ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಬಯಲು ಶೌಚಾಲಯವೇ ಗತಿ!

ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನಾ ಭಾಗ್ಯ ಕಾಣಲಿಲ್ಲ
Last Updated 1 ಸೆಪ್ಟೆಂಬರ್ 2020, 8:27 IST
ಅಕ್ಷರ ಗಾತ್ರ

ಬಿ.ಎಚ್.ಕೈಮರ (ಎನ್.ಆರ್.ಪುರ): ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಎಚ್.ಕೈಮರ ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿರುವ ಸಮುದಾಯ ಶೌಚಾಲಯದ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳುಗಳೇ ಕಳೆದಿದ್ದರೂ ಉದ್ಘಾಟನಾ ಭಾಗ್ಯ ಕಾಣದೆ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

ಬಿ.ಎಚ್.ಕೈಮರ ಗ್ರಾಮ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳು ಹಾಗೂ ಖಾಸಗಿ ಅಂಗಡಿ ಮಳಿಗೆಗಳನ್ನು ತಾಲ್ಲೂಕಿನ ಬೇರೆ, ಬೇರೆ ಭಾಗಗಳಿಂದ ಬಂದು ಬಾಡಿಗೆಗೆ ಪಡೆದು ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಹೋಟೆಲ್‌ಗಳು ಇಲ್ಲಿವೆ. 5 ಬಾಳೆಕಾಯಿ ಮಂಡಿಗಳು ಇಲ್ಲಿವೆ.

50ಕ್ಕೂ ಹೆಚ್ಚು ಜನ ಮತ್ತು ಸರಕು ಸಾಗಿಸುವ ಆಟೊಗಳು ಈ ವ್ಯಾಪ್ತಿಯ ಲ್ಲಿವೆ. ಅಲ್ಲದೆ, ಇದು ಬಾಳೆಹೊನ್ನೂರು, ಕೊಪ್ಪ, ಎನ್.ಆರ್.ಪುರ, ಶಿವಮೊಗ್ಗಕ್ಕೆ ಹೋಗುವವರು ಇಲ್ಲಿಗೆ ಬಂದು ಬಸ್ ಮೂಲಕ ಪ್ರಯಾಣಿಸಬೇಕಾಗುತ್ತದೆ. ಹಾಗಾಗಿ, ವ್ಯವಹಾರಸ್ಥರಿಗೆ, ಆಟೊ ಚಾಲಕರಿಗೆ, ಪ್ರಯಾಣಿಕರಿಗೆ ಮೂತ್ರ ವಿಸರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾಲ್ಕೈದು ವರ್ಷದ ಹಿಂದೆ ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ನಿರ್ಧರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

‘ಪ್ರಸ್ತುತ ₹ 5ಲಕ್ಷ ವೆಚ್ಚದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಿಸಿ ಕಾಮಗಾರಿ ಪೂರ್ಣಗೊಂಡು ಬಳಸಲು ಸಿದ್ಧವಾಗಿದೆ. ಆದರೆ, ಇದುವರೆಗೂ ಉದ್ಘಾಟನೆಯಾಗದಿರುವುದರಿಂದ ಬಹುತೇಕ ಜನರು ಬಯಲು ಶೌಚಾಲಯವನ್ನೇ ಅವಲಂಬಿಸುವಂತಾ ಗಿದೆ. ಇದರಿಂದಾಗಿ ಬಹುತೇಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗದೆ ದುರ್ನಾತ ಬೀರುತ್ತಿದೆ’ ಎಂದು ಸ್ಥಳೀಯರು ದೂರುತ್ತಾರೆ.

‘ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿದ್ದರೂ ಉದ್ಘಾಟನೆ ಯಾಗದಿರುವುದರಿಂದ ಸಾರ್ವಜನಿ ಕರಿಗೆ, ಬಸ್‌ನಲ್ಲಿ ಪ್ರಯಾಣಿಸುವವರಿಗೆ, ಆಟೊ ಚಾಲಕರಿಗೆ ಸಮಸ್ಯೆಯಾಗಿದೆ. ಇದನ್ನು ಸಾರ್ವಜನಿಕ ಉಪಯೋಗಕ್ಕೆ ಮುಕ್ತಗೊಳಿಸಿದರೆ ಅನುಕೂಲವಾಗು ತ್ತದೆ’ ಎನ್ನುತ್ತಾರೆ ಬಿ.ಎಚ್.ಕೈಮರ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಟರಾಜ್.

‘ಸಮುದಾಯ ಶೌಚಾಲಯ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಹಣ ಪಾವತಿಸದಿರುವುದರಿಂದ ಇದರ ಉದ್ಘಾಟನೆಯಾಗಿಲ್ಲ’ ಎಂದು ಎಂಜಿನಿಯರ್ ಮಮತಾ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಿಷ್ ಅವರನ್ನು ಸಂಪರ್ಕಿಸಿದಾಗ, ‘ಬಿ.ಎಚ್.ಕೈಮರ ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯವನ್ನು ಸಾರ್ವಜನಿಕರು ಉಪಯೋಗಿಸಲು ಅನುಕೂಲ ಮಾಡಿಕೊಡುವಂತೆ ಕಳೆದ ಮೇ 25ರಂದು ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಪತ್ರ ಬರೆಯಲಾಗಿದ್ದರೂ ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT