ಸೋಮವಾರ, ಮಾರ್ಚ್ 1, 2021
28 °C

ನರಸಿಂಹರಾಜಪುರ: ಬಿಪಿಎಲ್ ಪಡಿತರದಾರರ ಪರದಾಟ, ಪೂರೈಕೆಯಾಗದ ಸೀಮೆಎಣ್ಣೆ

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಪಡಿತರದಾರರಿಗೆ ವಿತರಿಸಲು ಜನವರಿ ತಿಂಗಳಲ್ಲಿ ಸೀಮೆಎಣ್ಣೆ ಪೂರೈಕೆ ಯಾಗದಿರುವುದರಿಂದ ಪಡಿತರ ಚೀಟಿದಾರರು ಸೀಮೆಎಣ್ಣೆ ಭಾಗ್ಯದಿಂದ ವಂಚಿತವಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಿಪಿಎಲ್ ಪಡಿತದಾರರಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿದ ವರಿಗೆ 1ಲೀಟರ್, ಸಂಪರ್ಕ ಹೊಂದಿಲ್ಲದಿರು ವರಿಗೆ 3 ಲೀಟರ್ ಸೀಮೆಎಣ್ಣೆಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ. ಪ್ರತಿ ತಿಂಗಳ 28 ರೊಳಗೆ ಫಲಾನುಭವಿಗಳಿಗೆ ವಿತರಿಸಲು ನ್ಯಾಯಬೆಲೆ ಅಂಗಡಿಗೆ ಸೀಮೆಎಣ್ಣೆ ಪೂರೈಕೆಯಾಗುತ್ತಿತ್ತು. ಡಿಸೆಂಬರ್ ತಿಂಗಳಲ್ಲಿ ಪೂರೈಕೆಯಾಗಿತ್ತು. ನಂತರ ಪೂರೈಕೆಯಾಗಿಲ್ಲ.

ನ್ಯಾಯಬೆಲೆ ಅಂಗಡಿಯವರು ಸೀಮೆಎಣ್ಣೆ ವಿತರಿಸದಿದ್ದರೂ, ಸಾಫ್ಟ್‌ವೇರ್‌ನಲ್ಲಿ ಪಡಿತದಾರರ ಹೆಸರಿನಲ್ಲಿ ಸೀಮೆಎಣ್ಣೆ ವಿತರಿಸಲಾಗಿದೆ ಎಂದು ನಮೂದಾಗುತ್ತಿದೆ. ಇದು ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಪಡಿತರದಾರರಿಬ್ಬರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಸೀಮೆಎಣ್ಣೆ ಪೂರೈಕೆ ಮಾಡದಿರುವುದರಿಂದ ಇದನ್ನು ಸಾಫ್ಟ್‌ವೇರ್‌ನಿಂದ ತೆಗೆದರೆ ಅನುಕೂಲ ವಾಗುತ್ತದೆ ಎಂಬುದು ನ್ಯಾಯಬೆಲೆ ಅಂಗಡಿಯವರ ವಾದ. ಅಲ್ಲದೆ, ಸೀಮೆಎಣ್ಣೆ ಬೇಕಾದ ಪಡಿತರದಾರರು ಬೆರಳಚ್ಚು ನೀಡಿ ಸೀಮೆಎಣ್ಣೆ ಬೇಕಾಗಿದೆ ಎಂದು ನೋಂದಣಿ ಮಾಡಿಕೊಂಡರೆ ಮಾತ್ರ ಇದನ್ನು ವಿತರಿಸುವ ವ್ಯವಸ್ಥೆಯನ್ನು ಪ್ರಸ್ತುತ ಜಾರಿಗೆ ತರಲಾಗಿದೆ.

‘ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಸಿಂಸೆ, ಬಾಳೆಕೊಪ್ಪ, ಹಿಳುವಳ್ಳಿ ನ್ಯಾಯಬೆಲೆ ಅಂಗಡಿಗಳಲ್ಲಿ ಒಟ್ಟು 1,387 ಪಡಿತರ ಚೀಟಿಗಳಿವೆ. ಡಿಸೆಂಬರ್‌ನಲ್ಲಿ ಒಟ್ಟು 1,021 ಲೀಟರ್ ಸೀಮೆಎಣ್ಣೆ ಪೂರೈಕೆಯಾಗಿತ್ತು. ಜನವರಿ ತಿಂಗಳಲ್ಲಿ ಸೀಮೆಎಣ್ಣೆ ಪೂರೈಕೆಯಾಗಿಲ್ಲ. ಹಾಗಾಗಿ ಪಡಿತರದಾರರಿಗೆ ವಿತರಿಸಿಲ್ಲ’ ಎಂದು ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಶ್ರೀಕಾಂತ್  ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಯು ಆಹಾರ ನಿರೀಕ್ಷಕ ಶ್ರೀಕಾಂತ್ ಅವರನ್ನು ಸಂಪರ್ಕಿಸಿದಾಗ, ‘ಜಿಲ್ಲೆಯಲ್ಲಿ ಸೀಮೆಎಣ್ಣೆ ಸರಬರಾಜು ಮಾಡುವ 7 ರಿಂದ 8 ಏಜೆನ್ಸಿಯವರು ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಒಂದು ಏಜೆನ್ಸಿಯವರು ಮಾತ್ರ ಸೀಮೆಎಣ್ಣೆ ಸರಬರಾಜು ಮಾಡುತ್ತಿರುವುದರಿಂದ ಅವರಿಗೆ ಒಂದೊಂದು ತಾಲ್ಲೂಕಿಗೆ ಸರಬರಾಜು ಮಾಡಲು ಕನಿಷ್ಠ 2ರಿಂದ 3 ದಿನ ತಗಲುತ್ತಿದೆ. ಹಾಗಾಗಿ ಸೀಮೆಎಣ್ಣೆ ಪೂರೈಕೆಯಾಗಿಲ್ಲ. ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು