ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಧ್ವಜ ಹಾರಿಸುವ ಪರಿಪಾಠ ಇಲ್ಲ: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ

Last Updated 2 ನವೆಂಬರ್ 2019, 7:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ರಾಜ್ಯೋತ್ಸವದಲ್ಲಿ ನಾಡಧ್ವಜ ಹಾರಿಸುವ ಪರಿಪಾಠ ಹಿಂದಿನಿಂದಲೂ ಇಲ್ಲ. ರಾಷ್ಟ್ರಧ್ವಜ ಮಾತ್ರ ಹಾರಿಸಲಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಶುಕ್ರವಾರ ಪ್ರತಿಪಾದಿಸಿದರು.

‘ನಾಡಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವುದೇ ಆದೇಶ ಹೊರಡಿಸಿಲ್ಲ. ವಿವಾದ ಯಾಕೆ ಸೃಷ್ಟಿಯಾಯಿತು ಎಂಬುದು ಗೊತ್ತಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಹಳದಿ, ಕುಂಕುಮ ಬಣ್ಣದ ಧ್ವಜವನ್ನು ‘ಕನ್ನಡ ಧ್ವಜ’ ಎಂದು ಜನರು ಸ್ವೀಕಾರ ಮಾಡಿದ್ದಾರೆ. ಈ ಧ್ವಜವನ್ನು ಕಟ್ಟಲು, ಕೈಯಲ್ಲಿ ಹಿಡಿಯಲು ಅಭ್ಯಂತರ ಇಲ್ಲ. ಆದರೆ, ಅದನ್ನು 1956ರಿಂದ ಈವರೆಗೂ ಹಾರಿಸಿದ ಉದಾಹರಣೆ ಇಲ್ಲ’ ಎಂದು ಸಮರ್ಥಿಸಿಕೊಂಡರು.

‘ದೇಶಕ್ಕೊಂದೇ ರಾಷ್ಟ್ರಧ್ವಜ ಎಂಬ ಅಂಶ ಧ್ವಜ ಸಮಿತಿಯಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿದೆ. ನಾಡಧ್ವಜ ಅದು ಸಾಂಸ್ಕೃತಿಕ ಧ್ವಜ’ ಎಂದು ಉತ್ತರಿಸಿದರು.

‘ವಿವಿಧ ಕ್ಷೇತ್ರ, ಎಲ್ಲ ಜಿಲ್ಲೆಗಳನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ 64 ಮಂದಿ ಆಯ್ಕೆ ಮಾಡಿದ್ದೇವೆ. ನಿಯಮ ಮೀರಿಲ್ಲ. ಆಯ್ಕೆಯನ್ನು ಕೋರ್ಟ್‌ನಲ್ಲೂ ಸಮರ್ಥನೆ ಮಾಡಿಕೊಳ್ಳುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಘೋಷಣೆ ನಂತರ ಅಭ್ಯರ್ಥಿ ಪ್ರಕಟ: ‘ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಉಪಚುನಾವಣೆ ಘೋಷಣೆಯಾಗಿಲ್ಲ. ಪಕ್ಷ ಚುನಾವಣೆಗೆ ತಯಾರಿ ಮಾಡಿದೆ. ಅಭ್ಯರ್ಥಿಯೇ ಎಲ್ಲ ಮಾಡಿಕೊಳ್ಳಬೇಕಾದ ಸ್ಥಿತಿ ಬಿಜೆಪಿಯಲ್ಲಿಲ್ಲ. ಬಹುತೇಕ ಎಲ್ಲವನ್ನು ಪಕ್ಷವೇ ಮಾಡುತ್ತದೆ, ಅಭ್ಯರ್ಥಿ ಪೂರಕ ಮಾತ್ರ. ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿ ಪ್ರಕಟಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಶಾಸ್ತ್ರೀಯ ಭಾಷಾ ಕೇಂದ್ರಕ್ಕೆ ಮೈಸೂರು ವಿ.ವಿ.ಯಲ್ಲಿ 5 ಎಕರೆ ಜಾಗ’
‘ಮೈಸೂರು ವಿಶ್ವವಿದ್ಯಾನಿಲಯದ ಐದು ಎಕರೆಯಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

‘ಮೈಸೂರು ವಿ.ವಿ ಕಟ್ಟಡವೊಂದರಲ್ಲಿ ಸದ್ಯಕ್ಕೆ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರ ಆರಂಭಿಸುವ, ಕೇಂದ್ರ ಸರ್ಕಾರ ನೀಡುವ ₹ 150 ಕೋಟಿ ಅನುದಾನ ಸಮರ್ಪಕ ಬಳಕೆಗೆ ರೂಪುರೇಷೆ ಸಿದ್ಧಪಡಿಸುವ ಕಾರ್ಯ ಶುರುವಾಗಿದೆ’ ಎಂದು ರಾಜ್ಯೋತ್ಸವ ಭಾಷಣದಲ್ಲಿ ಹೇಳಿದರು.

ರಾಷ್ಟ್ರಧ್ವಜ ಮಾತ್ರ ಹಾರಾಟ
ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ,ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಹಾವೇರಿ, ವಿಜಯಪುರ, ಉತ್ತರ ಕನ್ನಡ, ಕಾರವಾರ, ಧಾರವಾಡ, ಗದಗ, ವಿಜಯಪುರ, ಹಾಸನ ಮತ್ತು ಮಂಡ್ಯ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ನಾಡಧ್ವಜ ಹಾರಿಸದೇ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT