ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷಕ್ಕಿಂತ ರಾಷ್ಟ್ರ ಹಿತವೇ ಮುಖ್ಯ: ಎಂ.ಕೆ.ಪ್ರಾಣೇಶ್

Published 2 ಏಪ್ರಿಲ್ 2024, 13:42 IST
Last Updated 2 ಏಪ್ರಿಲ್ 2024, 13:42 IST
ಅಕ್ಷರ ಗಾತ್ರ

ಕಡೂರು: ‘ಪಕ್ಷಕ್ಕಿಂತ ರಾಷ್ಟ್ರದ ಹಿತವೇ ಮುಖ್ಯ ಎಂಬ ಧೃಢ ನಿರ್ಧಾರದಿಂದ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿದೆ. ಇದು ರಾಜ್ಯದ ಅಭಿವೃದ್ಧಿಗೂ ಪೂರಕ’ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ತಾಲ್ಲೂಕಿನ‌ ಮಚ್ಚೇರಿಯ ಬೆಂಕಿ‌ ಲಕ್ಷ್ಮಯ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಜಂಟಿ ಸಮನ್ವಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವವೇ ತಿರುಗಿ ನೋಡುವಂಥ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶವು ವಿಶ್ವನಾಯಕ ಸ್ಥಾನಕ್ಕೇರುವುದರಲ್ಲಿ ಯಾವ ಅನುಮಾನವಿಲ್ಲ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲರೂ ಶ್ರಮಿಸಬೇಕು’ ಎಂದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ‘ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ಅವರನ್ನು ಗೆಲ್ಲಿಸಬೇಕು. ಕಡೂರಿಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದೆ. ರಾಷ್ಟ್ರಹಿತಕ್ಕಾಗಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿದು ನಮ್ಮ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸೋಣ’ ಎಂದರು.

ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ‘ಯಾರನ್ನೂ ಟೀಕಿಸುವ ಅಗತ್ಯವಿಲ್ಲ. ಬೇರೆಯವರ ಟೀಕೆಗೆ ಕೆರಳುವ ಅಗತ್ಯವೂ ಇಲ್ಲ. ರಾಷ್ಟ್ರ ಹಿತವೇ ಪ್ರಮುಖ ಧ್ಯೇಯವನ್ನಿಟ್ಟುಕೊಂಡ ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಎರಡೂ ಪಕ್ಷಗಳು ಸಮಾನವಾಗಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶ್ರಮಿಸಿ ಗೆಲ್ಲಿಸಬೇಕು. ನಾವು ನೀಡುವ ಪ್ರತಿ ಮತವೂ ರಾಷ್ಟ್ರ ರಕ್ಷಣೆಗೆ ಎಂಬ ಚಿಂತನೆ ಎಲ್ಲರಲ್ಲೂ ಮೂಡಬೇಕು. ಅತ್ಯಂತ ಪ್ರಾಮಾಣಿಕವಾಗಿ ಪ್ರಜ್ವಲ್ ಅವರ ಪರವಾಗಿ ಕಾರ್ಯಕರ್ತರ ಜೊತೆಗೂಡಿ ಶ್ರಮಿಸುತ್ತೇನೆ’ ಎಂದರು.

ಹಾಸನ ಲೋಕಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ‘ವಿರೋಧಿಗಳ ಟೀಕೆಗೆ ಉತ್ತರಿಸುವ ಅವಶ್ಯಕತೆಯಿಲ್ಲ. ಕೊಚ್ಚೆಗೆ ಕಲ್ಲು‌ ಹಾಕಲು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಬಿಜೆಪಿ ನೇತೃತ್ವದ ಎನ್.ಡಿ.ಎ. ನಿಲುವನ್ನು ಗಮನಿಸಬೇಕಿದೆ. ಕಾಂಗ್ರೆಸ್ ರಾಷ್ಟ್ರ ಒಡೆಯುವ ಮಾರ್ಗಸೂಚಿಯಲ್ಲಿದೆ. ಆದರೆ, ಮೋದಿಯವರು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಚಿಂತನೆಯಲ್ಲಿದ್ದಾರೆ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದಲೇ ದೇವೇಗೌಡರು ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಾರೆ. ಸಂಸದನಾಗಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದರು.

ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ್, ವಕ್ತಾರ ಕೆ.ಆರ್.ಮಹೇಶ್ ಒಡೆಯರ್, ಜಿಗಣೇಹಳ್ಳಿ ನೀಲಕಂಠಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡರಾದ ಸೋನಾಲ್ ಧರ್ಮೇಗೌಡ, ಚೇತನ್ ಕೆಂಪರಾಜ್, ಕೆ.ಎಂ.ವಿನಾಯಕ, ಶೂದ್ರ ಶ್ರೀನಿವಾಸ್, ಸವಿತಾ ರಮೇಶ್, ಟಿ.ಆರ್.ಲಕ್ಕಪ್ಪ, ಕೆ.ಎಂ.ಬೊಮ್ಮಣ್ಣ, ಬಿ.ಪಿ.ನಾಗರಾಜ್, ಸುನೀತಾ ಜಗದೀಶ್ ಇದ್ದರು.

ಒಂದಾದ ಗುರು ಶಿಷ್ಯರು.
ಒಂದಾದ ಗುರು ಶಿಷ್ಯರು.
ವೇದಿಕೆ ಹಂಚಿಕೊಂಡ ದತ್ತ – ಬೆಳ್ಳಿಪ್ರಕಾಶ್‌
ಕೇವಲ ಹತ್ತು ತಿಂಗಳ‌ ಹಿಂದೆ ವಿಧಾನ ಸಭಾ ಚುನಾವಣೆಯಲ್ಲಿ ಜಿದ್ದಾ ಜಿದ್ದಿಯ ಹೋರಾಟ ನಡೆಸಿದ್ದ ಮಾಜಿ ಶಾಸಕರಾದ ವೈ.ಎಸ್.ವಿ ದತ್ತ ಮತ್ತು ಬೆಳ್ಳಿಪ್ರಕಾಶ್ ಇಬ್ಬರೂ ಪ್ರಥಮ ಬಾರಿ ವೇದಿಕೆ ಹಂಚಿಕೊಂಡರು. ಕೋಮುವಾದಿ ಪಕ್ಷ ಎಂದೇ ಸದಾ ಹೇಳುತ್ತಿದ್ದ ದತ್ತ ಬಿಜೆಪಿಯ ಶಾಲು ಧರಿಸಿದರೆ ಬೆಳ್ಳಿಪ್ರಕಾಶ್ ಜೆಡಿಎಸ್ ಶಾಲು ಧರಿಸಿ ಗಮನ ಸೆಳೆದರು. ಮಾತಿನ ಮಧ್ಯೆ ದತ್ತ ಅವರು ಬೆಳ್ಳಿ ನನ್ನ ಶಿಷ್ಯ. ಆತನ ನೇತೃತ್ವದಲ್ಲೇ ಕಾರ್ಯಕರ್ತರು ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಕರೆ ನೀಡಿದರು. ಬೆಳ್ಳಿ‌ಪ್ರಕಾಶ್ ಸಹ ನನ್ನ ಗುರುಗಳಾದ ದತ್ತ ಎಂದು ಹೇಳಿ ಒಗ್ಗಟ್ಟು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT