ಸೋಮವಾರ, ಮಾರ್ಚ್ 27, 2023
30 °C

ನರಸಿಂಹರಾಜಪುರ: ಬಸ್ ನಿಲ್ದಾಣಕ್ಕೆ ರಾಮಚಂದ್ರರಾವ್ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ‘ನರಸಿಂಹರಾಜಪುರ ಮೂಲದ ಟಿ.ಎಸ್.ರಾಮಚಂದ್ರರಾವ್ ಶಿವಮೊಗ್ಗದಲ್ಲಿ ‘ಪ್ರಜಾವಾಣಿ’ ಪತ್ರಿಕೆ ವಿತರಕರಾಗಿ ನಂತರ ಅದೇ ಪತ್ರಿಕೆಯ ಸಂಪಾದಕರಾಗಿದ್ದರು. ಇದು ಸಮುದಾಯಕ್ಕೆ ಹೆಮ್ಮೆಯ ವಿಷಯ’ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ತಿಳಿಸಿದರು.

ಇಲ್ಲಿನ ಅಗ್ರಹಾರದ ಬಸ್ ತಂಗುದಾಣಕ್ಕೆ ‘ಪ್ರಜಾವಾಣಿ’ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರ ರಾವ್ ಹೆಸರಿನ ನಾಮಫಲಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಟಿ.ಎಸ್.ರಾಮಚಂದ್ರರಾವ್ ಅವರು ‘ಛೂಬಾಣ’ ಅಂಕಣದ ಮೂಲಕ ಪ್ರಸಿದ್ಧಿ ಪಡೆದಿದ್ದರು. ಇವರ ಶಿಷ್ಯರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಅವರು ತಮ್ಮ ಅನುದಾನದಲ್ಲಿ ಬಸ್ ತಂಗುದಾಣ ನಿರ್ಮಿಸಿದ್ದರು. ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಭೆಯ ನಿರ್ಣಯದಂತೆ ಪಟ್ಟಣದ ಪ್ರಮುಖ ಸ್ಥಳಗಳಿಗೆ ಮಹಾನ್ ನಾಯಕರ ಹೆಸರು ನಾಮಕರಣ ಮಾಡಲಾಗುತ್ತಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಪ್ರಮುಖ ಸ್ಥಳಗಳಿಗೆ ಮಹಾನ್ ನಾಯಕರ ಹೆಸರನ್ನು ಇಡುವುದರಿಂದ ಅವರ ಸೇವೆಯನ್ನು ಜೀವಂತವಾಗಿಡಲು ಸಾಧ್ಯವಾಗುತ್ತದೆ. ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯವಾಗುತ್ತದೆ. ಬಸ್ ತಂಗುದಾಣಕ್ಕೆ ರಾಜ್ಯದ ಹೆಸರಾಂತ ಪತ್ರಿಕೆ ‘ಪ್ರಜಾವಾಣಿ’ಯ ಸಂಪಾದಕರಾಗಿದ್ದವರ ಹೆಸರಿಟ್ಟಿರುವುದು ಶ್ಲಾಘನೀಯವಾಗಿದೆ’ ಎಂದರು.

ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ಮಾತನಾಡಿ, ‘ಪ್ರಸಿದ್ಧ ಪತ್ರಕರ್ತರಾಗಿದ್ದ ಟಿ.ಎಸ್.ರಾಮಚಂದ್ರರಾವ್ ಅವರ ಹೆಸರನ್ನು ಪ್ರಮುಖ ಸ್ಥಳವಾದ ಬಸ್ ತಂಗುದಾಣಕ್ಕೆ ಇಟ್ಟಿರುವುದು ಶ್ಲಾಘನೀಯ. ಸರ್ಕಾರ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸಹ ನೀಡುತ್ತಿದೆ. ಮಹಾನ್ ನಾಯಕರ ಹೆಸರು ಇಡುವುದರಿಂದ ಅವರ ಆದರ್ಶಗಳನ್ನು ಇತರರು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿದರು. ನಾಮಫಲಕವನ್ನು ಬ್ರಾಹ್ಮಣ ಸಮುದಾಯದ ಹಿರಿಯರಾದ ನಿವೃತ್ತ ಕನ್ನಡ ಪಂಡಿತ ವಿ.ಎಸ್. ಕೃಷ್ಣಭಟ್ ಉದ್ಘಾಟಿಸಿದರು.

ಬ್ರಾಹ್ಮಣ ಸಮುದಾಯದ ಮುಖಂಡರಾದ ನಾಗಭೂಷಣ್, ಚಂದ್ರಶೇಖರ್ ಐತಾಳ್, ಅಂಬರೀಷ್, ಅನಂತಪದ್ಮನಾಭ, ಭಾಗ್ಯ ನಂಜುಂಡಸ್ವಾಮಿ, ಕೆ.ಕೆ.ಲಕ್ಷ್ಮೀದೇವಿ, ಎಂ.ಆರ್.ರವಿಶಂಕರ್, ತಿಮ್ಮಪ್ಪಯ್ಯ, ನಂಜುಂಡಸ್ವಾಮಿ, ಶಂಕರಮೂರ್ತಿ, ರಾಜೇಂದ್ರಕುಮಾರ್, ರಾಮು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯರಾದ ಶೋಜಾ, ಮುಕುಂದ, ಸೈಯದ್ ವಸೀಂ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಉಪೇಂದ್ರ, ಸುನಿಲ್ ಕುಮಾರ್, ಅನಿದ್, ಶಿವಣ್ಣ, ಜಯಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು