ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಪರೀಕ್ಷೆ: ಜಿಲ್ಲಾ ಕೇಂದ್ರವೇ ಗತಿ

ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರ ಆರಂಭಿಸಲು ರೈತರ ಆಗ್ರಹ
Last Updated 11 ನವೆಂಬರ್ 2020, 5:38 IST
ಅಕ್ಷರ ಗಾತ್ರ

ನರಸಿಂಹರಾಜಪುರ: ರೈತರು ತಮ್ಮ ಜಮೀನಿನ ಮಣ್ಣಿನ ಫಲವತ್ತತೆ ಮತ್ತು ಪೌಷ್ಟಿಕಾಂಶಗಳನ್ನು ಕಾಪಾಡಿಕೊಂಡು ಮಣ್ಣಿಗೆ ಸರಿಹೊಂದುವಂತಹ ಬೆಳೆ ಬೆಳೆಯಲು ಅನುಕೂಲವಾಗುವ ದೃಷ್ಟಿಯಿಂದ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರವನ್ನು ತಾಲ್ಲೂಕು ಕೇಂದ್ರದಲ್ಲಿ ಸ್ಥಾಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಆಹಾರ ಬೆಳೆ ಭತ್ತ, ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್, ಶುಂಠಿ, ಕಾಳುಮೆಣಸು ಮತ್ತಿತರ ಬೆಳೆ ಬೆಳೆಯಲಾಗುತ್ತಿದೆ. ಮಲೆನಾಡಿನ ಭಾಗದಲ್ಲಿ ಅತಿಹೆಚ್ಚು ಮಳೆಯಾಗುವುದರಿಂದ ಮಣ್ಣಿನ ಪೌಷ್ಟಿಕಾಂಶ ಕೊಚ್ಚಿ ಹೋಗುತ್ತದೆ. ಇಳುವರಿ ಪ್ರಮಾಣದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಮಣ್ಣಿನಲ್ಲಿರುವ ಪೌಷ್ಟಿಕಾಂಶ ಕೊರತೆಯನ್ನು ನೀಗಿಸುವುದು ಅವಶ್ಯಕ. ಪ್ರತಿ ವರ್ಷವೂ ಬೆಳೆ ಕಟಾವು ಆದ ಕೂಡಲೇ ಮಣ್ಣು ಪರೀಕ್ಷೆ ಮಾಡಿಸಿದರೆ ಮಳೆಗಾಲದ ಆರಂಭದಲ್ಲಿ ಮಣ್ಣಿಗೆ ಪೋಷಕಾಂಶ ಒದಗಿಸಲು ಸಹಾಯಕವಾಗುತ್ತದೆ.

ಈ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಮಾಡಿಸಲು ರೈತರು 90 ಕಿ.ಮೀ ದೂರವಿರುವ ಚಿಕ್ಕಮಗಳೂರು, 55 ಕಿ.ಮೀ ದೂರದ ಶಿವಮೊಗ್ಗಕ್ಕೆ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಹೀಗಾಗಿ, ಬಹುತೇಕ ರೈತರು ಇದರ ಗೋಜಿಗೆ ಹೋಗದೆ ಹಿಂದೆ ಬಳಸಿದ ಗೊಬ್ಬರವನ್ನೇ ಹಾಕುವ ಮೂಲಕ ನಷ್ಟ ಅನುಭವಿಸುವ ಸ್ಥಿತಿಯಿದೆ.

‘ಮಣ್ಣಿನಲ್ಲಿರುವ ಪಿಎಚ್ ಮಟ್ಟ, ಎಂಪಿಕೆ ಮತ್ತಿತರ ಪೌಷ್ಟಿಕಾಂಶ ಹಾಗೂ ಸೂಕ್ಷ್ಮಾಣು ಜೀವಿಗಳ ಕೊರತೆ ಬಗ್ಗೆ ಮಾಹಿತಿ ಬೇಕಾದಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಹೋಗಿ ಫಲಿತಾಂಶ ಪಡೆಯಲು ಬಹಳ ಸಮಯ ತಗಲುತ್ತದೆ. ತಾಲ್ಲೂಕು ಕೇಂದ್ರದಲ್ಲಿ ಸ್ಥಾಪಿಸಿದರೆ ಸಮಯ ಮತ್ತು ವೆಚ್ಚ ಉಳಿತಾಯವಾಗುತ್ತದೆ, ಅಧಿಕಾರಿಗಳೊಂದಿಗೆ ನೇರ ಸಂಪರ್ಕ ಸಾಧ್ಯ’ ಎನ್ನುತ್ತಾರೆ ರೈತ ಸುನಿಲ್.

‘ಇಲಾಖೆಯಿಂದ ವೈಜ್ಞಾನಿಕವಾಗಿ ಮಣ್ಣು ಸಂಗ್ರಹಿಸಿ ಮಣ್ಣು ಪರೀಕ್ಷೆ ಮಾಡಿಸಿ ಫಲಿತಾಂಶ ರೈತರಿಗೆ ತಲುಪಿಸಲಾಗುತ್ತದೆ. ಇದಕ್ಕೆ ₹ 200 ಪಾವತಿಸಬೇಕಾಗುತ್ತದೆ. ತಾಲ್ಲೂಕು ಕೇಂದ್ರದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಲು ನಿರ್ವಹಣಾ ವೆಚ್ಚ ಅಧಿಕವಾಗುತ್ತದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕಿ ಅರ್ಪಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT