ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ‘ಶಕ್ತಿ’ ಯೋಜನೆ: ಬಸ್‌ನಲ್ಲಿ ಸೀಟಿಗಾಗಿ ಪರದಾಟ

ರಘು ಕೆ.ಜಿ
Published : 9 ಫೆಬ್ರುವರಿ 2024, 6:14 IST
Last Updated : 9 ಫೆಬ್ರುವರಿ 2024, 6:14 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಶಕ್ತಿ ಯೋಜನೆ ಜಾರಿ ಬಳಿಕ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಬಸ್‌ಗಳಲ್ಲಿ ಆಸನ ಸಿಗದೆ ವಿದ್ಯಾರ್ಥಿಗಳು ಮತ್ತು ವಯೋವೃದ್ಧರು ಪರದಾಡುವ ಸ್ಥಿತಿ ಇದೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯ ಪ್ರಕೃತಿ ಮತ್ತು ಧಾರ್ಮಿಕ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಕಳಸ, ಮುಳ್ಳಯ್ಯನಗಿರಿ ಮೊದಲಾದ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಲು ಬಳ್ಳಾರಿ, ಚಿತ್ರದುರ್ಗ, ಬೆಳಗಾವಿ, ಕಲಬುರಗಿ ಸಹಿತ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರವಾಸಿಗರು ಹರಿದು ಬರುತ್ತಿದ್ದಾರೆ. 

ಕಳೆದ ವರ್ಷಕ್ಕೆ ಹೋಲಿಸಿದರೆ 19 ಲಕ್ಷ ಹೆಚ್ಚುವರಿ ಪ್ರಯಾಣಿಕರು ಜಿಲ್ಲೆಗೆ ಬಂದು ಹೋಗಿದ್ದಾರೆ. ಧರ್ಮಸ್ಥಳ, ಶೃಂಗೇರಿ ಮಾರ್ಗದಿಂದ ಬರುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಿ ತುಳುಕುತ್ತದೆ. ಉಚಿತ ಪ್ರಯಾಣದ ಕಾರಣ ಮಹಿಳೆಯರ ಸಂಖ್ಯೆ ಅಧಿಕವಾಗಿರುತ್ತದೆ. ಜಿಲ್ಲಾ ಕೇಂದ್ರದಿಂದ ಹಣ ಕೊಟ್ಟು ಟಿಕೆಟ್ ಖರೀದಿಸಿ ರಾತ್ರಿ ವೇಳೆ ದೂರದ ಜಿಲ್ಲೆಗಳಿಗೆ ಪ್ರಯಾಣ ಮಾಡುವ ಉದ್ಯೋಗಸ್ಥರು, ಪುರುಷರು, ಹಿರಿಯರು ಬಸ್‌ಗಳಲ್ಲಿ ಸೀಟ್ ಸಿಗದೆ ನಿಂತು ಕೊಂಡೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಶಕ್ತಿ ಯೋಜನೆ ಜಾರಿ ಆದಾಗಿನಿಂದ 2024ರ ಜ. 31 ರವರೆಗೆ ಅರಸೀಕೆರೆ, ಸಕಲೇಶಪುರ, ಕಡೂರು, ಮೂಡಿಗೆರೆ, ಬೇಲೂರು ಒಳಗೊಂಡಂತೆ ಚಿಕ್ಕಮಗಳೂರು ಸಾರಿಗೆ ವಿಭಾಗದಲ್ಲಿ ಪ್ರತಿ ದಿನ ಸರಾಸರಿ 1,17 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಆದರಿಂದ ನಿತ್ಯ ಒಟ್ಟು ₹41,73,550 ವರಮಾನ ಗಳಿಕೆಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಸರ್ಕಾರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ತಂದಿರುವ ಒಳ್ಳೆಯದೆ. ಆದರೆ, ಇದರಿಂದ ಆಟೊ ಚಾಲಕರು ಕಷ್ಟಕ್ಕೆ ಸಿಲುಕಿದ್ದಾರೆ. ದುಬಾರಿ ಜೀವನದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಆಟೊ ಚಾಲಕ ಸತೀಶ್ ಗೋಳು ತೋಡಿಕೊಂಡರು.

ಈ ಹಿಂದೆ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಟೊರಿಕ್ಷಾಗಳನ್ನು ಅವಲಂಬಿಸಿದ್ದರು. ಈಗ ಕಡಿಮೆಯಾಗಿದೆ. ದಿನಕ್ಕೆ ಕನಿಷ್ಠ ₹700 ಇದ್ದ ವರಮಾ ₹300ಕ್ಕೆ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯೋಜನೆ ಜಾರಿಯಾದ ಬಳಿಕ ಕೆಎಸ್‌ಆರ್‌ಟಿಸಿಗೆ ವರಮಾನ ಹೆಚ್ಚಾಗುತ್ತಿದೆ. ಆದ್ದರಿಂದ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಒತ್ತಡ ಕಡಿಮೆ ಮಾಡಬೇಕು ಎಂಬುದು ಪ್ರಯಾಣಿಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT