ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕಾಫಿನಾಡಿನ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

Last Updated 28 ಅಕ್ಟೋಬರ್ 2020, 13:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ಮೂವರು ಈ ಬಾರಿಯ ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಿಂದ ಎಂ.ಎನ್‌.ಷಡಕ್ಷರಿ, ಸಮಾಜ ಸೇವೆ ಕ್ಷೇತ್ರದಿಂದ ಪ್ರೇಮಾ ಕೋದಂಡರಾಮ ಶ್ರೇಷ್ಠಿ ಮತ್ತು ಮೋಹಿನಿ ಸಿದ್ದೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.


ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಕಾಯಕ…

ಷಡಕ್ಷರಿ ಅವರು ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿಯ ಎಂ.ನಂಜಪ್ಪ ಶೆಟ್ಟಿ ಮತ್ತು ಪಾರ್ವತಮ್ಮ ದಂಪತಿ ಪುತ್ರ.

ಬಿ.ಎಸ್ಸಿ, ಬಿ.ಇಡಿ, ಎಂ.ಎ ಪದವೀಧರ. ನಗರದ ಮೌಂಟೆನ್‌ ವ್ಯೂ ವಿದ್ಯಾಲಯದಲ್ಲಿ 23 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ಉಪ್ಪಳ್ಳಿಯ ಮಾಡೆಲ್ ಇಂಗ್ಲಿಷ್‌ ಶಾಲೆಯ ಸಂಸ್ಥಾಪಕರೂ ಆಗಿರುವ ಅವರು ಪ್ರಾಚಾರ್ಯರಾಗಿ ನಿವೃತ್ತಿಯಾಗಿದ್ದಾರೆ.

ಸ್ಕೌಟ್‌ ಶಿಕ್ಷಕರಾಗಿಯೂ ಛಾಪು ಮೂಡಿಸಿದ್ದಾರೆ. ಥಾಯ್ಲೆಂಡ್‌ ಜಾ–ಆಮ್‌ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ರಾಷ್ಟ್ರೀಯ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ಕೌಟ್‌ ಮತ್ತು ಗೈಡ್‌ನ ಜಿಲ್ಲಾ ಮುಖ್ಯಸ್ಥರಾಗಿದ್ದಾರೆ. ಸ್ಕೌಟ್‌ ಮತ್ತು ಗೈಡ್‌ ಕ್ಷೇತ್ರದ ಸಾಧನೆಗೆ 2011ರಲ್ಲಿ ರಾಷ್ಟ್ರಪತಿಯವರಿಂದ ‘ಸಿಲ್ವರ್‌ ಸ್ಟಾರ್‌’ ಪುರಸ್ಕಾರ ಪಡೆದಿದ್ದಾರೆ.

ಸ್ಯಾಂಚುರಿ ಮ್ಯಾಗಜಿನ್‌ನ ‘ಗ್ರೀನ್‌ ಟೀಚರ್‌’ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಜಿಲ್ಲಾ ವಿಜ್ಞಾನ ಕೇಂದ್ರದ ‘ಜಿಲ್ಲಾ ವಿಜ್ಞಾನ ಪ್ರಶಸ್ತಿ’, ವೈಲ್ಡ್‌ ಕ್ಯಾಟ್‌–‘ಸಿ’ ಸಂಸ್ಥೆಯ ‘ಪರಿಸರ ಶಿಕ್ಷಕ ಪ್ರಶಸ್ತಿ’ ಮೊದಲಾದ ಪುರಸ್ಕಾರಗಳು ಸಂದಿವೆ.

ಅಂಚೆ ಚೀಟಿ, ನಾಣ್ಯ, ಶಂಖ, ಚಿಪ್ಪು ಸಂಗ್ರಹ ಇವರ ಹವ್ಯಾಸ. ಸ್ಕೌಟಿಂಗ್‌ ಮತ್ತು ಪರಿಸರ ವಿಚಾರ ಕುರಿತು ಪತ್ರಿಕೆ, ನಿಯತಕಾಲಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.

ಕಸ್ತೂರಿ ಬಾ ಸದನದ ಸಾರಥ್ಯ...

ಮೋಹಿನಿ ಸಿದ್ದೇಗೌಡ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಅಂಜುಗೊಂಡನಹಳ್ಳಿಯ ಮಲ್ಲೇಗೌಡ ಮತ್ತು ಕಾಳಮ್ಮ ದಂಪತಿ ಪುತ್ರಿ. ಬೇಲೂರು ತಾಲ್ಲೂಕು ಬೆಣ್ಣೂರು ಗ್ರಾಮದ ಕೆಇಬಿ ಎಂಜಿನಿಯರ್‌ ಸಿದ್ದೇಗೌಡ ಅವರ ಪತ್ನಿ.

42ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಸಮಾಜ ಕಾರ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಶಶಿಕಲಾ ರಮೇಶ್‌ ಅವರು ಸ್ಥಾಪಿಸಿದ ಕಸ್ತೂರಿ ಬಾ ಸದನ ಕೌಟುಂಬಿಕ ಸಲಹಾ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಸತತ37 ವರ್ಷಗಳಿಂದ ಸಂಸ್ಥೆಯ ಸಾರಥ್ಯ ವಹಿಸಿದ್ದಾರೆ.

ಕೌಟುಂಬಿಕ ಕಲಹ, ದೌರ್ಜನ್ಯಗಳಿಗೆ ಸಂಬಂಧಿಸಿದ ಸಹಸ್ರಾರು ಪ್ರಕರಣಗಳನ್ನು ಸಂಸ್ಥೆಯಲ್ಲಿ ನಿರ್ವಹಿಸಿದ್ದಾರೆ.

ವಿದ್ಯುಚ್ಛಕ್ತಿ ಮಂಡಳಿಯ ಮಹಿಳೆಯರ ಕ್ಲಬ್‌ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಿಮ್ಯಾಂಡ್‌ ಹೋಂ ಸದಸ್ಯರಾಗಿ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯರಾಗಿ, ಚಿಕ್ಕಮಗಳೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಸುವರ್ಣಾದೇವಿ ಪ್ರಶಸ್ತಿ, ಜಾಗೃತಿ ಸಂಘದ ಮಹಿಳಾ ರತ್ನ ಪ್ರಶಸ್ತಿಗಳು ಸಂದಿವೆ.

ಅಧ್ಯಾತ್ಮ ಕೈಂಕರ್ಯ, ಗಾಯನ ಸುಧೆ...

ಪ್ರೇಮಾ ಕೋದಂಡರಾಮ ಶ್ರೇಷ್ಠಿ ಅವರು ಕೋಲಾರ ಜಿಲ್ಲೆಯ ಮಂಚೇನಹಳ್ಳಿಯ ತಲ್ಲಂ ದೊಡ್ಡನಾರಾಯಣ ಶ್ರೇಷ್ಠಿ ಮತ್ತು ಅನ್ನಪೂರ್ಣಮ್ಮ ದಂಪತಿ ಪುತ್ರಿ. ಚಿಕ್ಕಮಗಳೂರಿನ ಕೋದಂಡರಾಮ ಶ್ರೇಷ್ಠಿ ಪತ್ನಿ.

ಪ್ರೇಮಾ ಕೋದಂಡರಾಮ ಶ್ರೇಷ್ಠಿ

ಎಲ್‌ಎಸ್‌ ಪರೀಕ್ಷೆ ಪಾಸು ಮಾಡಿದ್ದಾರೆ. 15ನೇ ವಯಸ್ಸಿನಿಂದಲೇ ಮಕ್ಕಳಿಗೆ ‘ಭಗವದ್ಗೀತೆ’ ಕಲಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ, ಕೇರಳ, ತಮಿಳುನಾಡು ಸಹಿತ ವಿವಿಧ ರಾಜ್ಯಗಳಲ್ಲಿ ಧಾರ್ಮಿಕ ಪ್ರವಚನಗಳನ್ನು ನೀಡಿದ್ದಾರೆ.

ಪ್ರತಿ ವರ್ಷ ಗೀತಾಜ್ಞಾನ ಯಜ್ಞ ಆಯೋಜಿಸುತ್ತಾರೆ. ಮನೆಯಲ್ಲೇ ಗೀತಾ ತರಗತಿ, ಆಧ್ಯಾತ್ಮಿಕ ಸಾಹಿತ್ಯ ಗೋಷ್ಠಿಗಳನ್ನು ನಡೆಸುತ್ತಾರೆ. ಈವರೆಗೆ ಸಹಸ್ರಾರು ಮಂದಿಗೆ ಗೀತಾ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದ್ದಾರೆ, ಬೋಧನೆ ಮಾಡಿದ್ದಾರೆ.

ಪ್ರೇಮಾ ಅವರು ಸಂಗೀತ ಕಲಾವಿದೆ, ಗಮಕಿ, ಆಶುಕವಿಯೂ ಆಗಿದ್ದಾರೆ. ದೇವರನಾಮ, ಭಜನೆಗಳನ್ನು ರಚಿಸಿ ಹಾಡಿದ್ದಾರೆ. ‘ಪರಮಾರ್ಥ’ ಕಥಾಗುಚ್ಛ ಕೃತಿ ಬರೆದಿದ್ದಾರೆ.

ಚಿದಾನಂದ ಮಹಾರಾಜ್‌ ಜೀ ಅವರಿಂದ ‘ಗುರು ಭಕ್ತಿ ರತ್ನ’ ಬಿರುದು ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT