ಮಂಗಳವಾರ, ಮೇ 17, 2022
24 °C

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ; ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವೆ ಮೋಟಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ‘ಜನರು ಹಕ್ಕುಗಳಿಗಾಗಿ ‌ಪ್ರತಿಭಟಿಸಿದರೆ ಅವರನ್ನು ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಆದರೆ, ಜನರಿಗೆ ಮೋಸ ಮಾಡಿ, ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ, ದೇಶದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡದೆ, ಕೋವಿಡ್‌–19 ಹೆಸರಿನಲ್ಲಿ ಕೊಳ್ಳೆ ಹೊಡೆದಿರುವ ಕೇಂದ್ರ ಹಾಗೂ ರಾಜ್ಯವನ್ನು ಆಳುತ್ತಿರುವರಿಗೆ ಏನನ್ನಬೇಕು’ ಎಂದು ಮಾಜಿ ಸಚಿವೆ ಮೋಟಮ್ಮ ಪ್ರಶ್ನಿಸಿದರು.

ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಆಟೊ ಚಾಲಕರ ಸಂಘದ ನೇತೃತ್ವದಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಎಂದರೆ ಮೋಸದ ಸರ್ಕಾರ. ಆಡಳಿತಕ್ಕೆ ಬರುವ ಮುನ್ನ ಕಪ್ಪು ಹಣ ತರುತ್ತೇವೆ, 2 ಕೋಟಿ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ ತಡೆಗಟ್ಟುತ್ತೇವೆ ಹೀಗೆ ನಾನಾ ರೀತಿಯ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತೆ ಮಾಡಿದ್ದಾರೆ.
ರೈತರು ಹಾಗೂ ಜನರಿಗೆ ಬೇಡದ ಕಾಯ್ದೆಗಳು ಇವರಿಗೇಕೇ ಬೇಕು’ ಎಂದು ಹೇಳಿದರು.

‘ದೇಶದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಶೃಂಗೇರಿಯಲ್ಲಿ ಕೂಡ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಈ ಬಗ್ಗೆ ಯಾವ ಬಿಜೆಪಿ ನಾಯಕರೂ ಬಾಯಿ ತೆರೆಯಲಿಲ್ಲ. ಯಾವಾಗಲೂ ಬಾಯಿ ಬಡಿದುಕೊಳ್ಳುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ನಾಪತ್ತೆಯಾಗಿದ್ದಾರೆ. ಬಿಜೆಪಿಯವರು ಜನರ ಮುಖ ತೋರಿಸುವ ಯೋಗ್ಯತೆ ಕಳೆದುಕೊಂಡಿದ್ದಾರೆ’ ಎಂದರು.

ಸಿಪಿಐಎಂಎಲ್ ರಾಜ್ಯ ಸಮಿತಿ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ‘ಇದು ಪ್ರಜಾಪ್ರಭುತ್ವ ಸರ್ಕಾರ ಅಲ್ಲ. ಇದು ಬಂಡವಾಳಶಾಹಿಗಳಿಗೆ ತಲೆ ಹಿಡುಕ ಸರ್ಕಾರ. ಇದು ಕಾರ್ಪೊರೇಟ್‍ಗಳ ಸರ್ಕಾರ ಎಂದು ಸಾಬೀತು ಮಾಡಿದ್ದಾರೆ. ಹಿಂದೆ ಯುಪಿಎ ಸರ್ಕಾರ ₹ 44 ಲಕ್ಷ ಕೋಟಿ ಸಾಲ ಮಾಡಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರ ₹ 88 ಲಕ್ಷ ಕೋಟಿ ಸಾಲ ಮಾಡಿದೆ. ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರ ತೆರಿಗೆ ಹಣ ಏನು ಮಾಡಿದ್ದಾರೆಂದು ದೇಶದ ಜನರು ಪ್ರಶ್ನಿಸಬೇಕಾಗಿದೆ’ ಎಂದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಆಟೊವೊಂದನ್ನು ಹಗ್ಗದಲ್ಲಿ ಎಳೆದು ತರುವ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯ ಎಚ್.ಪಿ.ರಮೇಶ್, ಬಿಎಸ್‍ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಕರವೇ ಅಧ್ಯಕ್ಷ ಪ್ರಸನ್ನ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದುಗ್ಗಪ್ಪ ಗೌಡ, ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ್, ಸ್ವತಶ್ವಲಿ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಇಂತಿಯಾಜ್, ಸ್ವಾಭಿಮಾನಿ ಆಟೊ ಚಾಲಕರ ಸಂಘದ ಅಧ್ಯಕ್ಷ ಪುರುಷೋತ್ತಮ, ಮುಖಂಡರಾದ ಸುಧೀರ್, ನಾಗೇಶ್, ಸತೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು