಂತ ಕಾಂಗ್ರೆಸ್ ಅಲೆ ಜೋರಾಗಿತ್ತು. 6,77,667 ಮತದಾರರು ನೋಂದಣಿ ಮಾಡಿಕೊಂಡಿದ್ದರು. 4,44,583 ಮತಗಳು ಚಲಾವಣೆಗೊಂಡಿದ್ದವು. ಡಿ.ಕೆ.ತಾರಾದೇವಿ ಅವರು 2,68,912 ಮತಗಳನ್ನು ಪಡೆದು ಜಯ ಸಾಧಿಸುತ್ತಾರೆ. ಸಿಪಿಐ ಅಭ್ಯರ್ಥಿ ಬಿ.ಕೆ.ಸುಂದರೇಶ್ ಅವರು 1,28,872 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. 

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎರಡನೇ ಮಹಿಳಾ ಸಂಸದರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. 1989ರ ಚುನಾವಣೆಯಲ್ಲಿ ಡಿ.ಎಂ.ಪುಟ್ಟೇಗೌಡ ಅವರಿಗೆ ಟಿಕೆಟ್ ಲಭಿಸಿ ಸಂಸದರಾಗುತ್ತಾರೆ. 1991ರಲ್ಲಿ ದೇಶದಲ್ಲಿ ಮಧ್ಯಂತರ ಚುನಾವಣೆ ಎದುರಾಗುತ್ತದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಸ್ಪರ್ಧಿಸಲು ಡಿ.ಕೆ.ತಾರಾದೇವಿ ಅವರಿಗೆ ಅವಕಾಶ ದೊರಕುತ್ತದೆ. ಅಷ್ಟರಲ್ಲಿ ಮತದಾರರ ಸಂಖ್ಯೆ 9,46,376ಕ್ಕೆ ಏರಿಕೆಯಾಗಿತ್ತು.

ದೇಶದಲ್ಲಿ ನೆಲೆ ಕಂಡುಕೊಳ್ಳುವ ತವಕದಲ್ಲಿದ್ದ ಬಿಜೆಪಿಯಿಂದ ಡಿ.ಸಿ.ಶ್ರೀಕಂಠಪ್ಪ ಅವರನ್ನು ಕಣಕಿಳಿಸಲಾಗಿತ್ತು. ಸಿಪಿಐನಿಂದ ಬಿ.ಕೆ.ಸುಂದರೇಶ್ ಮೂರನೇ ಬಾರಿಗೆ ಸಂಸತ್ ಚುಣಾವಣೆಗೆ ಸ್ಪರ್ಧಿಸುತ್ತಾರೆ. ಚುನಾವಣೆ ಸನಿಹದಲ್ಲಿ ಇರುವಾಗಲೇ ರಾಜೀವ್ ಗಾಂಧಿ ಹತ್ಯೆ ನಡೆದಿತ್ತು. ನಂತರ ನಡೆದ ಚುನಾವಣೆಯಲ್ಲಿ ಈ ಪೈಕಿ 5,18,992 ಮತಗಳು ಚಲಾವಣೆಗೊಂಡಿದ್ದವು. ಡಿ.ಕೆ.ತಾರಾದೇವಿ ಅವರು 2,17,309 ಮತಗಳನ್ನು ಪಡೆದು ಗೆಲ್ಲುತ್ತಾರೆ. ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ಬಂದರೆ, ಸಿಪಿಐ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ. ಪಿ.ವಿ.ನರಸಿಂಹರಾವ್ ಮಂತ್ರಿ ಮಂಡಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿಯೂ ಡಿ.ಕೆ.ತಾರಾದೇವಿ ಸೇವೆ ಸಲ್ಲಿಸುತ್ತಾರೆ.

ಈ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಬರುವ ಬಿಜೆಪಿ ಅಭ್ಯರ್ಥಿ ಡಿ.ಸಿ.ಶ್ರೀಕಂಠಪ್ಪ, 1998ರಿಂದ 2009ರ ತನಕ ಮೂರು ಬಾರಿ ಸಂಸದರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT