ದಲ್ಲಾಳಿ ಹಾವಳಿ; ವಸೂಲಿಗೆ ಬಿದ್ದಿಲ್ಲ ಕಡಿವಾಣ

ಚಿಕ್ಕಮಗಳೂರು: ಜಿಲ್ಲೆಯ ಎರಡು ಕಡೆ ಪ್ರಾದೇಶಿಕ ಸಾರಿಗೆ ಕಚೇರಿಗಳು ಇವೆ. ಮಧ್ಯವರ್ತಿಗಳ ಹಾವಳಿ, ವಿಳಂಬ, ಸಿಬ್ಬಂದಿ ಕೊರತೆ, ‘ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್’ ಇಲ್ಲದಿರುವುದು, ಅಂತರ್ಜಾಲ ಸಮಸ್ಯೆಗಳಿಂದಾಗಿ ಜನರಿಗೆ ಪಡಿಪಾಟಲು ತಪ್ಪಿಲ್ಲ.
ಚಿಕ್ಕಮಗಳೂರು (ಕೆಎ–18) ಹಾಗೂ ತರೀಕೆರೆಯಲ್ಲಿ (ಕೆಎ– 66) ಪ್ರಾದೇಶಿಕ ಸಾರಿಗೆ ಕಚೇರಿಗಳು ಇವೆ. ಈ ಪೈಕಿ ಚಿಕ್ಕಮಗಳೂರು ಪ್ರಾದೇಶಿಕ ಕಚೇರಿಯು ವ್ಯಾಪ್ತಿ ಹೆಚ್ಚು ಇದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲ್ಲೂಕುಗಳ ಈ ಕಚೇರಿ ವ್ಯಾಪ್ತಿಗೆ ಒಳಪಡುತ್ತವೆ. ತರೀಕೆರೆ, ಕಡೂರು, ಅಜ್ಜಂಪುರ ತಾಲ್ಲೂಕುಗಳು ತರೀಕೆರೆ ಕಚೇರಿ ವ್ಯಾಪ್ತಿಗೆ ಒಳಪಡುತ್ತವೆ.
ಚಾಲನಾ ಪರವಾನಿಗೆ, ವಾಹನ ನೋಂದಣಿ, ವಾಹನ ಮಾಲೀಕತ್ವ ವರ್ಗಾವಣೆ, ನಿರ್ವಾಹಕ ಪರವಾನಗಿ, ಅಂತಾರಾಷ್ಟ್ರೀಯ ಪರವಾನಗಿ, ಚಾಲಕರಿಗೆ ಪಿಎಸ್ವಿ ಬ್ಯಾಡ್ಜ್, ಚಾಲನಾ ಪರವಾನಗಿ ನವೀಕರಣ, ಕ್ಷಮತೆ ಪತ್ರ ಸಹಿತ 33 ಸೇವೆಗಳು ಈ ಕಚೇರಿಗಳಲ್ಲಿ ಲಭ್ಯ ಇವೆ. ಚಿಕ್ಕಮಗಳೂರು ಕಚೇರಿ ವ್ಯಾಪ್ತಿಯಲ್ಲಿ ಚಾಲನಾ ಪರವಾನಗಿ, ವಾಹನ ನೋಂದಣಿ ಸಹಿತ ವಿವಿಧ ಸೇವೆಗಳಿಗೆ ವಾರ್ಷಿಕ 25 ಸಾವಿರಕ್ಕೂ ಹೆಚ್ಚು, ತರೀಕೆರೆ ಕಚೇರಿಯಲ್ಲಿ 16ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ, ವಿಲೇವಾರಿ ನಡೆಯುತ್ತದೆ.
ವಾಹನ ನೋಂದಣಿಗೆ ‘ವಾಹನ್’, ಚಾಲನಾ ಪರವಾನಿಗೆಗೆ (ಡಿಎಲ್) ‘ಸಾರಥಿ’ ತಂತ್ರಾಂಶ ಪರಿಚಯಿಸಲಾಗಿದೆ. ಬಹುತೇಕ ಎಲ್ಲ ಪ್ರಕ್ರಿಯೆಗಳು ಆನ್ಲೈನ್ನಲ್ಲೇ ನಡೆಯುತ್ತವೆ. ಆದರೂ, ಸಮಸ್ಯೆಗಳು ತಪ್ಪಿಲ್ಲ. ಬ್ರೋಕರ್ಗಳ ವಸೂಲಿ ದಂಧೆಗೆ ಕಡಿವಾಣ ಬಿದ್ದಿಲ್ಲ.
ವಿಳಂಬ ನೀತಿ: ಆರ್ಸಿ, ಡಿಎಲ್ ಮೊದಲಾದವುಗಳ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಸ್ಮಾರ್ಟ್ ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ ಎಂಬ ದೂರುಗಳು ಇವೆ.
ಈ ಕಾರ್ಡ್ ವಿತರಣೆ ವಿಭಾಗದ ಬಳಿ ನಿಂತಿರುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಕಾದರೂ ಕಾರ್ಡ್ ಸಿಗಲ್ಲ.
ಪ್ರಕ್ರಿಯೆ ಮುಗಿದು ತಿಂಗಳುಗಳಾದರೂ ಕಾರ್ಡ್ಗಳು ಸಿಕ್ಕಿಲ್ಲ. ಸಂಬಂಧಪಟ್ಟವರನ್ನು ವಿಚಾರಿಸಿದರೆ ತಾಂತ್ರಿಕ ದೋಷ, ಯಂತ್ರ ಸಮಸ್ಯೆ ಸಬೂಬು ನೀಡುತ್ತಾರೆ. ಸಮಸ್ಯೆ ಪರಿಹರಿಸಲು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.
ಮಧ್ಯವರ್ತಿಗಳ ಹಾವಳಿ: ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಕಚೇರಿಯ ಅಸುಪಾಸಿನಲ್ಲಿ ಮಧ್ಯವರ್ತಿಗಳು ಇರುತ್ತಾರೆ.
‘ಮಧ್ಯವರ್ತಿಗಳ ನೆರವು ಇಲ್ಲದೇ ಕಚೇರಿಯಲ್ಲಿ ಜನರು ಸೇವೆ ಪಡೆಯುವ ಕಷ್ಟ. ಮಧ್ಯವರ್ತಿಗಳಿಗೆ ಅರ್ಜಿ, ದಾಖಲೆ, ಹಣ ಕೊಟ್ಟರೆ ಕೆಲಸ ಸಲೀಸಾಗಿ ಆಗುತ್ತದೆ. ಜನರೇ ನೇರವಾಗಿ ಹೋದರೆ ಅಲೆದು ಸುಸ್ತಾಗುವುದು ಗ್ಯಾರಂಟಿ. ಮಧ್ಯವರ್ತಿಗಳು ಕೆಲಸಕ್ಕೆ ‘ಕೋಡ್’ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರವರ ಫೈಲಿನ ತುದಿಯಲ್ಲಿ ಒಂದು ಕಡೆ ಆ ‘ಕೋಡ್’ ಬರೆದಿರುತ್ತಾರೆ. ಸಂಬಂಧಪಟ್ಟವರಿಗೂ ಹಣದಲ್ಲಿ ಪಾಲು ತಲುಪಿಸುತ್ತಾರೆ. ದಂಧೆ ಅವ್ಯಾಹತವಾಗಿ ನಡೆಯುತ್ತಿದೆ’ ಎಂದು ನಗರದ ಲಾರಿ ಚಾಲಕ ಎಸ್.ಬಿ.ರಮೇಶ್ ಹೇಳುತ್ತಾರೆ.
ಸಿಬ್ಬಂದಿ ಕೊರತೆ: ಚಿಕ್ಕಮಗಳೂರು ಕಚೇರಿಯಲ್ಲಿ 43 ಮಂಜೂರು ಹುದ್ದೆಗಳ ಪೈಕಿ 25 ಹುದ್ದಗಳು ಖಾಲಿ ಇವೆ. ತರೀಕೆರೆ ಕಚೇರಿಯಲ್ಲಿ 22 ಮಂಜೂರು ಹುದ್ದೆಗಳ ಪೈಕಿ 16 ಖಾಲಿ ಇವೆ.
ಕೆಲ ವಿಭಾಗಗಳ ಸಿಬ್ಬಂದಿ ರಜೆ ಮೇಲೆ ತೆರಳಿದ್ದರೆ ನಿರ್ವಹಣೆಗೆ ಮತ್ತೊಬ್ಬರ ಇಲ್ಲದ ಸ್ಥಿತಿ ಇದೆ. ಒಬ್ಬರೇ ಎರಡ್ಮೂರು ವಿಭಾಗಳನ್ನು ನಿರ್ವಹಿಸುತ್ತಿರುವ ಸ್ಥಿತಿಯೂ ಇದೆ.
ಎರಡೂ (ಚಿಕ್ಕಮಗಳೂರು, ತರೀಕೆರೆ) ಕಡೆಯಿಂದ 10 ಮೋಟಾರು ನಿರೀಕ್ಷಕ ಹುದ್ದೆಗಳು ಮಂಜೂರಾಗಿವೆ. ಆದರೆ, ಇರುವುದು ಒಬ್ಬರೇ. ವಾಹನಗಳ ತಪಾಸಣೆ, ದಾಖಲೆ ಪರಿಶೀಲನೆ ಮೊದಲಾದ ಪ್ರಕ್ರಿಯೆಗಳ ಸಮರ್ಪಕವಾಗಿ ನಡೆಯುತ್ತಿಲ್ಲ. ಸಿಬ್ಬಂದಿ ಕೊರತೆ ಕೆಲಸಗಳ ವಿಳಂಬಕ್ಕೆ ಎಡೆಮಾಡಿದೆ.
‘ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್’ ಇಲ್ಲ: ಅರ್ಜಿದಾರರ ಚಾಲನಾ ಪರೀಕ್ಷೆಗೆ ‘ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್’ ಇಲ್ಲ. ಚಿಕ್ಕಮಗಳೂರಿನಲ್ಲಿ ಅಗ್ನಿಶಾಮಕ ಕಚೇರಿ ಸನಿಹದ ಖಾಲಿ ಜಾಗದಲ್ಲಿ ಚಾಲನಾ ಪರೀಕ್ಷೆ ನಡೆಯುತ್ತದೆ.
ಚಿಕ್ಕಮಗಳೂರಿನ ಆರ್ಟಿಒ ಕಚೇರಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಪಕ್ಕಕ್ಕೆ ಸ್ಥಳಾಂತರವಾಗಿ 14 ವರ್ಷಗಳಾಗಿವೆ. ಪ್ರಾದೇಶಿಕ ಸಾರಿಗೆ ಕಚೇರಿ ಸುಸಜ್ಜಿತ ಕಟ್ಟಡ ಇದೆ. ಈವರೆಗೆ ಟ್ರ್ಯಾಕ್ ನಿಟ್ಟಿನಲ್ಲಿ ಜಾಗ ಒದಗಿಸಿಲ್ಲ.
ಟ್ರ್ಯಾಕ್ ನಿರ್ಮಾಣ ಮಾಡಿದರೆ ಚಾಲನಾ ಪರೀಕ್ಷೆಗೆ ಅನುಕೂಲವಾಗುತ್ತದೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಅಂತರ್ಜಾಲ ಸಮಸ್ಯೆ: ಕಚೇರಿಯಲ್ಲಿ ಆಗಾಗ್ಗೆ ಅಂತರ್ಜಾಲ ಕೈಕೊಡುವುದು ಸಮಸ್ಯೆಯಾಗಿದೆ. ಅಂತರ್ಜಾಲ ಸಮಸ್ಯೆಯಾದರೆ ಕಚೇರಿಯಲ್ಲಿ ಯಾವುದೇ ಕೆಲಸಗಳು ನಡೆಯಲ್ಲ.
ಅರ್ಜಿ, ದಾಖಲೆ, ಫೋಟೊ ಅಪ್ಲೋಡ್ ಎಲ್ಲ ಪ್ರಕ್ರಿಯೆಗಳು ಸ್ಥಗಿತವಾಗುತ್ತವೆ. ಕೆಲವೊಮ್ಮೆ ಸಂಜೆಯಾದರೂ ಸಮಸ್ಯೆ ಪರಿಹಾರವಾಗಲ್ಲ. ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಕಡೆಗಳಿಂದ ಬಂದವರ ಪಾಡು ಹೇಳತೀರುದು. ಜನರು ಮತ್ತೊಂದು ದಿನ ಬರಬೇಕಾಗುತ್ತದೆ.
‘ಅಂತರ್ಜಾಲ ಸಮಸ್ಯೆಯಾಗಿತ್ತು. ಒಂದು ದಿನಪೂರ್ತಿ ಕಾದರೂ ಸರಿಯಾಗಲಿಲ್ಲ. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸ್ ಹೋದೆವು. ಮತ್ತೊಂದು ದಿನ ಬಂದು ಕೆಲಸ ಮಾಡಿಸಿಕೊಂಡೆವು’ ಎಂದು ಶೃಂಗೇರಿಯ ನಿವಾಸಿ ಎಸ್.ಟಿ.ಸರಸ್ವತಿ ಸಂಕಷ್ಟ ತೋಡಿಕೊಂಡರು.
‘ನಗರದಲ್ಲಿ ಒಳಚರಂಡಿ ಪೈಪ್ ಅಳವಡಿಕೆ, ಅಮೃತ್ ಯೋಜನೆ ಪೈಪ್ ಅಳವಡಿಕೆ, ರಸ್ತೆ ವಿಸ್ತರಣೆ ಸಹಿತ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ಸಂದರ್ಭದಲ್ಲಿ ಎಫ್ಟಿಟಿಎಚ್ ಕೇಬಲ್ಗೆ ಹಾನಿಯಾದರೆ ಇಂಟರ್ನೆಟ್ ಸಮಸ್ಯೆಯಾಗುತ್ತದೆ. ಈ ವಿಷಯವನ್ನು ಸಂಬಂಧವಪಟ್ಟವರ ಗಮನಕ್ಕೂ ತಂದ್ದಿದ್ದೇವೆ’ ಎಂದು ಆರ್ಟಿಒ ಅಧಿಕಾರಿ ಸಂತೋಷ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲಸೌಕರ್ಯ ಕೊರತೆ: ತರೀಕೆರೆ ಕಚೇರಿಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಯೂ ಇಲ್ಲ. ಶೌಚಾಲಯ, ವಿಭಾಗಗಳ ವ್ಯವಸ್ಥೆ ಸರಿ ಇಲ್ಲ. ವಾಹನ ನಿಲುಗಡೆ, ಚಾಲನೆ ಪರೀಕ್ಷೆ ಯಾವುದಕ್ಕೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
‘ದಲ್ಲಾಳಿ ಹಾವಳಿಗೆ ಕಡಿವಾಣ’: ಈಗ ಎಲ್ಲ ಪ್ರಕ್ರಿಯೆಗಳ ಆನ್ಲೈನ್ ಆಗಿವೆ. ಸಾರ್ವಜನಿಕರು ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬಹುದು. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿದ್ದೇವೆ. ದೂರುಗಳಿದ್ದರೆ ನಿಗಾ ವಹಿಸುತ್ತೇವೆ ಎಂದು ಚಿಕ್ಕಮಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳ್ಕರ್ ತಿಳಿಸಿದರು.
ವಾಹನ ನೋಂದಣಿ, ಚಾಲನಾ ಪರವಾನಗಿ ಸ್ಮಾರ್ಟ್ ಕಾರ್ಡ್ ಮುದ್ರಣ ನಿಟ್ಟಿನಲ್ಲಿ ಹೊಸ ಯಂತ್ರ ಅಳವಡಿಸಲಾಗಿದೆ. ಇನ್ನು ಮುಂದೆ ತ್ವರಿತವಾಗಿ ಕಾರ್ಡ್ ವಿತರಣೆ ಮಾಡಲಾಗುವುದು ಎಂದರು.
ಎಫ್ಇಎಫ್ಒ: ‘ಮೊದಲು ಬಂದವರಿಗೆ ಮೊದಲ ಆದ್ಯತೆ’ (ಫಸ್ಟ್ ಇನ್ ಫಸ್ಟ್ ಔಟ್–ಎಫ್ಐಎಫ್ಒ) ವ್ಯವಸ್ಥೆಯನ್ನು ಜಾರಿಗೊಳಿಸಲು ಶೀಘ್ರದಲ್ಲಿ ಕಾರ್ಯಗತಗೊಳಿಸುತ್ತೇವೆ. ಕಾಯುವುದು ತಪ್ಪುತ್ತದೆ ಎಂದು ಅವರು ಹೇಳಿದರು.
‘ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ನಿಟ್ಟಿನಲ್ಲಿ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಕಚೇರಿ ಆಸುಪಾಸಿನಲ್ಲೇ ಗುರುತಿಸಿ ಕೊಟ್ಟರೆ ಒಳ್ಳೆಯದು. ಸುಸಜ್ಜಿತ ಟ್ರ್ಯಾಕ್ ನಿರ್ಮಾಣಕ್ಕೆ ಸುಮಾರು 10 ಎಕರೆ ಜಾಗ ಬೇಕು. ತಹಶೀಲ್ದಾರ್ ಅವರಿಗೆ ಜಾಗ ಗುರುತಿಸಿಕೊಡಬೇಕು’ ಎಂದರು.
ತರೀಕೆರೆ ಆರ್ಟಿಒ ಕಚೇರಿಗೆ ಸ್ವಂತ ಕಟ್ಟಡ ಇಲ್ಲ: ತರೀಕೆರೆಯಲ್ಲಿ 2016 ರಲ್ಲಿ ಆರ್ಟಿಒ ಕಚೇರಿ ಆರಂಭವಾಯಿತು. ಸಮಸ್ಯೆಗಳು ತಾಂಡವವಾಡುತ್ತಿವೆ. ಸರ್ಕಾರಕ್ಕೆ ಹೆಚ್ಚು ಆದಾಯ ತರುವ ಮೂಲದ ಈ ಕಚೇರಿಗೆ ಸ್ವಂತ ಕಟ್ಟಡವೂ ಇಲ್ಲ. ಆರಂಭದಿಂದಲೂ ಬಾಡಿಗೆ ಕಟ್ಟಡದಲ್ಲಿಯೇ ಕಚೇರಿ ಕಾರ್ಯನಿರ್ವಹಿಸುತ್ತಿದೆ.
ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ (ಎನ್ಎಚ್–206) ಬದಿ ಇರುವ ಟಿಎಪಿಸಿಎಂಎಸ್ ರೈತ ಭವನ ಕಟ್ಟಡದಲ್ಲಿ ಆರ್ಟಿಒ ಕಚೇರಿ ಇದೆ.
ಆರಂಭದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಇದ್ದರೂ ಇನ್ನೂ ಹೊಸದು, ಸರಿ ಆಗುತ್ತದೆ ಎಂದು ಜನ ಸುಮ್ಮನಿದ್ದರು. ಆಗಿನ ಸಮಸ್ಯೆಗಳ ಜೊತೆ ಮತ್ತಷ್ಟು ಸಮಸ್ಯೆಗಳು ಸೇರಿವೆ. ಸಿಬ್ಬಂದಿ ಕೊರತೆ, ಸ್ಮಾರ್ಟ್ ಕಾರ್ಡ್ ಮುದ್ರಣ ವಿಳಂಬ, ದಲ್ಲಾಳಿಗಳ ಹಾವಳಿದ ಜನರನ್ನು ಹೈರಾಣಾಗಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.