ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಇಲ್ಲವಾಗಿಸುವ ಹುನ್ನಾರ: ಮಾವಳ್ಳಿಶಂಕರ್‌

ಸರ್ವಜನರ– ಸಂವಿಧಾನ ಸಮಾವೇಶ ಉದ್ಘಾಟನಾ ಸಮಾರಂಭ
Last Updated 25 ಸೆಪ್ಟೆಂಬರ್ 2019, 14:33 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಸಂವಿಧಾನದಲ್ಲಿನ ಕಾಯ್ದೆ, ಕಾನೂನುಗಳನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ತಳಸಮುದಾಯಗಳವರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಹೇಳಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಜಿಲ್ಲಾ ಘಟಕದ ವತಿಯಿಂದ ನಗರದ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ‘ಸರ್ವಜನರ– ಸಂವಿಧಾನ ಸಮಾವೇಶ’ (ಸಾಮಾಜಿಕ ಪಾಲುದಾರಿಕೆ ಆಗ್ರಹ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅಂಬೇಡ್ಕರ್‌ ಅವರ ಚಿಂತನೆಗಳನ್ನು ಮರೆಮಾಚುವ ಕೆಲಸ ನಡೆಯುತ್ತಿದೆ. ಮೀಸಲಾತಿ ಇಲ್ಲವಾಗಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಅಪಾಯದ ದಿನಗಳು ಎದುರಾಗಿವೆ’ ಎಂದು ಹೇಳಿದರು.

‘ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದು ಕೆಲವರು ವಾದ ಮಾಡುತ್ತಾರೆ. ಅಂಥವರು ಇತಿಹಾಸವನ್ನು ಸರಿಯಾಗಿ ಓದಿಕೊಳ್ಳಬೇಕು. ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಅನುಗುಣವಾದ ಸಂವಿಧಾನವನ್ನು ಅಂಬೇಡ್ಕರ್‌ ನೀಡಿದ್ದಾರೆ. ಸಂವಿಧಾನ ಜಾರಿಯಾದ ನಂತರವೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು’ ಎಂದರು.

‘ಸಂವಿಧಾನ ಸರಿಯಿಲ್ಲ ಎಂದು ಕೆಲವರು ತಗಾದೆ ತೆಗೆದಿದ್ದಾರೆ. ಪಾರ್ಲಿಮೆಂಟ್‌ ಪಕ್ಕದಲ್ಲಿ ಈಚೆಗೆ ಸಂವಿಧಾನ ಪ್ರತಿಯನ್ನು ಕೆಲವರು ಸುಟ್ಟರು. ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಸಮುದಾಯದವರು ಅಪಾಯದ ಸ್ಥಿತಿಯಲ್ಲಿರುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಕರಣಕ್ಕೆ ವಿರುದ್ಧವಾಗಿದೆ. ಖಾಸಗೀಕರಣ ನೀತಿಯನ್ನು ಪಠಿಸುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ’ ಎಂದರು.

‘ನೆರೆ ಹಾವಳಿಯಿಂದಾಗಿ ರಾಜ್ಯ ಬಹಳಷ್ಟು ಜಿಲ್ಲೆಗಳು ನಲುಗಿವೆ. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದರೂ ಪರಿಹಾರದ ಬಗ್ಗೆ ಚಕಾರ ಎತ್ತಿಲ್ಲ. ರಾಜ್ಯಕ್ಕೆ ಬಿಡಿಗಾಸು ನೆರವನ್ನೂ ಈವರೆಗೂ ಘೋಷಿಸಿಲ್ಲ. ಇದು ಸಂವಿಧಾನ ವಿರೋಧಿ ಕೃತ್ಯ’ ಎಂದು ಹೇಳಿದರು.

‘ಸಂವಿಧಾನ ನಮಗೆ ನೀಡಿರುವ ಹಕ್ಕುಗಳು, ಸವಲತ್ತುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ರಕ್ಷಣೆಯಲ್ಲಿ ನಮ್ಮ ಬದುಕು ಇದೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಮೋಟಮ್ಮ ಮಾತನಾಡಿ, ದಲಿತ ಸಂಘರ್ಷ ಸಮಿತಿ ಸಂಘಟನೆ ಗಟ್ಟಿಯಾಗಿ ಉಳಿದಿಲ್ಲ. ಹಲವರ ಮುಖಂಡತ್ವದಲ್ಲಿ ಒಡೆದುಹೋಗಿದೆ. ಎಲ್ಲರೂ ಒಟ್ಟಾಗಬೇಕು, ಸಂಘಟನೆ ಗಟ್ಟಿಗೊಳಿಸಬೇಕು ಎಂಬುದು ನಮ್ಮ ಆಶಯ ಎಂದರು.

ಅಂಬೇಡ್ಕರ್‌ ಅವರ ಆಶಯಗಳನ್ನು ಈಡೇರಿಸಬೇಕಾದರೆ ಎಲ್ಲರೂ ಒಗ್ಗೂಡಬೇಕು. ದೌರ್ಜನ್ಯಗಳು ಆದಾಗ ಸಾಂಕೇತಿಕವಾಗಿಯಾದರೂ ಪ್ರತಿಭಟನೆ ಮಾಡಬೇಕು. ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಹೋರಾಟ ಮಾರ್ಗ ರೂಪಿಸುವುದು ಮುಖ್ಯ ಎಂದರು.

ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಗಂಗಯ್ಯ, ಬಿಸ್ಲಳ್ಳಿ ಮೂರ್ತಿ, ಬಿ.ಕೆ.ವಸಂತ್‌, ಶ್ರೀನಿವಾಸಮೂರ್ತಿ, ನಂಜುಂಡಯ್ಯ, ಮಲ್ಲೇಶ್‌ ಅಂಬುಗ, ಎಲ್‌.ಚಂದು, ಯು.ಸಿ.ರಮೇಶ್‌, ಕೃಷ್ಣಪ್ಪ, ಕಂಠಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT