ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದಾರ: ಮೂಲಸೌಕರ್ಯ ಮರೀಚಿಕೆ

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬವಣೆ– ರಸ್ತೆ ಅಭಿವೃದ್ಧಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ
Last Updated 23 ಫೆಬ್ರುವರಿ 2021, 4:42 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರವಿದ್ದು, ಗಡಿಭಾಗದಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ದಾರ ಗ್ರಾಮದ ಜನರು ಮೂಲಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಬಿಗಡಾಯಿಸುತ್ತದೆ.

ತಾಲ್ಲೂಕಿನ ಎರಡನೇ ಅತಿದೊಡ್ಡ ಪಂಚಾಯಿತಿಯೆಂಬ ಹಿರಿಮೆಗೆ ಮುತ್ತಿನಕೊಪ್ಪ ಪಾತ್ರವಾಗಿದೆ. ಆಲ್ದಾರ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ಜೀವನ ಕಟ್ಟಿಕೊಂಡಿವೆ. ಈ ಪೈಕಿ ಹೆಚ್ಚಿನವರು ಪರಿಶಿಷ್ಟ ಜಾತಿಗೆ ಸೇರಿದವರು.

‘ಬೇಸಿಗೆ ಬಂತೆಂದರೆ ಭೂಮಿಯ ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳವೆಗಳಲ್ಲಿಯೂ ನೀರಿನ ಮಟ್ಟ ಕುಸಿದು ಕುಡಿಯುವ ನೀರಿನ ಬವಣೆ ಎದುರಿಸಬೇಕಾಗುತ್ತದೆ. ಪ್ರತಿ ವರ್ಷ ಖಾಸಗಿ ಕೊಳವೆಬಾವಿಯಿಂದ ಅಥವಾ ಟ್ಯಾಂಕರ್ ಮೂಲಕ ಈ ಗ್ರಾಮಕ್ಕೆ ನೀರು ಒದಗಿಸುವ ಅನಿವಾರ್ಯತೆ ಉಂಟಾಗುತ್ತದೆ. ಪ್ರಸ್ತುತ ಹೊಸದಾಗಿ ಎರಡು ಕೊಳವೆಬಾವಿ ಕೊರೆದಿರುವುದರಿಂದ ಈಗ ನೀರಿನ ಬವಣೆ ಸ್ವಲ್ಪ ನೀಗಿದೆ. ಆದರೆ, ಭವಿಷ್ಯದಲ್ಲಿ ಸಮಸ್ಯೆ ತಪ್ಪಿದ್ದಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ಇಲ್ಲಿನ ಗ್ರಾಮಕ್ಕೆ, ಪರಿಶಿಷ್ಟ ಕಾಲೊನಿಗೆ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಿಸುವತ್ತ ಸರ್ಕಾರ ಗಮನಹರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಗ್ರಾಮಸ್ಥರು ತಾಲ್ಲೂಕು ಕೇಂದ್ರಕ್ಕೆ ಬರಬೇಕಾದರೆ ಬೈರಾಪುರ, ಚೌಡಿಕಟ್ಟೆ, ಮರಾಠಿ ಕ್ಯಾಂಪ್ ಮೂಲಕ ಉಂಬಳೆಬೈಲಿಗೆ ತೆರಳಿ ಸುತ್ತು ಬಳಸಿ ಬರಬೇಕಾಗಿದೆ. ಈ ಗ್ರಾಮಗಳಿಗೆ ಹೋಗುವ ರಸ್ತೆಗೆ ಹಿಂದೆ ಜಲ್ಲಿಹಾಕಿದ್ದು ಬಿಟ್ಟರೆ ಇದುವರೆಗೂ ಡಾಂಬರೀಕರಣ ಕಂಡಿಲ್ಲ. ಹಲವು ಬಾರಿ ಜನಪ್ರತಿನಿಧಿ ಗಳಿಗೆ ರಸ್ತೆ ಅಭಿವೃದ್ಧಿ ಪಡಿಸಲು ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಇದುವರೆಗೂ ಬಸ್ ಸಾರಿಗೆ ಸೌಲಭ್ಯ ಕಂಡಿಲ್ಲ. ಶಾಲಾ– ಕಾಲೇಜಿಗೆ, ಪಟ್ಟಣಕ್ಕೆ ಬರಬೇಕಾದರೆ ಆಟೊ, ಬೈಕ್ ಮೂಲಕ ಬರಬೇಕು. ಇಲ್ಲವೇ 6 ಕಿ.ಮೀ ನಡೆದು ಕೊಂಡು ಉಂಬ್ಳೆಬೈಲಿಗೆ ಬಂದು ಬಸ್ ಹಿಡಿಯುವ ಅನಿವಾರ್ಯತೆ ಇದೆ.

ಭದ್ರಾ ಅಣೆಕಟ್ಟೆ ನಿರ್ಮಾಣದಿಂದಾಗಿ ಮುಳುಗಡೆ ಪ್ರದೇಶದಿಂದ ಬಂದು ನೆಲೆಸಿರುವ ಮೂಲ ನಿವಾಸಿಗಳು ಬಗರ್ ಹುಕುಂನಲ್ಲಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಜಮೀನಿಗೆ ಹಕ್ಕುಪತ್ರ ನೀಡಿಲ್ಲ. 94ಸಿ ಅರ್ಜಿ ಸಲ್ಲಿಸಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ.

‘ಮಲೆನಾಡಿನ ಭಾಗವಾಗಿದ್ದರೂ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಜನರು ಹತ್ತಿ, ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಾಡಂಚಿನ ಭಾಗದಲ್ಲಿ ಜಮೀನು ಇರುವುದರಿಂದ ಆನೆ, ಸಾರಂಗ, ಜಿಂಕೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ದನ, ಕರು ಸಾಕು ಪ್ರಾಣಿಗಳು ಮೇಯಲು ಹೋದಾಗ ವನ್ಯಪ್ರಾಣಿಗಳು ಬಲಿ ತೆಗೆದು ಕೊಂಡರೂ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವುದಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

‘ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಸೌಲಭ್ಯ ಒದಗಿಸಬೇಕು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಗ್ರಾಮಸ್ಥ ಚಿತ್ರಪ್ಪ ಯರಬಾಳ.

ಆಲ್ದಾರ ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಹೊಸದಾಗಿ ಆಲ್ದಾರ, ಬೈರಾಪುರ, ಚೌಡಿಕಟ್ಟೆ ವ್ಯಾಪ್ತಿಗೆ ಕೊಳವೆ ಬಾವಿ ಕೊರೆಯಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT