ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಮಠದೊಳಗೆ ರಥೋತ್ಸವ

ಮಹಾರಥೋತ್ಸವ, ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಇಲ್ಲ
Last Updated 17 ಅಕ್ಟೋಬರ್ 2021, 3:47 IST
ಅಕ್ಷರ ಗಾತ್ರ

ಶೃಂಗೇರಿ: ಶೃಂಗೇರಿಯಲ್ಲಿ ಶನಿವಾರ ಶಾರದಾಂಬೆಯ ರಥೋತ್ಸವ ಶಾರದಾ ಮಠದ ಒಳಗಡೆ ವಿದ್ಯಾಶಂಕರ ದೇವಾಲಯ ಸುತ್ತ ನಡೆಯಿತು.

ಜಯಘೋಷ, ವಿಪ್ರರ ವೇದ ಘೋಷ, ಮಂತ್ರ ಪಠಣದೊಂದಿಗೆ ಸೇರಿದ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು. ನವರಾತ್ರಿಯ ಒಂಬತ್ತು ದಿನ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಿದ ಶಾರದೆಗೆ, ಶನಿವಾರ ಗಜಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.

ಶಾರದಾ ಮಠದ ಗುರುಗಳಾದ ಭಾರತಿ ತೀರ್ಥ ಸ್ವಾಮೀಜಿ ಬೆಳಗಿನ ಆಹ್ನಿಕ ಮುಗಿಸಿ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

ಕಿರಿಯ ಗುರುಗಳಾದ ವಿಧುಶೇಖರ ಭಾರತಿ ಸ್ವಾಮೀಜಿ ಗುರುನಿವಾಸದಲ್ಲಿ ಚಂದ್ರಮೌಳೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಕಾಲ್ನಡಿಗೆಯಲ್ಲಿ ಆಗಮಿಸಿ, ತುಂಗಾ ನದಿಯನ್ನು ದೋಣಿಯಲ್ಲಿ ದಾಟಿ, ಗಂಗಾ ಪೂಜೆ ನೆರವೇರಿಸಿದರು. ನಂತರ ಶಾರದ ಮಠದ ಹೊರ ಪ್ರಾಕಾರದ ಎಲ್ಲ ದೇವಾಲಯ, ಮಂದಿರಗಳಿಗಳಲ್ಲಿ ಪೂಜೆ ಸಲ್ಲಿಸಿದರು.

ಪ್ರತಿ ವರ್ಷ ನಡೆಯುವ ವಿಧುಶೇಖರಭಾರತಿ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಭಾರತಿ ಬೀದಿಯ ಮಹಾರಥೋತ್ಸವ ಕೋವಿಡ್ ಕಾರಣದಿಂದ ನಡೆಸಲಿಲ್ಲ. ಶಾರದಾ ಸನ್ನಿಧಿಯಲ್ಲಿ ಹಗಲು ದರ್ಬಾರ್ ನಡೆಯಿತು. ವಿಧುಶೇಖರ ಭಾರತಿ ಸ್ವಾಮೀಜಿ ಸಿಂಹಾಸನದಿಂದ ಭಕ್ತರನ್ನು ಆಶೀರ್ವದಿಸಿದರು.

ಚಾತುರ್ವೇದ ಪಾರಾಯಣ, ವಾಲ್ಮಿಕಿ ರಾಮಾಯಣ, ದೇವಿ ಭಾಗವತ, ಶಂಕರ ದಿಗ್ವಿಜಯ ಪಾರಾಯಣಗಳು ನಡೆದವು. ದೇವಿ ಸಪ್ತಶತಿಯ ಕೊನೆಯ 13ನೇ ಅಧ್ಯಾಯವನ್ನು ಮಠದ ವಿದ್ವಾಂಸ ಶಿವಕುಮಾರ ಶರ್ಮ ವಾಚಿಸಿದರು. ಚಿನ್ನದ ರಥದಲ್ಲಿ ಶಾರದ ದೇವಿಯನ್ನು ಪ್ರತಿಷ್ಠಾಪಿಸಿ, ದೇವಸ್ಥಾನದ ಒಳ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು.

ಸಾವಿರಾರು ಭಕ್ತರು ಶಾರದಾ ಮಠಕ್ಕೆ ಭೇಟಿ ನೀಡಿ ಶಾರದೆ ದರ್ಶನ, ಭಾರತೀತೀರ್ಥ ಸ್ವಾಮೀಜಿ, ವಿಧುಶೇಖರಭಾರತಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರಿಶಂಕರ್, ಶಾಸಕ ಟಿ.ಡಿ ರಾಜೇಗೌಡ, ಮಠದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT