ಬುಧವಾರ, ಆಗಸ್ಟ್ 17, 2022
23 °C
ಹೊಗರೇಹಳ್ಳಿ ಗೇಟ್‍ನಿಂದ ಲಿಂಗದಹಳ್ಳಿವರೆಗೆ ರಸ್ತೆ ಕಾಮಗಾರಿ

ಕಳಪೆ ಕಾಮಗಾರಿ: ಗ್ರಾಮಸ್ಥರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ಬೀರೂರು-ಲಿಂಗದಹಳ್ಳಿ ಮುಖ್ಯರಸ್ತೆಯ ಹೊಗರೇಹಳ್ಳಿ ಗೇಟ್‍ನಿಂದ ಲಿಂಗದಹಳ್ಳಿವರೆಗೆ ನಡೆದಿರುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಈ ರಸ್ತೆಯನ್ನು  ದುರಸ್ತಿಪಡಿಸಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊಗರೇಹಳ್ಳಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

‘ಪ್ರಾಕೃತಿಕ ವಿಕೋಪ ನಿರ್ವಹಣೆ ಯೋಜನೆಯಡಿಯಲ್ಲಿ 1.6 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ₹1.20 ಕೋಟಿ ಮಂಜೂರು ಮಾಡಲಾಗಿತ್ತು. ಕಳೆದ ಮಾರ್ಚ್‌ನಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಿ 2 ತಿಂಗಳಿನಲ್ಲಿ ಮುಗಿಸಿದ್ದಾರೆ. ಈಗ ರಸ್ತೆಯ ಎಡಬದಿ ಕಿತ್ತು ಹೋಗುತ್ತಿದ್ದು, ಕಾಮಗಾರಿ ಕಳಪೆಯಾಗಿರುವುದೇ ಇದಕ್ಕೆ ಕಾರಣ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಜಿ.ಶಶಿಕುಮಾರ್ ಆರೋಪಿಸಿದರು.

 ‘ಈಗಾಗಲೇ ಲೋಕೋಪಯೋಗಿ ಇಲಾಖೆ ಎ.ಇ.ಇ. ದಯಾನಂದ್ ಅವರಿಗೆ ದೂರು ನೀಡಿದರೂ, ಅವರು ಸ್ಥಳ ಪರಿಶೀಲನೆ ನಡೆಸದೆ ಮೌಖಿಕವಾಗಿ ಇದು ಗುಣಮಟ್ಟದ ಕಾಮಗಾರಿ ಎಂದಿದ್ದಾರೆ. ಶನಿವಾರ ಕಿತ್ತುಹೋದ ರಸ್ತೆಗೆ ತೇಪೆ ಹಾಕಲು ಬಂದಿದ್ದ ಕಾರ್ಮಿಕರನ್ನು ತಡೆದು, ಅವರಿಗೆ ಮಾಹಿತಿ ನೀಡಲು ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಶಾಸಕರು ಇಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಗ್ರಾಮಗಳಿಗೆ ಬರುವ ರಸ್ತೆ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ‘ಹಲವರು ಈ ಮಾರ್ಗದಲ್ಲಿ ಸಂಚರಿಸುವಾಗ ಬೈಕ್ ಮತ್ತಿತರ ವಾಹನಗಳಿಂದ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳು ಸಾಕಷ್ಟಿವೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಮಾತನಾಡಿ, ‘ಹೊಗರೇ ಹಳ್ಳಿ ಗೇಟ್‍ನಿಂದ ಆಲದಹಳ್ಳಿ, ಹೊಗರೇಹಳ್ಳಿ ಗ್ರಾಮಗಳಿಗೆ ಕೆ.ಎಂ. ಕೃಷ್ಣಮೂರ್ತಿ ಶಾಸಕರಾಗಿದ್ದ ಸಂದರ್ಭ ದಲ್ಲಿ ಉತ್ತಮ ರಸ್ತೆ ಮಾಡಿಸಿಕೊಟ್ಟಿದ್ದರು. ಆ ನಂತರ ವರ್ಷಗಳೇ ಉರುಳಿದರೂ, ರಸ್ತೆ ಸಂಪೂರ್ಣ ಹದಗೆಟ್ಟರೂ ಯಾರೂ ಇದರತ್ತ ಗಮನಹರಿಸಿಲ್ಲ. ವಿದ್ಯಾರ್ಥಿಗಳು, ರೈತರು ಈ ಮಾರ್ಗದಲ್ಲಿಯೇ ಬೀರೂರು-ಲಿಂಗದಹಳ್ಳಿ, ಬಳ್ಳಿಗನೂರು ಕಡೆಗೆ ಹೆಚ್ಚಾಗಿ ಓಡಾಡುತ್ತಾರೆ. ಶಾಸಕರು ಗೇಟ್‍ನಿಂದ ಹೊಗರೇಹಳ್ಳಿ ಗ್ರಾಮಕ್ಕೆ ಇನ್ನಾದರೂ ರಸ್ತೆ ನಿರ್ಮಾಣ ಮಾಡಲು ಮುಂದಾಗಲಿ’ ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್, ಮುಖಂಡರಾದ ಗುರುಮೂರ್ತಿ, ಸತೀಶ್, ದಿಲೀಪ್, ರಾಕೇಶ್, ಮಲ್ಲಪ್ಪ, ರಮೇಶ್ ಇದ್ದರು.

‘ರಸ್ತೆಗೆ ಹಾನಿ’

ಪಿಡಬ್ಲ್ಯುಡಿ ಕಿರಿಯ ಎಂಜಿನಿಯರ್ ಕಾಂತರಾಜು ಸ್ಥಳಕ್ಕೆ ಬಂದಾಗ ಕಳಪೆ ಕಾಮಗಾರಿ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅವರು, ‘ಇಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿಯೇ ಲಿಂಗದಹಳ್ಳಿ ಬಳಿಯೂ ಕೆಲಸ ನಡೆಯುತ್ತಿದ್ದು, ಆಗ ಇಲ್ಲಿ 40 ಟನ್ ಸಾಮಾರ್ಥ್ಯದ ಸಾಮಗ್ರಿ ಹೊತ್ತ ಟ್ರಕ್‍ಗಳು ಸಂಚಾರ ನಡೆಸುತ್ತಿದ್ದವು, ಇದರಿಂದ ರಸ್ತೆ ಕುಸಿದಿದೆ. ಇನ್ನೂ ಹಣ ಬಿಡುಗಡೆಯಾಗಿಲ್ಲದ ಕಾರಣ ಗುತ್ತಿಗೆದಾರರಿಗೆ ದುರಸ್ತಿ ಮಾಡಿಸುವಂತೆ ಸೂಚಿಸಲಾಗುವುದು. ಕಾಮಗಾರಿ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು