ಮಂಗಳವಾರ, ಜನವರಿ 25, 2022
28 °C
ಸರ್ಕಾರಿ ಜಾಗದಲ್ಲಿ ಶಿಲುಬೆ ಪ್ರತಿಷ್ಠಾಪನೆ– ತೆರವಿಗೆ ಒತ್ತಾಯ

ಮೆರವಣಿಗೆಗೆ ತಡೆ: ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ತಾಲ್ಲೂಕಿನ ಕರುಗುಂದ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಶಿಲುಬೆ ಪ್ರತಿಷ್ಠಾಪಿಸಿದ್ದು, ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್‍ ಕಾರ್ಯಕರ್ತರು ‘ಕರುಗುಂದ ಚಲೋ’ ಅಂಗವಾಗಿ ಪಟ್ಟಣದ ಮಿನಿವಿಧಾನಸೌಧ ವೃತ್ತದಿಂದ ಬುಧವಾರ ಮೆರವಣಿಗೆ ಆರಂಭಿಸಿದರು. ಮಾರ್ಗಮಧ್ಯೆ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

‘ಕರುಗುಂದ ಚಲೋ’ ಕಾರ್ಯ ಕ್ರಮದ ಪ್ರಕಾರ ಬಸ್ ನಿಲ್ದಾಣದಿಂದ ಬೈಕ್‍ ರ‍್ಯಾಲಿಯಲ್ಲಿ ಕರುಗುಂದಕ್ಕೆ ತೆರಳಿ ಪ್ರತಿಭಟನೆ, ನಡೆಸುವ ಉದ್ದೇಶದಿಂದ ಮೆರವಣಿಗೆ ಪ್ರಾರಂಭಿಸಿದರು. ಬಜರಂಗ ದಳದ ಪ್ರಾಂತ ಸಂಚಾಲಕ ಸಕಲೇಶಪುರ ರಘು, ಜಿಲ್ಲಾ ಸಂಚಾಲಕ ಮಹೇಂದ್ರ, ವಿಶ್ವ ಹಿಂದೂ ಪರಿಷತ್‍ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಸುರೇಶ್‍ಕುಮಾರ್ ನೇತೃತ್ವದಲ್ಲಿ ಮೆರವಣಿಗೆ ಉಮಾಮಹೇಶ್ವರ ದೇವ ಸ್ಥಾನದ ಸಮೀಪ ಬಂದಾಗ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.

ಈ ಸಂದರ್ಭದಲ್ಲಿ ಪೊಲೀಸರಿಗೂ, ಬಜರಂಗದಳದ ಮುಖಂಡರಿಗೂ ಮಾತಿನ ಚಕಮಕಿ ನಡೆಯಿತು. ‘ನಮ್ಮನ್ನು ತಡೆಯಬಾರದು. ಮೆರವಣಿಗೆ ಹೋಗಲೇಬೇಕು’ ಎಂದು ಪಟ್ಟು ಹಿಡಿದು ಕೆಲವು ಸಮಯ ರಸ್ತೆಯ ಮಧ್ಯದಲ್ಲಿಯೇ ಪ್ರತಿಭಟನೆ ನಡೆಸಿದರು.

ಆದರೆ, ಪೊಲೀಸರು ಮುಂದೆ ಹೋಗಲು ಬಿಡಲಿಲ್ಲ. ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಿದರು. ಕಾರ್ಯಕರ್ತರನ್ನು ಪೊಲೀಸರು ಹಿಡಿದು ವಾಹನ ಹತ್ತಿಸಿದರು. ಕೆಲವು ಕಾರ್ಯಕರ್ತರು ಓಡಲು ಪ್ರಾರಂಭಿಸಿದರು. ಮುಖಂಡರಾದ ರಘು, ಮಹೇಂದ್ರ, ಕೆ.ಪಿ.ಸುರೇಶ್‍ ಕುಮಾರ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ‘ಕಾನೂನು ಬದ್ಧವಾಗಿ ಶಿಲುಬೆ ತೆರವು ಮಾಡುವಂತೆ ತಹಶೀಲ್ದಾರ್‌ಗೆ ಮನವಿ ನೀಡಲಾಗಿದೆ. ತಹಶೀಲ್ದಾರ್ ಸ್ಥಳಕ್ಕೆ ಬಂದು ಉತ್ತರಿಸಲಿ’ ಎಂದರು.

ಸ್ಥಳಕ್ಕೆ ತಹಶೀಲ್ದಾರ್ ಸಿ.ಜಿ. ಗೀತಾ, ವಲಯ ಅರಣ್ಯಾಧಿಕಾರಿ ರಂಗನಾಥ್ ಬಂದರು..

ಕೆ.ಪಿ. ಸುರೇಶ್‍ಕುಮಾರ್ ಮಾತನಾಡಿ, ‘ಕರುಗುಂದದಲ್ಲಿ ಸರ್ಕಾರಿ ಜಾಗದಲ್ಲಿ ಶಿಲುಬೆ ಪ್ರತಿಷ್ಠಾ ಪಿಸಿದ್ದು, ಮುಂದೆ ಚರ್ಚ್‌ ನಿರ್ಮಾಣವಾಗಲಿದೆ. ಬಳಿಕ ಮತಾಂತರದ ಕೇಂದ್ರವಾಗಲಿದೆ. ಇದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ತಹಶೀಲ್ದಾರ್‌ಗೆ ಅರ್ಜಿ ನೀಡಿದ್ದರೂ ಕ್ರಮ ಕೊಂಡಿಲ್ಲ. ಸರ್ಕಾರ ತೆರವು ಗೊಳಿಸದಿದ್ದರೆ ಸಂಘಟನೆಯವರು ತೆರವುಗೊಳಿಸುತ್ತೇವೆ’ ಎಂದರು.

ಸಕಲೇಶಪುರ ರಘು ಮಾತನಾಡಿ, ‘ತಾಲ್ಲೂಕಿನ ಸರ್ಕಾರಿ ಜಾಗದಲ್ಲಿ 180ಕ್ಕೂ ಹೆಚ್ಚು ಶಿಲುಬೆ ಈಗಾಗಲೇ ಪ್ರತಿಷ್ಠಾಪಿಸಲಾಗಿದೆ. ಬಡವರಿಗೆ ಫಾರಂ ನಂ 50, 53 ರಲ್ಲಿ ಮಂಜೂರಾದ ಜಾಗವನ್ನು ಒಂದು ಸಮುದಾಯದವರು ಒತ್ತುವರಿ ಮಾಡುತ್ತಿದ್ದಾರೆ. ಇದಕ್ಕೆ ನಾವು ಉತ್ತರ ಕೊಡುತ್ತೇವೆ’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಗೀತಾ ಮಾತನಾಡಿ, ‘ಮುಂದಿನ 1 ವಾರದೊಳಗೆ ಸಂಬಂಧಪಟ್ಟ ಜಾಗವನ್ನು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯು ಸೇರಿ ಸರ್ವೆ ಮಾಡಿಸಲಾಗುವುದು. ಕಾನೂನಿನಂತೆ ಕ್ರಮಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಮಹೇಂದ್ರ ಮಾತನಾಡಿ, ‘ಸರ್ಕಾರಿ ಜಾಗದಲ್ಲಿ ಪ್ರತಿಷ್ಠಾಪಿಸುತ್ತಿರುವ ಶಿಲುಬೆಗಳನ್ನು ತಿಂಗಳೊಳಗೆ ತೆರವು ಗೊಳಿಸದಿದ್ದರೆ ಹೋರಾಟ ಮುಂದುವ ರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಕಚೇರಿಗೆ ತೆರಳಿದ ಬಜರಂಗ ದಳದವರು ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.