ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂದಾಯ–ಅರಣ್ಯ ಗೊಂದಲ ಪರಿಹಾರಕ್ಕೆ ಪ್ರತಿಭಟನೆ

ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಘೋಷಣೆಗೆ ವಿರೋಧ, ಕಸ್ತೂರಿ ರಂಗನ್ ವರದಿ ಜಾರಿ ಬೇಡ
Published : 19 ಆಗಸ್ಟ್ 2024, 14:43 IST
Last Updated : 19 ಆಗಸ್ಟ್ 2024, 14:43 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಕಂದಾಯ ಮತ್ತು ಅರಣ್ಯ ಭೂಮಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಕಸ್ತೂರಿ ರಂಗನ್ ವರದಿ ಮತ್ತು ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಹೋರಾಟ ಸಮಿತಿಯ ನೂರಾರು ಕಾರ್ಯಕರ್ತರು, ತಹಶೀಲ್ದಾರ್ ಸುಮಂತ್ ಅವರ ಮೂಲ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್, ಜಿಲ್ಲೆಯಾದ್ಯಂತ ಬಹುತೇಕ ಪ್ರದೇಶಗಳನ್ನು ವಿವಿಧ ರೀತಿಯ ಅರಣ್ಯ ಎಂದು ಘೋಷಿಸಿ ಲಕ್ಷಾಂತರ ಹೆಕ್ಟೇರ್ ಪ್ರದೇಶವನ್ನು ಅರಣ್ಯ ಎಂದು ಮಾಡಲಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಅಮಾಯಕ ಜನ ಬದುಕಿನ ದಾರಿ ಕಾಣದೆ ಕಂಗಾಲಾಗಿದ್ದಾರೆ ಎಂದು ಆರೋಪಿಸಿದರು.

ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಘೋಷಣೆಗಾಗಿ ಸೆಕ್ಷನ್– 4 ಜಾರಿಗೊಳಿಸಲಾಗಿದೆ. ಗೋಮಾಳ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಮತ್ತಿತರೆ ಕಂದಾಯ ಭೂಮಿಯನ್ನು ಅರಣ್ಯ ವ್ಯಾಪ್ತಿಗೆ ತರಲು ಅರಣ್ಯ ಇಲಾಖೆ ಮುಂದಾಗಿದೆ. ಇದರಿಂದ ಮಲೆನಾಡಿಗರ ಬದುಕು ಬೀದಿಗೆ ಬೀಳುವಂತಾಗಿದೆ ಎಂದು ಹೇಳಿದರು.

ಮುಖಂಡ ಕೆ.ಕೆ.ರಘು ಮಾತನಾಡಿ, ‘ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನ ರಹಿತರಿದ್ದಾರೆ. 94–ಸಿ ಅಡಿಯಲ್ಲಿ ನೂರಾರು ಜನರಿಗೆ ಹಕ್ಕುಪತ್ರ ನೀಡಬೇಕಿದೆ. ಆದರೆ, ಸೆಕ್ಷನ್ –4 ನೆಪ ಹೇಳಿ ಜಿಲ್ಲೆಯಲ್ಲಿ ಲಕ್ಷಾಂತರ ಮಂದಿಗೆ ನಿವೇಶನ ಹಕ್ಕುಪತ್ರ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಸಂಜಯ್‌ಕುಮಾರ್ ನೇತೃತ್ವದ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವ ತನಕ ಕಸ್ತೂರಿರಂಗನ್ ವರದಿ ಜಾರಿ ಮಾಡಬಾರದು. ಕಸ್ತೂರಿ ರಂಗನ್ ವರದಿಯನ್ನು ಕನ್ನಡದಲ್ಲಿ ಭಾಷಾಂತರ ಮಾಡಿಸಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ವಿತರಿಸಬೇಕು. ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶದ ಜನರ ಆಹವಾಲು ಆಲಿಸಬೇಕು. ಅರಣ್ಯ ಸಚಿವ ಈಶ್ವರಖಂಡ್ರೆ ಭರವಸೆ ನೀಡಿರುವಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಹೋರಾಟ ವೇದಿಕೆಯ ಮುಖಂಡರ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಿಪಿಐ ಮುಖಂಡರಾದ ರಾಧ ಸುಂದರೇಶ್, ಕೆರೆಮಕ್ಕಿ ರಮೇಶ್, ಎಎಪಿ ಮಾಧ್ಯಮ ವಕ್ತಾರ ಡಾ.ಸುಂದರಗೌಡ, ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜೆಡಿಎಸ್ ಮುಖಂಡ ಮಂಜಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT