ಶನಿವಾರ, ಜನವರಿ 22, 2022
16 °C
ಬಯಲು ಸೀಮೆ ಭಾಗದಲ್ಲಿ ಧಾರಾಕಾರ ಮಳೆ– ನೆಲಕಚ್ಚಿದ ರಾಗಿ ಬೆಳೆ

ಭಾರಿ ಮಳೆ: ಬಡಾವಣೆ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ಪಟ್ಟಣ ಮತ್ತು ಸುತ್ತಮುತ್ತ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನವರೆಗೆ ಸುರಿದ ಧಾಕಾರಾರ ಮಳೆಯಿಂದಾಗಿ ಹಲವು ಕೆರೆಗಳು ತುಂಬಿ ಹರಿದಿವೆ. ಪಟ್ಟಣದ ಅಜ್ಜಂಪುರ ರಸ್ತೆಯ ರಹೀಂಸಾಬ್ ಬಡಾವಣೆ ಜಲಾವೃತಗೊಂಡರೆ, ಯಗಟಿ ರಸ್ತೆಯ ಬಾಳೆ ಮತ್ತು ತೆಂಗಿನ ತೋಟದಲ್ಲಿ ನೀರು ನಿಂತಿದೆ. ಸಮೀಪದ ಜಮೀನುಗಳಲ್ಲಿದ್ದ ರಾಗಿಬೆಳೆ ನೆಲಕಚ್ಚಿದೆ.

ಬೀರೂರು ಸಮೀಪದ ದೇವನಕೆರೆಯ ಸರಣಿ ಕೆರೆಗಳಾದ ಹನುಮಾಪುರ ಕೆರೆ, ಹೋರಿತಿಮ್ಮನಹಳ್ಳಿ ಕೆರೆ ಮತ್ತು ಗಾಳಿಹಳ್ಳಿ ಕೆರೆಗಳು ತುಂಬಿ ಹರಿದು ಗಾಳಿಹಳ್ಳಿ ಕೆರೆಯ ಕೋಡಿ ಮೂಲಕ ಅಜ್ಜಂಪುರ ರಸ್ತೆ ಸಮೀಪದ ಕರ್ಲಹಳ್ಳದಲ್ಲಿ ಹರಿದು ಬಂದಿದೆ. ಕರ್ಲಹಳ್ಳದ ಬದಿಯಲ್ಲಿದ್ದ ಮಾವಿನ ತೋಪು ಕೆಲ ವರ್ಷಗಳ ಹಿಂದೆ ಬಡಾವಣೆಯಾಗಿ ಪರಿವರ್ತಿತಗೊಂಡಿದ್ದು ಸಾಕಷ್ಟು ಮನೆಗಳು ನಿರ್ಮಾಣವಾಗಿವೆ. ಪಕ್ಕದಲ್ಲಿಯೇ ಯಗಟಿ ರಸ್ತೆ ಮೂಲಕ ಹಾದು ಬಂದಿರುವ ಹೆದ್ದಾರಿಯ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಎತ್ತರಕ್ಕೆ ಮಣ್ಣು ಹೊಡೆದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರ ತುದಿಯಲ್ಲಿಯೇ ನೀರು ಹರಿದು ಹೋಗುವ ಕಾಲುವೆ ಇದ್ದು, ಅಲ್ಲಿ ಸಣ್ಣ ಪೈಪ್ ಅಳವಡಿಸಿ ತೂಬು ಮಾಡಿದ ಪರಿಣಾಮ ನೀರು ಹೊರ ಹರಿವಿಗೆ ಅಡಚಣೆ ಆಗಿದೆ. ಅಲ್ಲದೆ, ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸಿಕ್ಕಸಿಕ್ಕಲ್ಲೆಲ್ಲ ನೀರು ನುಗ್ಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಡಾವಣೆ ಮಾಲೀಕ ಸಮೀವುಲ್ಲಾ, ‘ಹೆದ್ದಾರಿ ಕಾಮಗಾರಿಯವರು ಅವೈಜ್ಞಾನಿಕವಾಗಿ ಮಣ್ಣು ಏರಿಸಿದ ಪರಿಣಾಮ ನೀರು ಸರಾಗವಾಗಿ ಹರಿದು ಹೋಗಲು ಆಗಿಲ್ಲ. ನಾವು ಸಾಕಷ್ಟು ಬಾರಿ ಹೇಳಿದರೂ ಕಾಮಗಾರಿ ನಡೆಸುವವರು ಇತ್ತ ಗಮನ ಹರಿಸಲಿಲ್ಲ. ರಾತ್ರಿ ಸುರಿದ ಮಳೆಗೆ ಅವರ ಕಾರ್ಮಿಕರ ಶೆಡ್‍ಗಳೇ ಜಲಾವೃತಗೊಂಡು ಅಪಾಯದಲ್ಲಿದ್ದರೂ ಕೇಳುವವರಿಲ್ಲ. ಅಲ್ಲಿ ಕಾಲುವೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ. ಬಡಾವಣೆಯಲ್ಲಿ ಕೆಲವು ಮನೆಗಳು ತಗ್ಗು ಪ್ರದೇಶದಲ್ಲಿದ್ದು, ನಮ್ಮ ಮನೆಗೂ ಹಿಂಬದಿಯಿಂದ ನೀರು ನುಗ್ಗಿದೆ. ಅಡಿಕೆಗೆ ಬಣ್ಣ ಹಾಕಲು ಬಳಸುವ ಸಾಮಗ್ರಿಗೂ ಹಾನಿಯಾಗಿದೆ’ ಎಂದರು.

ಸ್ಥಳೀಯ ನಿವಾಸಿಗಳು ಮಾತನಾಡಿ, ‘ನೀರು ಹರಿದು ಬಂದ ರಭಸಕ್ಕೆ ಇಲ್ಲಿ ಸಂಗ್ರಹಿಸಲಾಗಿದ್ದ ಸಾಕಷ್ಟು ಮರಳು, ಗ್ರಾವೆಲ್ ಕೊಚ್ಚಿ ಹೋಗಿದೆ. ಬೈಪಾಸ್ ಕಾಮಗಾರಿಗೂ ಸಾಕಷ್ಟು ಹಾನಿಯಾಗಿದ್ದು, ಅಲ್ಲಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಬಡಾವಣೆ ನಿರ್ಮಾಣ ಸಮಯದಲ್ಲಿ ಮಾಲೀಕರು ಸೂಕ್ತ ಕ್ರಮ ವಹಿಸದ ಪರಿಣಾಮ ಜನರು ಪಡಿಪಾಟಲು ಅನುಭವಿಸುವಂತಾಗಿದೆ. ಸಾಕಷ್ಟು ಮನೆಗಳಲ್ಲಿ ಚಿಕ್ಕಮಕ್ಕಳಿದ್ದು ವಿದ್ಯುತ್ ಅವಘಡ, ಮನೆಕುಸಿತ ಏನಾದರೂ ಸಂಭವಿಸಿದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಮಳೆಯಿಂದಾಗಿ ಯಗಟಿ ರಸ್ತೆಯ ಜಮೀನುಗಳ ರಾಗಿ ಸಂಪೂರ್ಣ ನೆಲಕಚ್ಚಿದ್ದರೆ, ಸಮೀಪದ ತೆಂಗು ಮತ್ತು ಬಾಳೆಯ ತೋಟ ಜಲಾವೃತಗೊಂಡಿತ್ತು. ರಾತ್ರಿ ನೀರು ಹರಿದು ಬಂದ ಸಂದರ್ಭದಲ್ಲಿ ಕಾರ್ಮಿಕರ ಶೆಡ್‍ಗಳು ಜಲಾವೃತಗೊಂಡು ಅಲ್ಲಿದ್ದ ಹಲವರು ಬೆಳಗಿನವರೆಗೆ ರಸ್ತೆಯ ದಿಬ್ಬ ಏರಿ ಕುಳಿತು, ಹರಿವು ಕಡಿಮೆಯಾದ ಬಳಿಕ ಹೊರಗೆ ಬರುವಂತಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು