ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವಿರುದ್ಧ ಆಕ್ರೋಶ: ಮತ್ತೆ ಕೈಗೆ ರಾಖಿ

ಪಾಪೆಮಜಲು ಶಾಲೆ: ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿದ ವಿಚಾರ, ಗೊಂದಲಕ್ಕೆ ತೆರೆ
Last Updated 20 ಸೆಪ್ಟೆಂಬರ್ 2022, 2:13 IST
ಅಕ್ಷರ ಗಾತ್ರ

ಪುತ್ತೂರು: ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಯನ್ನು ಶಿಕ್ಷಕರು ತೆಗೆಸಿದ್ದಾರೆ ಎಂದು ಆರೋಪಿಸಿ ಮಕ್ಕಳ ಪೋಷಕರು ಮತ್ತು ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಶಾಲೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ ಹಾಗೂ ಮಕ್ಕಳ ಕೈಗೆ ಮತ್ತೆ ರಾಖಿ ಕಟ್ಟಿಸಿದ ಘಟನೆ ಪುತ್ತೂರು ತಾಲ್ಲೂಕಿನ ಪಾಪೆಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ರಕ್ಷಾ ಬಂಧನ ಪ್ರಯುಕ್ತ ಮಕ್ಕಳ ಕೈಗೆ ಕಟ್ಟಲಾಗಿದ್ದ ರಾಖಿಯನ್ನು ಶಿಕ್ಷಕರು ತೆಗೆಸಿದ್ದಾರೆ ಎಂಬುದನ್ನು ತಿಳಿದ ಕೆಲವು ಪೋಷಕರು ಶಾಲೆಗೆ ತೆರಳಿ ಶಿಕ್ಷಕರನ್ನು ಪ್ರಶ್ನಿಸಿದ್ದಾರೆ.

‘ಮಕ್ಕಳ ಕೈಯಲ್ಲಿದ್ದ ರಾಖಿ ಕಪ್ಪಾಗಿತ್ತು. ಹೀಗಾಗಿ, ನಾವು ಮಕ್ಕಳಲ್ಲಿ, ರಕ್ಷೆ ಕಟ್ಟಿ ತುಂಬಾ ದಿನವಾಯಿತಲ್ಲ, ಕಪ್ಪಾಗಿ ಗಲೀಜು ಆಗಿದ್ದು, ಕೈ ಒದ್ದೆಯಾಗುವಾಗ, ಊಟ ಮಾಡುವಾಗ ಸಮಸ್ಯೆ ಆಗುತ್ತದೆ. ಇದನ್ನು ಇನ್ನು ತೆಗೆಯಬಹುದಲ್ಲ ಎಂದು ತಿಳಿಸಿದ್ದೆವು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ರೀತಿ ಹೇಳಿದ್ದೇವೆಯೇ ಹೊರತು ಬೇರಾವ ಉದ್ದೇಶದಿಂದ ಅಲ್ಲ. ಯಾವ ಮಕ್ಕಳಿಗೂ ಬೈದಿಲ್ಲ, ಬೇರೇನೂ ಮಾಡಿಲ್ಲ’ ಎಂದು ಮುಖ್ಯಶಿಕ್ಷಕಿ ತೆರೇಜ್ ಎಂ. ಸಿಕ್ವೇರಾ ಸ್ಪಷ್ಟಪಡಿಸಿದರು.

‘ನಮ್ಮ ಶಿಕ್ಷಕರು ಬೈತಾರೆ. ಹಾಗಾಗಿ, ನಾವು ರಾಖಿ ತೆಗೆದಿದ್ದೇವೆ ಎಂದು ಮಕ್ಕಳು ನಮ್ಮಲ್ಲಿ ಹೇಳಿಕೊಂಡಿದ್ದಾರೆ. ನಾವು ಕೋಮು ಭಾವನೆಯಿಂದ ಮಕ್ಕಳ ಕೈಗೆ ರಕ್ಷಾ ಬಂಧನ ಕಟ್ಟಿದ್ದಲ್ಲ. ರಕ್ಷ ಬಂಧನಕ್ಕೆ ತನ್ನದೇ ಆದ ಮಹತ್ವವಿದೆ. ಇಲ್ಲಿ ರಾಖಿ ತೆಗೆಸಿರುವುದು ಬೇಸರ ತಂದಿದೆ’ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಮತ್ತೆ ಮಕ್ಕಳ ಕೈಗೆ ರಾಖಿ ಕಟ್ಟಬೇಕು ಎಂದು ಆಗ್ರಹಿಸಿ ತಾವು ತಂದಿದ್ದ ರಾಖಿಯನ್ನು ಶಿಕ್ಷಕಿಯ ಕೈಗೆ ನೀಡಿದರು.

‘ನಾವು ನಿಮ್ಮಿಂದ ರಾಖಿ ತೆಗೆದುಕೊಂಡು ಎಲ್ಲ ಮಕ್ಕಳಿಗೆ ಕಟ್ಟುತ್ತೇವೆ, ನೀವೂ ಬನ್ನಿ’ ಎಂದು ಮುಖ್ಯಶಿಕ್ಷಕರು ತಿಳಿಸಿದರು. ಆ ವೇಳೆ ಪೋಷಕರು, ‘ನಾವು ತರಗತಿಯೊಳಗೆ ಬರುವುದಿಲ್ಲ, ನೀವೇ ಮಕ್ಕಳ ಕೈಗೆ ರಾಖಿ ಕಟ್ಟಿ’ ಎಂದು ತಿಳಿಸಿದರು.

‘ಗೊತ್ತಿಲ್ಲದೆ ಆದ ತಪ್ಪು ಎಂದು ಶಿಕ್ಷಕರು ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಮುಕ್ತಾಯಗೊಳಿಸಿದ್ದೇವೆ’ ಎಂದು ರಾಜೇಶ್ ಪೆರಿಗೇರಿ ಅವರು ತಿಳಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. ‌

ನಾರಾಯಣ ಚಾಕೋಟೆ, ಅಪ್ಪಯ್ಯ ನಾಯ್ಕ್, ಬಾಲಕೃಷ್ಣ ಕಾವು, ಹರೀಶ್ ಪಾದಲಡಿ, ರಮೇಶ್ ನಿಧಿಮುಂಡ, ವಿಶಾಖ್ ರೈ ಸಸಿಹಿತ್ಲು ಇದ್ದರು.

ಕ್ಷಮೆಯಾಚನೆ

‘ಗೊತ್ತಿಲ್ಲದೆ ಈ ಘಟನೆ ನಡೆದಿದೆ. ನಾವು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಲ್ಲ. ಎಲ್ಲ ನೌಕರರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ಇಂತಹ ಘಟನೆಗಳು ಶಾಲೆಯಲ್ಲಿ ನಡೆಯದಂತೆ ನೋಡಿಕೊಳ್ಳುತ್ತೇವೆ. ಈ ಘಟನೆಯನ್ನು ಇಲ್ಲಿಗೇ ಇತ್ಯರ್ಥಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ’ ಎಂದು ಶಾಲೆಯ ಎಲ್ಲಾ ಶಿಕ್ಷಕರ ಸಮ್ಮುಖದಲ್ಲಿ ತೆರೇಜ್ ಎಂ.ಸಿಕ್ವೇರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT