ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲು ರಜೆ: ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಾಂಗುಡಿ

ಗಿರಿಯಲ್ಲಿ ವಾಹನಗಳ ಸಾಲು: ದಟ್ಟಣೆಯಲ್ಲಿ ಸಿಲುಕಿ ನರಳಿದ ಪ್ರವಾಸಿಗರು
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಾರದ ಕೊನೆ ಮತ್ತು ಬಕ್ರೀದ್ ರಜೆ ಇದ್ದ ಕಾರಣ ಕಾಫಿನಾಡಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಅದರಲ್ಲೂ ಮುಳ್ಳಯ್ಯನಗಿರಿ ಪ್ರದೇಶ ಪ್ರವಾಸಿಗರಿಂದ ತುಂಬಿ ತುಳುಕಿತು. ವಾಹನ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದರು.

ಮೂರು ದಿನ ಒಟ್ಟಿಗೆ ರಜೆ ಇದ್ದಿದ್ದರಿಂದ ಹೊರ ರಾಜ್ಯಗಳು ಮತ್ತು ರಾಜ್ಯದ ವಿವಿಧೆಡೆಗಳಿಂದ ಜನ ದಾಂಗುಡಿ ಇಟ್ಟಿದ್ದರು. ಗಿರಿ ಶ್ರೇಣಿ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಜಲಪಾತಗಳು, ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಕಲರವ ಮೇಳೈಸಿತ್ತು. 

ಮುಂಗಾರು ಪೂರ್ವ ಮಳೆ ಸುರಿದಿದ್ದರಿಂದ ಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲುಗಳು ಹಸಿರು ಹೊದ್ದು ಕಂಗೊಳಿಸುತ್ತಿವೆ. ಈಗ ಮಳೆ ಬಿಡುವು ನೀಡಿರುವುದರಿಂದ ಅಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದಿದ್ದರು. ಅದರಲ್ಲೂ ರಾಜ್ಯದ ಅತೀ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯಲ್ಲಿ ‘ಮೋಡದ ನಡುವೆ ಓಡಾಡಿದ ಅನುಭವ’ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ಮುಳ್ಳಯ್ಯನಗಿರಿಯ ತುದಿಯಲ್ಲಿನ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಿರಿದಾದ ರಸ್ತೆ ಆಗಿರುವುದರಿಂದ ವಾಪಸ್ ಬರಲು ಜಾಗ ಇಲ್ಲದೆ ಗಂಟೆ ಗಟ್ಟಲೆ ದಟ್ಟಣೆಯಲ್ಲಿ ಸಿಲುಕಿ ಪ್ರವಾಸಿಗರು ನರಳಿದರು. ಅಡ್ಡಾದಿಡ್ಡಿ ಬೈಕ್‌ ಮತ್ತು ಕಾರುಗಳನ್ನು ನಿಲ್ಲಿಸಿಕೊಂಡಿದ್ದರಿಂದ ಪರದಾಡುವಂತಾಯಿತು.

ಬೇರೆ ವಾಹನಗಳಿಗೆ ದಾರಿ ಕೊಡಲು ರಸ್ತೆಯಿಂದ ಕೊಂಚ ಕೆಳಗೆ ಇಳಿಸಿದರೆ ವಾಹನಗಳು ಪ್ರಪಾತದ ಪಾಲಾಗುತ್ತವೆ. ಆದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಾದಾಗ ಪ್ರವಾಸಿಗರು ದಟ್ಟಣೆಯಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ.

ಇನ್ನು ಸೀತಾಳಯ್ಯನ ಗಿರಿ, ಬಾಬಾಬುಡನ್ ಗಿರಿ, ಹೊನ್ನಮ್ಮನ ಹಳ್ಳ, ಮಾಣಿಕ್ಯಧಾರಾ, ಕೆಮ್ಮಣ್ಣುಗುಂಡಿ, ಕಲ್ಹತ್ತಿಗಿರಿ, ಶೃಂಗೇರಿ, ಹೊರನಾಡು, ಕಳಸ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ  ಪ್ರವಾಸಿಗರ ದಂಡು ಸೇರಿತ್ತು.  ಹೋಂ ಸ್ಟೆ, ಲಾಡ್ಜ್‌ಗಳು, ಅತಿಥಿ ಗೃಹ ಎಲ್ಲವೂ ಭರ್ತಿಯಾಗಿದ್ದವು. ಚಿಕ್ಕಮಗಳೂರು ನಗರದಲ್ಲೂ ವಾಹನ ದಟ್ಟಣೆ ಉಂಟಾಗಿ ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡಿದರು.

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆಯಲ್ಲಿ ಸಿಲುಕಿ ನರಳಾಡಿದ ಪ್ರವಾಸಿಗರು –ಪಿಟಿಐ ಚಿತ್ರ
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆಯಲ್ಲಿ ಸಿಲುಕಿ ನರಳಾಡಿದ ಪ್ರವಾಸಿಗರು –ಪಿಟಿಐ ಚಿತ್ರ

ಚೆಕ್‌ಪೋಸ್ಟ್‌ನಲ್ಲಿ ಸಾಲು ಸಾಲು

ಮುಳ್ಳಯ್ಯನಗಿರಿಗೆ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ಲಾಸ್ಟಿಕ್ ಬಾಟಲಿ ಕೊಂಡೊಯ್ಯುವುದನ್ನು ಜಿಲ್ಲಾಡಳಿತ ನಿಷೇಧಿಸಿದ್ದು ಇದನ್ನು ಜಾರಿಗೆ ತರಲು ಪೊಲೀಸರು ತಿಣುಕಾಡುತ್ತಿದ್ದಾರೆ. ಕೈಮರ ಚೆಕ್‌ಪೋಸ್ಟ್ ಬಳಿ ಎಲ್ಲಾ ವಾಹನಗಳನ್ನು ತಡೆದು ಪ್ಲಾಸ್ಟಿಕ್ ಬಾಟಲಿ ಪಡೆಯುತ್ತಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಚೆಕ್‌ಪೋಸ್ಟ್‌ನಲ್ಲಿ ಸಾಲುಗಟ್ಟಿ ನಿಲ್ಲುವಂತಾಯಿತು. ಇದರಿಂದ ಚಿಕ್ಕಮಗಳೂರು–ತರೀಕೆರೆ ರಸ್ತೆಯಲ್ಲೂ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT