ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು ಪುರಸಭೆ: ಬಿಜೆಪಿ ಬೆಂಬಲಿತ ಸುದರ್ಶನ್ ಅಧ್ಯಕ್ಷ, ಮೀನಾಕ್ಷಮ್ಮ ಉಪಾಧ್ಯಕ್ಷೆ

ಬೀರೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ– ಬಿಜೆಪಿಗೆ ಚೊಚ್ಚಲ ಅಧಿಕಾರ
Last Updated 24 ಅಕ್ಟೋಬರ್ 2020, 4:26 IST
ಅಕ್ಷರ ಗಾತ್ರ

ಬೀರೂರು: ಒಂದು ವರ್ಷದಿಂದಲೂ ಜನರ ನಿರೀಕ್ಷೆ ಕೆರಳಿಸಿದ್ದ ಬೀರೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆದು, ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಉಪಾಧ್ಯಕ್ಷ ಹುದ್ದೆ ‘ಸಾಮಾನ್ಯ’ ಮಹಿಳೆಗೆ ಮೀಸಲಾಗಿದ್ದು, ಪುರ ಸಭೆಯ ಸಭಾಂಗಣದಲ್ಲಿ ನಡೆದ ಚುನಾ ವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಪಿ. ಸುದರ್ಶನ್, ಕಾಂಗ್ರೆಸ್ ವತಿಯಿಂದ ಬಿ.ಆರ್.ರವಿಕುಮಾರ್ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮೀನಾಕ್ಷಮ್ಮ ಮಲ್ಲಿಕಾರ್ಜು ನಪ್ಪ, ಕಾಂಗ್ರೆಸ್‍ನಿಂದ ನಂದಿನಿ ರುದ್ರೇಶ್ ಉಮೇದುವಾರಿಕೆ ಸಲ್ಲಿಸಿದ್ದರು.

ಮಧ್ಯಾಹ್ನ 1 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಯೂ ಆದ ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಉಮೇದುವಾರಿಕೆಗಳು ಕ್ರಮಬದ್ಧ ವಾಗಿದ್ದು ಆಕಾಂಕ್ಷಿಗಳು ಇರುವುರಿಂದ ಚುನಾವಣೆ ನಡೆಸುವುದಾಗಿ ಘೋಷಿಸಿದರು.

ಬೀರೂರು ಪುರಸಭೆಯಲ್ಲಿ 23 ಸ್ಥಾನಗಳಿದ್ದು, ಸಭೆಯಲ್ಲಿ ಎಲ್ಲ ಸದಸ್ಯರೂ ಹಾಜರಿದ್ದರು. ಬಿಜೆಪಿ 10, ಕಾಂಗ್ರೆಸ್ 9 ಮತ್ತು ಜೆಡಿಎಸ್ ಹಾಗೂ ಪಕ್ಷೇತರರು ತಲಾ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಇಬ್ಬರು ಪಕ್ಷೇತರರು ಮೊದಲೇ ಬಿಜೆಪಿಗೆ ಬೆಂಬಲ ಘೋಷಿಸಿದ್ದರೂ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು, ಜೆಡಿಎಸ್ ಸದಸ್ಯರು ಬೆಂಬಲಿಸಬಹುದು ಎನ್ನುವ ನಿರೀಕ್ಷೆಯಿಂದ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವವರು ಕೈ ಎತ್ತುವಂತೆ ಸೂಚಿಸಿದಾಗ ಬಿಜೆಪಿಯ 10, ಜೆಡಿಎಸ್‍ನ ಇಬ್ಬರು ಮತ್ತು ಇಬ್ಬರು ಪಕ್ಷೇತರ ಸದಸ್ಯರು ಸೇರಿ 14 ಮಂದಿ ಬೆಂಬಲ ಸೂಚಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ 9 ಮಂದಿ ಕೈ ಎತ್ತಿ ಅಭಿಮತ ಸೂಚಿಸಿದರು. ಇದರ ಫಲವಾಗಿ ಎಂ.ಪಿ.ಸುದರ್ಶನ್ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸಿದರು. ಉಪಾಧ್ಯಕ್ಷರ ಆಯ್ಕೆಯಲ್ಲಿ ಕೂಡಾ ಇದೇ ಫಲಿತಾಂಶ ಹೊರಬಿದ್ದ ಫಲವಾಗಿ ಮೀನಾಕ್ಷಮ್ಮ ಹೆಚ್ಚು ಮತಗಳಿಸಿ ಆಯ್ಕೆಯಾದರು.

ಇದರಿಂದ ಇದೇ ಮೊದಲ ಬಾರಿಗೆ ಪುರಸಭೆಯಲ್ಲಿ ಬಿಜೆಪಿ ಬಹುಮತ ದೊಂದಿಗೆ ಅಧಿಕಾರ ಹಿಡಿಯು ವಂತಾಯಿತು. ಮೂರನೇ ಅವಧಿಯ ಲ್ಲಾದರೂ ಅಧ್ಯಕ್ಷ ಆಗಲೇಬೇಕು ಎನ್ನುವ 1ನೇ ವಾರ್ಡ್ ಸದಸ್ಯ ಸುದರ್ಶನ್ ಹಂಬಲ ಈಡೇರಿದರೆ, 16ನೇ ವಾರ್ಡ್‍ನಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಮೀನಾಕ್ಷಮ್ಮ ಅವರಿಗೆ ಇದು ಬಯಸದೇ ಬಂದ ಭಾಗ್ಯ.

ಫಲಿತಾಂಶ ಘೋಷಿಸಿದ ಚುನಾವಣಾಧಿಕಾರಿ ವಿಶ್ವೇಶ್ವರ ರೆಡ್ಡಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರಮಾಣಪತ್ರ ವಿತರಿಸಿದರು.

ಶಾಸಕ ಬೆಳ್ಳಿಪ್ರಕಾಶ್, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ, ‘ಚುನಾವಣೆ ರಾಜಕೀಯ ಈಗ ಮುಗಿದ ಅಧ್ಯಾಯ. ಎಲ್ಲ ಸದಸ್ಯರೂ ಒಗ್ಗೂಡಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಿರುವುದು ಈಗಿನ ಅಗತ್ಯ. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಊರಿನ ಹಿತ ಗಮನದಲ್ಲಿ ಇರಿಸಿಕೊಂಡು ನೀವೆಲ್ಲ ಕೆಲಸ ಮಾಡಿ. ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಿದ ಜೆಡಿಎಸ್, ಪಕ್ಷೇತರ ಸದಸ್ಯರನ್ನು ಅಭಿನಂದಿಸುತ್ತೇನೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಸೇರಿ ಶ್ರಮಿಸೋಣ’ ಎಂದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆ ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಆಯ್ಕೆ ಪ್ರಕ್ರಿಯೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ, ಉಪ ತಹಶೀಲ್ದಾರ್ ರವಿಕುಮಾರ್, ಚುನಾವಣಾ ಶಾಖೆಯ ಕಿರಣ್, ಪುರಸಭೆ ಸಿಬ್ಬಂದಿ ಇದ್ದರು.

ಸರ್ಕಲ್ ಇನ್‍ಸ್ಪೆಕ್ಟರ್ ಕೆ.ಆರ್.ಶಿವಕುಮಾರ್, ಪಿಎಸ್‍ಐ ಕೆ.ವಿ.ರಾಜಶೇಖರ್ ಮತ್ತು ಸಿಬ್ಬಂದಿ ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT