ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗವಿಕಲರಿಗಿಲ್ಲಿ ನಿತ್ಯವೂ ನರಕಯಾತನೆ!

ಆದೇಶವಿದ್ದರೂ ನಿರ್ಮಾಣವಾಗದ ಇಳಿಜಾರು ಮಾರ್ಗ
Published 29 ಮೇ 2024, 15:44 IST
Last Updated 29 ಮೇ 2024, 15:44 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ತಾಲ್ಲೂಕು ಕಚೇರಿಯ ಮೊದಲನೇ ಅಂತಸ್ತಿನಲ್ಲಿರುವ ವಿವಿಧ ಇಲಾಖೆಗಳ ಕಚೇರಿಗಳಿಗೆ ಹೋಗಲು ಅಂಗವಿಕಲರ ಮಾರ್ಗವಿಲ್ಲದೇ ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ.

ತಾಲ್ಲೂಕು ಕಚೇರಿಯ ಮೊದಲನೇ ಅಂತಸ್ತಿನಲ್ಲಿ, ಉಪ ನೋಂದಣಾಧಿಕಾರಿ ಕಚೇರಿ, ಸರ್ವೆ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ, ಚುನಾವಣಾ ಶಾಖೆ ಸೇರಿದಂತೆ ಹಲವು ಕಚೇರಿಗಳಿವೆ. ನಿತ್ಯವೂ ನೂರಾರು ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಆದರೆ, ಕಚೇರಿಯ ನೆಲ ಅಂತಸ್ತಿನಿಂದ ಮೊದಲನೇ ಮಹಡಿಗೆ ತೆರಳಲು ಮೆಟ್ಟಿಲುಗಳಿದ್ದು, ಅಂಗವಿಕಲರಿಗೆ ಅನುಕೂಲವಾಗುವ ಇಳಿಜಾರು ಮಾರ್ಗವಿಲ್ಲ. ಇದರಿಂದ ಅಂಗವಿಕಲರು ಮೆಟ್ಟಿಲನ್ನೇರಲು ಪ್ರಯಾಸ ಪಡಬೇಕಾಗಿದೆ.

ಅಲ್ಲದೇ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಂಗವಿಕಲ ಸಿಬ್ಬಂದಿ ಕೂಡ ಮೆಟ್ಟಿಲನ್ನೇರಲು ಸಂಕಷ್ಟ ಪಡುವಂತಾಗಿದ್ದು, ಕಟ್ಟಡದ ಹಿಂಬದಿಯಿಂದ ಇಳಿಜಾರು ಮಾರ್ಗವನ್ನು ನಿರ್ಮಿಸಿದರೆ ಅಂಗವಿಕಲರಿಗೆ ಉಪಯುಕ್ತವಾಗುತ್ತದೆ ಎಂಬುದು ಸಾರ್ವಜನಿಕರ ಆಗ್ರಹ.

‘ಕಚೇರಿಗಳಿಗೆ ಅಂಗವಿಕಲರು ಸುಲಭವಾಗಿ ಬರುವಂತಾಗಲು ಸರ್ಕಾರಿ ಕಟ್ಟಡಗಳಲ್ಲಿ ಇಳಿಜಾರು ಮಾರ್ಗವನ್ನು ನಿರ್ಮಿಸುವುದು ಕಡ್ಡಾಯವಾಗಿದ್ದು, ಎಲ್ಲಾ ಕಚೇರಿಗಳಿಗೆ ಇಳಿಜಾರು ಮಾರ್ಗ ನಿರ್ಮಿಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಿದೆ. ಆದರೆ, ತಾಲ್ಲೂಕು ಕಚೇರಿಯ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಲು ಅಂಗವಿಕಲ ಮಾರ್ಗವಿಲ್ಲದ್ದರಿಂದ ಕಚೇರಿಗೆ ಬರುವ ಅಂಗವಿಕಲರು ಸಮಸ್ಯೆ ಎದುರಿಸುವಂತಾಗಿದೆ. ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೆಟ್ಟಿಲನ್ನೇರುವ ಸಂಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಕೂಡಲೇ ಇಳಿಜಾರು ಮಾರ್ಗ ಅಥವಾ ಪರ್ಯಾಯ ಮಾರ್ಗವನ್ನು ಕಲ್ಪಿಸಬೇಕು’ ಎಂದು ಅಂಗವಿಕಲರ ಸಂಘದ ಪದಾಧಿಕಾರಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಮೂಡಿಗೆರೆಯ ಉಪನೋಂದಣಾಧಿಕಾರಿಗಳ ಕಚೇರಿ ಇರುವ ಅಂತಸ್ತಿಗೆ ತೆರಳಲು ಇರುವ ಮೆಟ್ಟಿಲುಗಳು
ಮೂಡಿಗೆರೆಯ ಉಪನೋಂದಣಾಧಿಕಾರಿಗಳ ಕಚೇರಿ ಇರುವ ಅಂತಸ್ತಿಗೆ ತೆರಳಲು ಇರುವ ಮೆಟ್ಟಿಲುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT