ಗುರುವಾರ , ಫೆಬ್ರವರಿ 9, 2023
30 °C
ಬಸ್ ತಂಗುದಾಣ ಮರುನಿರ್ಮಿಸಲು ಒತ್ತಾಯಿಸಿ ಪ್ರತಿಭಟನೆ

ಮೂಡಿಗೆರೆ | ಸರ್ಕಾರಿ ಬಸ್ ತಂಗುದಾಣ ಒತ್ತುವರಿ ಆರೋಪ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗೋಡು ಗ್ರಾಮದಲ್ಲಿದ್ದ ಬಸ್ ತಂಗುದಾಣವನ್ನು ಪುನರ್ ನಿರ್ಮಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಕೆಳಗೂರು ಮಾತನಾಡಿ, ‘ಸುಮಾರು 50 ವರ್ಷಗಳಿಂದ ಈ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಈ ನಿಲ್ದಾಣವು ಮೂಡಿಗೆರೆ, ಬೇಲೂರು, ಚಿಕ್ಕಮಗಳೂರು ತಾಲ್ಲೂಕಿನ ಗ್ರಾಮಸ್ಥರಿಗೆ ಅನುಕೂಲವಾಗಿತ್ತು. ಆದರೆ ಪ್ರಭಾವಿ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಬಸ್ ತಂಗುದಾಣವನ್ನು ನೆಲಸಮಗೊಳಿಸಿದ್ದು, ಪ್ರಯಾಣಿಕರು ಮರದ ಅಡಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ದೂರು ನೀಡಿದರೂ ಗ್ರಾಮ ಪಂಚಾಯಿತಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ನೆಲೆಸಮಗೊಳಿಸಿರುವ ಬಸ್ ನಿಲ್ದಾಣವನ್ನು ಮರು ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡ ರುದ್ರೇಗೌಡ ಕೆಳಗನೆ ಮಾತನಾಡಿ, ‘ಈ ತಂಗುದಾಣ ತಾಲ್ಲೂಕಿನ ಕೋಳಗೂಡು, ಮಾಲಳ್ಳಿ, ನಂದಿಪುರಗುಡ್ಡೆ, ಇಂದ್ರವಳ್ಳಿ, ಬಸ್ಕಲ್, ನರಡಿ, ಮಾಗೆಹಳ್ಳಿ, ಹಳೇಗೆಂಡೇಹಳ್ಳಿ, ವಾಟಗನಹಳ್ಳಿ ಸೇರಿದಂತೆ ಅನೇಕ ಗ್ರಾಮದ ಜನರಿಗೆ ಆಶ್ರಯವಾಗಿತ್ತು. ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದ ಶಾಲಾ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಈಗ ಬಿಸಿಲು ಮಳೆಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕೆ ತಹಶೀಲ್ದಾರ್ ನಾಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್ ಭೇಟಿ ನೀಡಿ ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು. ತಕ್ಷಣ ಸರ್ವೆ ನಡೆಸಿ, ಜಾಗ ಯಾರದು ಎಂದು ಇತ್ಯರ್ಥವಾಗಬೇಕು. ಅಕ್ರಮವಾಗಿ ಬೇಲಿ ನಿರ್ಮಿಸಿಕೊಂಡ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟು ಹಿಡಿದರು.

ಮಾಜಿ ಸಚಿವ ಬಿ.ಬಿ ನಿಂಗಯ್ಯ, ನಂದಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾ, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಮಾಲಳ್ಳಿ ರಮೇಶ್, ಸುಂದ್ರೇಶ್, ರಘು, ಎ.ಟಿ ನಳಿನಿ, ಗೆಂಡೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸೋಮೇಶ್, ಶ್ರೀನಿವಾಸ್, ಬಸ್ಕಲ್ ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣ, ಗೋಪಾಲಗೌಡ, ಮುಖಂಡರಾದ ಗಬ್ಬಳ್ಳಿ ಚಂದ್ರೇಗೌಡ, ನಿಖಿಲ್, ಎಚ್.ಎಚ್. ರಮೇಶ್, ಮಂಜುನಾಥ್, ಕೆಳಗನೆ ಚಂದ್ರೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು