ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕಾಫಿನಾಡಿನಲ್ಲಿ ಆರೆಂಜ್‌ ಅಲರ್ಟ್

ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ l ಹಲವೆಡೆ ಮನೆಗಳಿಗೆ ಹಾನಿ l ಅಡಿಕೆಗೆ ಕೊಳೆರೋಗದ ಭೀತಿ
Last Updated 14 ಅಕ್ಟೋಬರ್ 2020, 4:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಲೆನಾಡು ಭಾಗದ ವಿವಿಧೆಡೆ ಮಂಗಳವಾರ ಸಾಧಾರಣ ಮಳೆಯಾಗಿದೆ.

ಸೋಮವಾರ ರಾತ್ರಿಯಿಂದಲೂ ಕೆಲವೆಡೆ ಮಳೆಯಾಗಿದೆ. ಗಿರಿಶ್ರೇಣಿ ಭಾಗದಲ್ಲಿ ಕೆಲವೆಡೆ ಮರಗಳ ಕೊಂಬೆ ಗಳು ಮುರಿದು ಬಿದ್ದಿವೆ. ಮೂರ್ನಾಲ್ಕು ದಿನಗಳಿಂದ ಅಲ್ಲಲ್ಲಿ ಮಳೆಯಾಗಿದೆ. ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಅರೇಬಿಕಾ ಕಾಫಿ ಗಿಡಗಳಲ್ಲಿ ಹಣ್ಣುಗಳು ಕೆಲವೆಡೆ ಉದುರಿವೆ.

‘ಮಳೆಯಿಂದಾಗಿ ನಮ್ಮ ತೋಟದಲ್ಲಿ ಶೇ 50 ಗಿಡಗಳಲ್ಲಿ ಹಣ್ಣುಗಳು ನೆಲಕಚ್ಚಿವೆ. ಈ ಬಾರಿ ಅರ್ಧ ಫಸಲು ಸಿಗುವುದು ಅನುಮಾನವಾಗಿದೆ’ ಎಂದು ಗಿರಿಶ್ರೇಣಿ ಭಾಗದ ಕಲ್ಲೇದೇವರಹಳ್ಳಿಯ ಬೆಳೆಗಾರ ಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯ ವಿವಿಧೆಡೆ ಗಳಲ್ಲಿ ಸುರಿದಿರುವ ಮಳೆ ಪ್ರಮಾಣ ಇಂತಿದೆ. ಕೊಟ್ಟಿಗೆಹಾರ 4.4, ಕಿಗ್ಗಾ– 4.2, ಬಾಳೆಹೊನ್ನೂರು– 4.2, ಬಸರೀಕಟ್ಟೆ– 3.8, ಜಯಪುರ– 3.6, ಸಂಗಮೇಶ್ವರ ಪೇಟೆ– 3.6, ಕಮ್ಮರಡಿ– 3.5, ಹೊಸ್ಕೆರೆ– 3.4, ಕಳಸ– 3.2, ಶೃಂಗೇರಿ–3.1, ಮೂಡಿಗೆರೆ– 2.7, ಅತ್ತಿಗುಂಡಿ– 2.6, ಕೊಪ್ಪ– 2.5 ಸೆಂ. ಮೀ ಮಳೆಯಾಗಿದೆ.

ಮನೆ ಕುಸಿತ

ಬಾಳೆಹೊನ್ನೂರು: ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದು ಹಾನಿ ಉಂಟಾಗಿದೆ.

‌ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಗೋಡಿನ ರತ್ನಮ್ಮ ನಾಗಪ್ಪಗೌಡ ಎಂಬುವವರ ಮನೆ ಕುಸಿದು ಬಿದ್ದಿದೆ.

ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ, ತಹಶೀಲ್ದಾರ್ ಮಲ್ಲೇಶಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಉದಯ್ ಮತ್ತಿತರರು ಬೇಟಿ ನೀಡಿ ಹಾನಿ ಪರಿಶೀಲಿಸಿದರು.

ಹಾನಿಗೊಂಡ ಮನೆಗೆ ಅತಿವೃಷ್ಟಿ ಅಡಿಯಲ್ಲಿ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಅವರಿಗೆ ಶಾಸಕ ಟಿ.ಡಿ.ರಾಜೇಗೌಡ ಸೂಚಿಸಿದರು.

ಬಿರುಸು ಮಳೆ

ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿ ನಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಸೋಮವಾರ ಸಂಜೆ ಹೊತ್ತಿಗೆ ಪ್ರಾರಂಭಗೊಂಡ ಮಳೆ ರಾತ್ರಿ ವೇಳೆ ತಾಲ್ಲೂಕಿನ ಹಲವೆಡೆ ಜೋರಾಗಿ ಸುರಿದಿತ್ತು. ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಜಿಟಿ ಜಿಟಿಯಾಗಿ ಪ್ರಾರಂಭ ಗೊಂಡ ಮಳೆ ನಂತರ ಬಿರುಸಾಗಿ ಸುರಿದಿತ್ತು. ಮಧ್ಯಾಹ್ನದ ಬಳಿಕ ಕೊಂಚ ಬಿಡುವು ನೀಡಿತ್ತು.

ನೀರಿನ ಮಟ್ಟ ಏರಿಕೆ

ಶೃಂಗೇರಿ: ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಸಾಧಾರಣವಾಗಿ ಮಳೆ ಸುರಿಯುತ್ತಿದೆ.

ಹಳ್ಳ, ಭತ್ತದಗದ್ದೆ, ತೋಟಗಳು ನೀರಿನಿಂದ ಆವೃತ್ತಗೊಂಡಿದೆ. ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.

ಅಡಿಕೆ ಕೊಯ್ಲು ಪ್ರಾರಂಭ ಮಾಡಿದ ಅಡಿಕೆ ಬೆಳೆಗಾರರು ಸಂಸ್ಕರಣೆ ಮಾಡಿದ ಅಡಿಕೆಯನ್ನು ಒಣಗಿಸಲಾರದೆ ಕಂಗಾಲಾಗಿದ್ದಾರೆ.
ಕೆಲವು ತೋಟಗಳಲ್ಲಿ ಅಡಿಕೆ ಹಣ್ಣಾಗಿ ಉದುರಲು ಪ್ರಾರಂಭವಾಗಿದೆ. ಅಲ್ಲಲ್ಲಿ ಕೆಲವು ಅಡಿಕೆ ಬೆಳೆಗಾರರು ಅಡಿಕೆ ಗೊನೆ ತೆಗೆದಿದ್ದು, ಬೇಯಿಸಿದ ಅಡಿಕೆಯನ್ನು ಒಣಗಿಸಲಾಗದೆ ಅಡಿಕೆಗೆ ಬೂಸ್ಟ್ ಬಂದಿದೆ. ಸುಲಿದ ಅಡಕೆಯು ಸಹ ಹಾಳಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಅಡಿಕೆ ಬೆಳೆಗಾರರು ಡ್ರೈಯರ್, ಹೊಗೆ ತಟ್ಟಿಯ ಮೂಲಕ ಅಡಿಕೆಯನ್ನು ಒಣಗಿಸುತ್ತಿದ್ದಾರೆ.

ಮಳೆಯಿಂದ ತೋಟಗಳಲ್ಲಿ ಅಡಿಕೆಗೆ ಕೊಳೆರೋಗ ಕಾಳು ಮೆಣಸಿಗೆ ಸೊರಗು ರೋಗ ಬರುವ ಸಾಧ್ಯತೆ ಇದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಸಾಧಾರಣ ಮಳೆ

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಸಂಜೆ 7.45ರಿಂದ ಸಾಧಾರಣ ಮಳೆ ಸುರಿಯಿತು. ರಾತ್ರಿ 8ರ ವೇಳೆಗೂ ಮಳೆ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT