ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ರಸ್ತೆ ಸಂಪರ್ಕ ಕಡಿತದ ಭೀತಿ

ಗುಲಗುಂಜಿಮನೆ, ಕೊರಕ್ಕನಹಳ್ಳ ಸೇತುವೆಗಳು ಶಿಥಿಲ
Last Updated 3 ಮೇ 2022, 5:21 IST
ಅಕ್ಷರ ಗಾತ್ರ

ಶೃಂಗೇರಿ: ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ- 169ರಲ್ಲಿರುವ ಗುಲಗುಂಜಿಮನೆ ಸೇತುವೆ ಮತ್ತು ಕೊರಕ್ಕನಹಳ್ಳ ಸೇತುವೆಗಳು ಶಿಥಿಲವಾಗಿದ್ದು, ಅಪಾಯಕಾರಿ ಹಂತದಲ್ಲಿವೆ.

ಕೇವಲ 3.5 ಮೀ ಅಗಲವಾಗಿರುವ ಈ ರಸ್ತೆ ಮತ್ತು ಸೇತುವೆಯಲ್ಲಿ ಭಾರೀ ವಾಹನ ಚಲಿಸಬೇಕಾದರೆ ಚಾಲಕ ಹರಸಾಹಸಪಡಬೇಕು. ಎದುರಿಗೆ ಮತ್ತೊಂದು ವಾಹನ ಬಂದರೆ ಚಾಲಕ ಎಚ್ಚರಿಕೆಯಿಂದ ಸಾಗಬೇಕು. ಕೊಂಚ ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿ ಹೊಸ ಸೇತುವೆ ನಿರ್ಮಾಣವಾಗಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಇನ್ನೂ ಈಡೇರಿಲ್ಲ.

1955ರಲ್ಲಿ ಮುಖ್ಯಮಂತ್ರಿಯಾಗಿದ್ದ ಹನುಮಂತಯ್ಯ ಈ ಎರಡು ಸೇತುವೆ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 1960 ಮೇ 18ರಿಂದ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭಗೊಂಡಿತ್ತು. ಪ್ರಸ್ತುತ ಶೃಂಗೇರಿ ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮಳೆ ಪ್ರಾರಂಭಗೊಂಡರೆ ಸಾಕು ತಗ್ಗು ರಸ್ತೆಗಳು ನೀರಿನಿಂದ ಆವೃತ್ತಗೊಂಡು ಜನ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಸೇತುವೆಗಳು ತುಂಡಾಗಿ ಹೋದರೆ ಕೆರೆಕಟ್ಟೆ ಭಾಗದ ಗ್ರಾಮೀಣ ಪ್ರದೇಶದ ಜನರು ಪಟ್ಟಣಕ್ಕೆಂದು 37 ಕಿ.ಮೀ ಚಲಿಸಿ ಕಾರ್ಕಳಕ್ಕೆ ತೆರಳಬೇಕಾಗುತ್ತದೆ.

ಕೆರೆಕಟ್ಟೆ ರಸ್ತೆ ಶೃಂಗೇರಿ ಕ್ಷೇತ್ರದ ಪಾಲಿಗೆ ಜೀವನಾಡಿ. ರೈತರು, ವರ್ತಕರು, ಶೃಂಗೇರಿ ಮಠಕ್ಕೆ ಬರುವ ಯಾತ್ರಾರ್ಥಿಗಳು, ಆಸ್ಪತ್ರೆಗೆ ಹೋಗುವ ರೋಗಿಗಳು ಹೀಗೆ ಸಾವಿರಾರು ಜನ ಅನಿವಾರ್ಯವಾಗಿ ಇದೇ ರಸ್ತೆಯನ್ನು ನಿತ್ಯ ಬಳಸುತ್ತಾರೆ. ಕಾರ್ಕಳ ಮತ್ತು ಮಂಗಳೂರಿನಿಂದ ಇಟ್ಟಿಗೆ, ಟೈಲ್ಸ್, ಗ್ಯಾಸ್ ಸಿಲಿಂಡರ್ ಮುಂತಾದ ದಿನನಿತ್ಯದ ವಸ್ತುಗಳನ್ನು ತರಲು ಸಾವಿರಾರು ಲಾರಿಗಳು ಈ ರಸ್ತೆ ಮತ್ತು ಸೇತುವೆಯನ್ನು ಬಳಸುತ್ತಾರೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ರೋಗಿಯನ್ನು ಕರೆದುಕೊಂಡು ಬರುವ ಸ್ಥಿತಿ ಬಂದರೆ ಪ್ರಯಾಣ ಮಾಡುವುದು ಅತ್ಯಂತ ಪ್ರಯಾಸ ಎಂದು ಖಾಸಗಿ ಆಂಬುಲೆನ್ಸ್ ಚಾಲಕ ಸುರೇಶ್ ಹೇಳುತ್ತಾರೆ.

ಆ ರಸ್ತೆಯಲ್ಲಿ ಜನರ ಓಡಾಟ ವಿಪರೀತವಾಗಿದ್ದು ಶೃಂಗೇರಿ ಮಠಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕಾರ್ಕಳ, ಮೂಡುಬಿದಿರೆ, ಕಾಸರಗೋಡು ಮುಂತಾದ ಕೇಂದ್ರಗಳಿಗೆ ತಲುಪಲು ಸಮೀಪದ ರಸ್ತೆ ಇದಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸೇತುವೆ ಮರು ನಿರ್ಮಾಣ ಮಾಡಬೇಕು ಎಂದು ಸ್ಥಳೀಯರಾದ ದೀಪಕ್ ನೆಮ್ಮಾರ್, ಪುಟ್ಟಪ್ಪ ಹೆಗ್ಡೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT