ಶನಿವಾರ, ಮಾರ್ಚ್ 25, 2023
28 °C
ಮಹಿಳಾ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

‘ಶೇಂಗಾ ಚಿಕ್ಕಿ ಘಟಕ ತೆರೆಯಲು ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಪ್ರತಿ ಜಿಲ್ಲೆಯಲ್ಲೂ ಶೇಂಗಾ ಚಿಕ್ಕಿ (ಮಿಠಾಯಿ ) ಉತ್ಪಾದನಾ ಘಟಕಗಳನ್ನು ತೆರೆದು ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರಿಗೆ ದುಡಿಮೆಗೆ ದಾರಿ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಹೊಸಪೇಟೆಯಲ್ಲಿ 10 ಲಿಂಗತ್ವ ಅಲ್ಪಸಂಖ್ಯಾತರು ಒಗ್ಗೂಡಿ ಶೇಂಗಾ ಚಿಕ್ಕಿ ಘಟಕ ತೆರೆದು ಸಂಪಾದನೆಗೆ ದಾರಿ ಕಂಡುಕೊಂಡಿದ್ದಾರೆ. ಘಟಕದಲ್ಲಿ ಉತ್ಪಾದಿಸಿದ ಚಿಕ್ಕಿಯನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಪೂವಿತಾ ಮಾತನಾಡಿ, ‘ಜಿಲ್ಲೆಯಲ್ಲೂ ಚಿಕ್ಕಿ ಘಟಕ ತೆರೆಯಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ’ ಎಂದು ಮಾಹಿತಿ ನೀಡಿದರು.

ಉತ್ಪನ್ನಗಳ ಮಾರಾಟಕ್ಕೆ ಬೆಳಗಾವಿಯ ಸವದತ್ತಿಯಲ್ಲಿ ಮಾರಾಟ ಮಳಿಗೆ ತೆರೆಯಲಾಗಿದೆ. ಬಜೆಟ್‌ನಲ್ಲಿ ₹ 10 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು ಸೂರು ಕಲ್ಪಿಸಿಕೊಳ್ಳಲು ರಾಯಚೂರು, ಬಳ್ಳಾರಿ ಇತರ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಜಾಗ ಒದಗಿಸಿದೆ. ಎಲ್ಲ ಜಿಲ್ಲೆಗಳಲ್ಲೂ ಜಾಗ ಕಲ್ಪಿಸಿ, ಅವರಿಗೆ ವಸತಿ ವ್ಯವಸ್ಥೆ ಮಾಡುವ ಉದ್ದೇಶ ಇದೆ ಎಂದರು.

ಭಿಕ್ಷಾಟನೆ ಮಾಡಬಾರದು. ಸವಲತ್ತು, ಯೋಜನೆಗಳ ಪ್ರಯೋಜನ ಪಡೆದು ಸ್ವಂತ ಉದ್ಯೋಗ ಕೈಗೊಂಡು ದುಡಿಮೆ ಮಾಡಬೇಕು. ಇತರರಿಗೆ ಮಾರ್ಗದರ್ಶನ ನೀಡಬೇಕು. ಎಲ್ಲರೂ ಎಲ್ಲರಿಗೆ ನೆರವಾಗಬೇಕು. ಬ್ಯಾಂಕಿನಲ್ಲಿ ಪಡೆದ ಸಾಲವನ್ನು ತೀರಿಸಬೇಕು ಎಂದು ಸಲಹೆ ನೀಡಿದರು.

ಕೃಷಿ – ಹೈನಗಾರಿಕೆ: ಉದ್ಯೋಗಿನಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ನೆರವು ಪಡೆದು ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಅಂಜು ಮತ್ತು ಸ್ನೇಹಿತರು ಈ ಕಾಯಕದಲ್ಲಿ ತೊಡಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್‌ ತಿಳಿಸಿದರು.

ನಿಗಮದ ಯೋಜನೆಗಳ ಅನುಷ್ಟಾನ, ಸವಲತ್ತುಗಳ ವಿತರಣೆ, ಕಾರ್ಪೊರೇಷನ್‌ ಬ್ಯಾಂಕ್‌ನ ತರಬೇತಿ ಸಂಸ್ಥೆ (ಕಾಬ್‌ಸೆಟ್‌) ವತಿಯಿಂದ ತರಬೇತಿ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.

ಸಮೃದ್ಧಿ ಯೋಜನೆಯಡಿ ನಿಗಮದಿಂದ ₹ 10 ಸಾವಿರ ಪ್ರೋತ್ಸಾಹ ಧನ ನೀಡಿದ್ದಾರೆ. ಕೋವಿಡ್‌ ಸಂಕಷ್ಟದ ನಡುವೆ ವ್ಯಾಪಾರ ಮುಂದುವರಿಸಲು ಅನುಕೂಲವಾಯಿತು ಎಂದು ಹೂವಿನ ವ್ಯಾಪಾರಿ ಮಹಿಳೆಯೊಬ್ಬರು ಹೇಳಿದರು.

ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.