ಶನಿವಾರ, ಡಿಸೆಂಬರ್ 3, 2022
26 °C
ಬಿಜೆಪಿ ಜನಸಂಕಲ್ಪ ಯಾತ್ರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

ಹಾಲು ಒಕ್ಕೂಟ; ತಿಂಗಳೊಳಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು (ಚಿಕ್ಕಮಗಳೂರು): ಈ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಪ್ರಕ್ರಿಯೆ ಆರಂಭಕ್ಕೆ ತಿಂಗಳೊಳಗೆ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು. ಬಜೆಟ್‌ನಲ್ಲಿ ಜಿಲ್ಲೆಗೆ ಪ್ರತ್ಯೇಕ

ಹಾಲು ಒಕ್ಕೂಟ ಸ್ಥಾಪನೆ ಘೋಷಣೆ ಮಾಡಲಾಗಿತ್ತು. ಒಕ್ಕೂಟ ಸ್ಥಾಪಿಸಿದರೆ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಮೊದಲ ಹಂತಕ್ಕೆ ಅನುದಾನ ಮಂಜೂರು ಮಾಡಲಾಗಿದೆ. ಎರಡನೇ ಹಂತಕ್ಕೆ ಅನುಮೋದನೆ ನೀಡಲಾಗಿದೆ. ಮೂರನೇ ಹಂತಕ್ಕೂ ಅನುಮೋದನೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಅತಿವೃಷ್ಟಿ ಹಾನಿಗೆ ಒಂದೂವರೆ ತಿಂಗಳಲ್ಲಿ ಪರಿಹಾರ ನೀಡಿದ್ದೇವೆ. ಈ ಜಿಲ್ಲೆಗೂ ಬೆಳೆ ಹಾನಿ ಪರಿಹಾರ ಶೇ 99 ಬಿಡುಗಡೆಯಾಗಿದೆ. ಬೆಳ್ಳಿಪ್ರಕಾಶ್‌ ಅವರು

ಅಪೆಕ್ಸ್‌ ಬ್ಯಾಂಕ್‌ ಮೂಲಕ 32 ಲಕ್ಷ ರೈತರಿಗೆ ₹ 20 ಸಾವಿರ ಕೋಟಿ ಸಾಲ ಒದಗಿಸಿದ್ದಾರೆ ಎಂದು ತಿಳಿಸಿದರು.

ಜಲಜೀವನ್‌ ಮಿಷನ್‌ ಯೋಜನೆ ಯಡಿ ಎರಡು ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ನೀರು ಒದಗಿಸಲಾಗಿದೆ. ಈ ಯೋಜನೆಗೆ ಸರ್ಕಾರ 9 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಒಂದು ವರ್ಷದಲ್ಲಿ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದೇವೆ ಎಂದರು.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಕಾಂಗ್ರೆಸ್‌ನವರ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಹೆಚ್ಚು ಅನ್ಯಾಯವಾಗಿದೆ ಎಂದು ದೂರಿದರು.

ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ 40 ವರ್ಷಗಳ ಬೇಡಿಕೆಯನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈಡೇರಿಸಿದೆ. ದೀನ ದಲಿತರಿಗೆ ಸ್ಪಂದಿಸಿದೆ. ಆರ್ಥಿಕ ಹಿಂದುಳಿದವರಿಗೂ ಶೇ 10 ಮೀಸಲಾತಿ ಕಲ್ಪಿಸಿದೆ ಎಂದರು.

20 ಸಾವಿರ ಕುರಿಗಾರರ ಸಂಘಗಳಿಗೆ 20 ಕುರಿ, ಒಂದು ಮೇಕೆ ಒದಗಿಸಲು ₹ 354 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ತಾಂಡ್ಯಗಳವರಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಿದ್ದೇವೆ ಎಂದು ಹೇಳಿದರು.

ನೀರು ಹಂಚಿಕೆಗೆ ಮೊರೆ: ಭದ್ರಾ ಜಲಾಶಯದಿಂದ ಈ ಭಾಗಕ್ಕೆ ಇನ್ನೊಂದು ಟಿಎಂಸಿ ನೀರು ಹಂಚಿಕೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ವಹಿಸಬೇಕು ಎಂದು ಶಾಸಕ ಬೆಳ್ಳಿ ಪ್ರಕಾಶ್‌ ಕೋರಿದರು.

ಕಡೂರು ಬರದ ನಾಡು. ₹ 1200 ಕೋಟಿ ಭದ್ರಾ ಉಪಕಣಿವೆ ಯೋಜನೆಗೆ ಅನುಮೋದನೆ ನೀಡಿ ಯಡಿಯೂರಪ್ಪ ಉಪಕರಿಸಿದರು. ₹ 400 ಕೋಟಿ ಮೊತ್ತದ ಮೊದಲ ಹಂತದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಎರಡನೇ ಹಂತಕ್ಕೂ ಚಾಲನೆ ದೊರೆಯಲಿದೆ. ಭದ್ರಾ ನದಿಯಿಂದ ₹1829 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲ ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 21 ಚೆಕ್ ಡ್ಯಾಂ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು