ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಕಡಿತಲೆಗೆ ಅನುಮತಿ ನಿಧಾನಗತಿ: ಆಕ್ಷೇಪ

ಕೊಪ್ಪದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ ಶಾಸಕ ಟಿ.ಡಿ ರಾಜೇಗೌಡ
Last Updated 6 ಡಿಸೆಂಬರ್ 2022, 4:13 IST
ಅಕ್ಷರ ಗಾತ್ರ

ಕೊಪ್ಪ: ‘ಆಶ್ರಯ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳಿಂದ ಮಂಜೂರಾದ ಜಾಗದಲ್ಲಿ ಮರ ಕಡಿತಲೆ ಮಾಡಲು ಅರಣ್ಯ ಇಲಾಖೆ 11 ತಿಂಗಳುಗಳಿಂದ ಅನುಮತಿ ನೀಡದೆ, ಅಧಿಕಾರಿಗಳು ನಿಧಾನಗತಿ ತೋರುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯ ಸಂತೋಷ್ ಅರೆನೂರ್ ಅವರು ಮರ ಕಡಿತಲೆ ಬಗ್ಗೆ ಪ್ರಸ್ತಾಪಿಸಿದಾಗ ಶಾಸಕರು, ‘ಅರಣ್ಯ ಇಲಾಖೆಯ ಅಧಿಕಾರಿಗಳು ಭೂ ಮಂಜೂರಾತಿ ಕಡತಗಳಿಗೆ ಅಭಿಪ್ರಾಯ ನೀಡದೆ ಇದ್ದಲ್ಲಿ, ಜನರ ಭಾವನೆಗಳಿಗೆ ಸ್ಪಂದಿಸದಿದ್ದಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಮಾತನಾಡಿ, ‘ಸೆಕ್ಷನ್4 (1) ಅಧಿಸೂಚನೆ ಮರು ಪರಿಶೀಲನೆಯಾಗಬೇಕು. ನೂರಾರು ವರ್ಷಗಳಿಂದ ವಾಸವಿರುವ ಜಾಗವನ್ನು ಅರಣ್ಯ ಇಲಾಖೆ ಸೆಕ್ಷನ್ 4ರ ಅಡಿಯಲ್ಲಿ ಬರುತ್ತದೆ ಎಂದು ಹೇಳುತ್ತಿದೆ. ಇದುವರೆಗೂ ಆಗಿರುವ ಅಧಿಸೂಚನೆಯನ್ನು ಮರು ಪರಿಶೀಲನೆಗೆ ಒಳಪಡಿಸುವಂತೆ ನಿರ್ಣಯ ಕೈಗೊಂಡು ಮೇಲಧಿಕಾರಿಗಳಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

ಪಿ.ಸಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಲಕ್ಷ್ಮಿನಾರಾಯಣ (ಮುದ್ದಣ್ಣ) ಮಾತನಾಡಿ, ‘ಶೇ 60ರಷ್ಟು ಮಂದಿ ಪರಿಶಿಷ್ಟರಿಗೆ ಖಾತೆ ಬದಲಾವಣೆಯಾಗದೆ, ಈಗಲೂ ಅಜ್ಜ, ಮುತ್ತಜ್ಜನ ಹೆಸರಿನಲ್ಲಿ ಖಾತೆ ಇದೆ. ಅವರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದರು. ಇದಕ್ಕೆ ಉತ್ತರಿಸಿದ ಪ್ರಭಾರ ತಹಶೀಲ್ದಾರ್ ವಿಶ್ವನಾಥ್, ‘ಪ್ರತ್ಯೇಕವಾಗಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗುವುದು’ ಎಂದರು.

‘ಸರ್ಕಾರ ಡೀಮ್ಡ್ ಫಾರೆಸ್ಟ್ ವಾಪಸ್ ಪಡೆದಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಡೀಮ್ಡ್-2 ಹೆಸರಿನಲ್ಲಿ ಜಾಗ ಉಳಿಸಿಕೊಂಡಿದ್ದಾರೆ’ ಎಂದು ಎಸ್.ಎನ್.ರಾಮಸ್ವಾಮಿ ಹೇಳಿದರು. ಪ್ರತಿಕ್ರಿಯಿಸಿದ ವಲಯಾರಣ್ಯಾಧಿಕಾರಿ ಪ್ರವೀಣ್, ‘ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ನೀಡುವ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ. ಡೀಮ್ಡ್ ಫಾರೆಸ್ಟ್ ಪ್ರಕರಣ ನ್ಯಾಯಾಲಯದಲ್ಲಿ ಇದೆ’ ಎಂದರು.

‘ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಕಡೂರಿನಲ್ಲಿದ್ದಾರೆ. ಈ ಭಾಗದಿಂದ ಹೋಗಿರುವ ಒಂದೇ ಒಂದು ಅರ್ಜಿಯನ್ನೂ ಈವರೆಗೆ ಅವರು ಇತ್ಯರ್ಥಪಡಿಸಿಲ್ಲ’ ಎಂದು ರಾಮಸ್ವಾಮಿ ಹೇಳಿದರು. ಪ್ರತಿಕ್ರಿಯಿಸಿದ ರಾಜೇಗೌಡ, ‘ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ’ ಎಂದರು.

ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರದೀಪ್ ಮಾತನಾಡಿ, ‘ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣಿಸಿದ್ದು, 2 ದನಗಳು ಮೃತಪಟ್ಟಿವೆ. ಕಾಲು ಬಾಯಿ ಜ್ವರಕ್ಕೆ ಲಸಿಕೆ ನೀಡಲಾಗುತ್ತಿದ್ದು, ಜತೆಗೆ ಚರ್ಮಗಂಟು ರೋಗ ತಡೆಗಟ್ಟಲು ಲಸಿಕೆ ನೀಡಲಾಗುತ್ತಿದೆ’ ಎಂದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಮಾತನಾಡಿ, ‘ಸರ್ಕಾರಿ ಶಾಲೆ ಜಾಗ ಹದ್ದುಬಸ್ತು ಆಗಿಲ್ಲ. ಬಿಇಒ ಅವರಿಂದ ಕಂದಾಯ ಇಲಾಖೆಗೆ ಪಟ್ಟಿ ಹೋಗಿದೆ, ಅವರು ಕ್ರಮ ವಹಿಸುತ್ತಿಲ್ಲ. ನೌಕರರಿಗಾಗಿ ಇದ್ದ ಆಫೀಸರ್ಸ್ ಕ್ಲಬ್ ನಿರ್ವಹಣೆ ಇಲ್ಲದೆ ಸೊರಗುತ್ತಿದೆ’ ಎಂದರು.

ನಾಮ ನಿರ್ದೇಶಿತ ಸದಸ್ಯ ಮಣಿಕಂಠನ್ ಕಂದಸ್ವಾಮಿ, ‘ಆಶ್ರಯ ನಿವೇಶನ ಮಂಜೂರು ಮಾಡಿದ ಸಂದರ್ಭದಲ್ಲಿ ಈ ಹಿಂದೆ ನೀಡಿದ ಸಾಗುವಳಿ ಚೀಟಿ ಹಿಂಪಡೆಯಲಾಗಿತ್ತು. ಈವರೆಗೂ ಬಡವರಿಗೆ ಸಾಗುವಳಿ ಚೀಟಿ ವಾಪಸ್ ಕೊಟ್ಟಿಲ್ಲ’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಜಿ.ಆರ್.ಹರೀಶ್, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಉದಯಕುಮಾರ್, ಪದ್ಮಾವತಿ ರಮೇಶ್, ಎಂ.ಎಲ್.ವೆಂಕಟೇಶ್, ಪೂರ್ಣಚಂದ್ರ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ರಾಘವೇಂದ್ರ ಇದ್ದರು.

ಆಂಬುಲೆನ್ಸ್ ಸೇವೆ ಜನರಿಗೆ ಸರಿಯಾಗಿ ಸಿಗದ ಕುರಿತು ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರು, ಮೂಳೆ ತಜ್ಞರು ಇಲ್ಲದ ಬಗ್ಗೆ, ಜಲ ಜೀವನ್ ಮಿಷನ್(ಜೆಜೆಎಂ) ಅನುಷ್ಠಾನ ಸಮರ್ಪಕವಾಗಿಲ್ಲದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT