ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳಿನಿಂದ ನೀರಿನ ಸಂಪರ್ಕ ಕಡಿತ

ಗುಂಡ್ಯ ಪೊಲೀಸ್ ತಪಾಸಣಾ ಕೇಂದ್ರದ ದುಸ್ಥಿತಿ
Last Updated 9 ಜೂನ್ 2021, 2:25 IST
ಅಕ್ಷರ ಗಾತ್ರ

ಶಿರಾಡಿ(ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಗುಂಡ್ಯದ ಪೊಲೀಸ್ ತಪಾಸಣೆ ಕೇಂದ್ರಕ್ಕೆ ನೀರು ಸರಬರಾಜು ಆಗುವ ಪೈಪ್ ಒಡೆದು ಹೋಗಿ, ನಾಲ್ಕು ತಿಂಗಳಿನಿಂದ ನೀರು ಸರಬರಾಜು ನಿಲುಗಡೆಗೊಂಡಿದೆ. ಇದನ್ನು ಸರಿಪಡಿಸಿಕೊಡುವಲ್ಲಿ ಶಿರಾಡಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ತೋರುತ್ತಿದೆ ಎಂಬ ದೂರು ವ್ಯಕ್ತವಾಗಿದೆ.

ಕಳೆದ ವರ್ಷ ಕೋವಿಡ್‌ ಸಂದರ್ಭದಲ್ಲಿ ಜಿಲ್ಲಾ ಗಡಿಯಲ್ಲಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುವ ಪ್ರಕ್ರಿಯೆ ನಡೆಯುತ್ತಿದ್ದಾಗ ಗುಂಡ್ಯದಲ್ಲಿ ಪೊಲೀಸ್ ಚೌಕಿ ಇಲ್ಲದ ಕಾರಣ ಆಗಿನ ಎಸ್.ಐ. ಈರಯ್ಯ ಅವರ ಕೋರಿಕೆಯಂತೆ ಪುತ್ತೂರು ಉಪ ವಿಭಾಗಾಧಿಕಾರಿಯ ಅನುಮತಿಯೊಂದಿಗೆ ಪ್ರತ್ಯೇಕ ತಪಾಸಣೆ ಕೇಂದ್ರದ ಕಟ್ಟಡ ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ಶಿರಾಡಿ ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ಸಂಪರ್ಕ ನೀಡಲಾಗಿತ್ತು.

ಆರಂಭದಲ್ಲಿ ಎಲ್ಲ ವ್ಯವಸ್ಥೆಗಳು ಸರಿ ಇದ್ದರೂ ನಾಲ್ಕು ತಿಂಗಳಿಂದ ಕುಡಿಯುವ ನೀರು, ಶೌಚಾಲಯ ಹಾಗೂ ಸ್ನಾನದ ಕೊಠಡಿಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿದೆ. ಇಲ್ಲಿ ದಿನದ 24 ಗಂಟೆಯೂ ಪಾಲಿ ವ್ಯವಸ್ಥೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ನೀರಿಗಾಗಿ ಸ್ಥಳೀಯ ಮನೆಯವರನ್ನು ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಯೊಬ್ಬರ ಕೃಪೆಯಿಂದ ಪೊಲೀಸರು ತಾತ್ಕಾಲಿಕ ನೆಲೆಯಲ್ಲಿ ನೀರನ್ನು ಪಡೆಯುತ್ತಿದ್ದಾರೆ. ಆದರೆ, ಎಷ್ಟು ಮಾತ್ರಕ್ಕೆ ಸರಿ ಎನ್ನುವ ಪ್ರಶ್ನೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ದಾರಿ ದೀಪವೂ ಇಲ್ಲ: ಜಿಲ್ಲಾ ಗಡಿಯಲ್ಲಿ ಇರುವ ಈ ಕೇಂದ್ರ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಯುತ್ತಿರುತ್ತದೆ. ಆದರೆ, ಈ ಪ್ರದೇಶದಲ್ಲಿ ರಸ್ತೆಯಲ್ಲಿ ದಾರಿ ದೀಪಗಳು ಇಲ್ಲವಾಗಿದ್ದು, ತಪಾಸಣೆ ಕೇಂದ್ರ ಸನಿಹಕ್ಕೆ ಬಂದಾಗಲೇ ವಾಹನ ಚಾಲಕರಿಗೆ ತಿಳಿಯುವಂತಿದ್ದು, ಬಹಳಷ್ಟು ವಾಹನ ಚಾಲಕರು ಗೊಂದಲಕ್ಕೀಡಾಗಿ, ತಪಾಸಣಾ ಗೇಟಿಗೆ ಡಿಕ್ಕಿ ಹೊಡೆದ ಉದಾಹರಣೆಗಳಿವೆ. ದಾರಿ ದೀಪದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT